ನವದೆಹಲಿ: ಕೇರಳದಲ್ಲಿ ಯುಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ದೆಹಲಿಯ ಕೇರಳ ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ಆಡಳಿತಾತ್ಮಕ ಸಾಧನೆಗಳನ್ನು ವಿವರಿಸಿದರು. ಇದೇ ವೇಳೆ ಮಾಧ್ಯಮ ವರದಿಗಳು ಮತ್ತು ಪ್ರತಿಪಕ್ಷಗಳ ಆರೋಪಗಳಿಗೆ ತೀಕ್ಷ್ಣವಾಗಿ ಉತ್ತರಿಸಿದರು.
ಆರು ತಿಂಗಳ ಪ್ರಮುಖ ಆಡಳಿತಾತ್ಮಕ ಸಾಧನೆಗಳು: ರಾಜ್ಯದ ಆರ್ಥಿಕ ಭದ್ರತೆ, ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳಿಗೆ ಕಳೆದ ಆರು ತಿಂಗಳಲ್ಲಿ ಭದ್ರ ಬುನಾದಿ ಹಾಕಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದರು.
ಜನಕಲ್ಯಾಣ ಯೋಜನೆಗಳು: ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸುವ 'ಪ್ರಿಯದರ್ಶಿನಿ ಯೋಜನೆ', ದೇಶದಲ್ಲೇ ಮೊದಲ ಬಾರಿಗೆ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಸಚಿವಾಲಯ, ಆಶಾ ಕಾರ್ಯಕರ್ತೆಯರು ಮತ್ತು ಬಿಸಿಯೂಟದ ಅಡುಗೆಯವರ ವೇತನ ಹೆಚ್ಚಳ ಹಾಗೂ ರಾಜ್ಯದ ಆರ್ಥಿಕ ಸ್ಥಿತಿಗತಿ ಕುರಿತ ಶ್ವೇತಪತ್ರ ಬಿಡುಗಡೆ ಸರ್ಕಾರದ ಪ್ರಮುಖ ಹೆಜ್ಜೆಗಳಾಗಿವೆ. ಡಿಸೆಂಬರ್ ಮೊದಲ ವಾರದಲ್ಲಿ ದಿವ್ಯಾಂಗರಿಗಾಗಿ ವಿಶೇಷ ಯೋಜನೆ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಬೃಹತ್ ಯೋಜನೆಗಳು ಮತ್ತು ಕಾನೂನುಗಳು: ಕೇರಳವನ್ನು ಬಂದರು ನಗರವಾಗಿ ಪರಿವರ್ತಿಸುವ 'ಮಿಷನ್ ಸಮುದ್ರ' ಯೋಜನೆಗಾಗಿ ಮ್ಯಾರಿಟೈಮ್ ಕಾಯ್ದೆ ಮತ್ತು ಕೈಗಾರಿಕಾ ಸ್ನೇಹಿ ವಾತಾವರಣಕ್ಕಾಗಿ 'ಸರಳ್ ಕೇರಳಂ' ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಕೊಚ್ಚಿಯಲ್ಲಿ ಓಷನೇರಿಯಂ, ಅಂತಾರಾಷ್ಟ್ರೀಯ ಮ್ಯಾರಿಟೈಮ್ ಮ್ಯೂಸಿಯಂ, ಫಿಲ್ಮ್ ಸಿಟಿ ಹಾಗೂ ಸಿಂಗಾಪುರ ಮಾದರಿಯ ಗ್ಲೋಬಲ್ ಕನ್ವೆನ್ಷನ್ ಸೆಂಟರ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
100 ದಿನಗಳ ಕ್ರಿಯಾಯೋಜನೆ ಮತ್ತು ಕ್ರೀಡೆ: 100 ದಿನಗಳ ಕ್ರಿಯಾಯೋಜನೆಯಲ್ಲಿ ಘೋಷಿಸಲಾದ 588 ಯೋಜನೆಗಳಲ್ಲಿ 568 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಕಡತಗಳ ತ್ವರಿತ ವಿಲೇವಾರಿಗಾಗಿ ಕೃತಕ ಬುದ್ಧಿಮತ್ತೆ (AI) ಆಧಾರಿತ 'ಜನಸ್ಪರ್ಶಂ' ಕಾರ್ಯಕ್ರಮ ಆರಂಭಿಸಲಾಗಿದೆ. ಕ್ರೀಡಾಪಟುಗಳ ಏಳು ವರ್ಷಗಳ ಬಾಕಿ ಮೊತ್ತವನ್ನು ತೀರಿಸಲು 900 ಮಂದಿಗೆ 1.5 ಕೋಟಿ ರೂ. ವಿತರಿಸಲಾಗಿದ್ದು, ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರ ಬಹುಮಾನ ಮೊತ್ತವನ್ನು 50 ಲಕ್ಷ ರೂ.ಗೆ ಏರಿಸಲಾಗಿದೆ.
"ಇದು ಪಿಣರಾಯಿ ಅವರಂತ ವಿಧೇಯರ ಸಂಪುಟವಲ್ಲ": ಸಚಿವ ಸಂಪುಟ ಸಭೆಯಲ್ಲಿ ಭಿನ್ನಾಭಿಪ್ರಾಯ ತಲೆದೋರಿದೆ ಎಂಬ ಮಾಧ್ಯಮ ವರದಿಗಳನ್ನು ಸಿಎಂ ತಳ್ಳಿಹಾಕಿದರು. "ಇದು ಪಿಣರಾಯಿ ವಿಜಯನ್ ಅವರ ಕಾಲದಂತೆ ಜೇಬಿನಿಂದ ಚೀಟಿ ತೆಗೆದು ಕೊಟ್ಟಾಗಲೆಲ್ಲಾ ತಲೆಯಾಡಿಸುವ ವಿಧೇಯರ ಸಂಪುಟವಲ್ಲ. ಅಭಿಪ್ರಾಯ ಭೇದಗಳು ಮತ್ತು ಮುಕ್ತ ಚರ್ಚೆಗಳು ಪ್ರಜಾಪ್ರಭುತ್ವದ ಸೌಂದರ್ಯ" ಎಂದು ವ್ಯಾಖ್ಯಾನಿಸಿದರು. ಉನ್ನತ ಶಿಕ್ಷಣ ಮಸೂದೆ ಮತ್ತು ಎಲ್‌ಪಿಎಸ್‌ಟಿ (LPST) ಪ್ರತಿಭಟನೆ ಕುರಿತು ಸುದೀರ್ಘ ಚರ್ಚೆ ನಡೆದಿದ್ದು, ಪ್ರತಿಭಟನಾಕಾರರ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ಕಾಳಜಿಯಿದೆ ಹಾಗೂ ಮಾತುಕತೆಗೆ ಸದಾ ಸಿದ್ಧವಿದೆ ಎಂದರು.
ಆರೋಪಗಳಿಗೆ ತಿರುಗೇಟು:
ಗುರುವಾಯೂರು ದೇವಸ್ವಂ ನೇಮಕಾತಿ: ನೇಮಕಾತಿ ಕಡತವನ್ನು ಸಿಎಂ ಕಚೇರಿಯಲ್ಲಿ ಏಕಪಕ್ಷೀಯವಾಗಿ ಸಿದ್ಧಪಡಿಸಲಾಗಿದೆ ಎಂಬ ಸುದ್ದಿ ಶುದ್ಧ ಸುಳ್ಳು. ದೇವಸ್ವಂ ಇಲಾಖೆಯಿಂದಲೇ ಕಡತ ಬಂದಿದ್ದು, ಸಂಪುಟ ಸಭೆಗೂ ಮುನ್ನವೇ ಎಲ್ಲಾ ಹಿಂದೂ ಸಚಿವರು ಅದಕ್ಕೆ ಸಹಿ ಹಾಕಿದ್ದರು ಎಂದು ಸ್ಪಷ್ಟಪಡಿಸಿದರು.
ವಿದ್ಯುತ್ ಒಪ್ಪಂದದ ಅಕ್ರಮ ಆರೋಪ: ಪ್ರತಿಪಕ್ಷ ನಾಯಕರು ಮಾಡಿರುವ 250 ಕೋಟಿ ರೂ. ಭ್ರಷ್ಟಾಚಾರ ಆರೋಪವನ್ನು ಅಲ್ಲಗಳೆದ ಸಿಎಂ, ಆರು ಬಾರಿ ಟೆಂಡರ್ ಕರೆದರೂ ಯಾರೂ ಮುಂದೆ ಬಾರದ ಕಾರಣ ಪೀಕ್ ಅವರ್‌ನಲ್ಲಿ ಪ್ರತಿ ಯೂನಿಟ್‌ಗೆ 11 ರೂ. ದರದಲ್ಲಿ 'ವಿ.ಇ.ಎಚ್ ಗ್ಲೋಬಲ್' (VEH Global) ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪೂರೈಕೆಯಾದ ವಿದ್ಯುತ್‌ಗೆ ಒಟ್ಟು 5 ಕೋಟಿ ರೂ.ಗಿಂತ ಕಡಿಮೆ ಹಣವನ್ನು ಮಾತ್ರ ಪಾವತಿಸಲಾಗಿದೆ ಎಂದು ಅಂಕಿಅಂಶಗಳ ಸಮೇತ ವಿವರಿಸಿದರು.
ಪಿಎಸ್‌ಸಿ ನೇಮಕಾತಿ ಮತ್ತು ತನಿಖೆ: ಪಿಎಸ್‌ಸಿ (PSC) ಸದಸ್ಯರನ್ನಾಗಿ ಶಾಫಿ ಚಾಲಿಯಂ, ಜಿ. ಗೋಪಕುಮಾರ್, ರೋಸಮ್ಮ ಫಿಲಿಪ್, ಸನಲ್ ಕುಮಾರ್ ಮತ್ತು ರಮೇಶ್ ಎಂ. ತಂಬಿ ಅವರನ್ನು ನೇಮಿಸಲು ಸಂಪುಟ ನಿರ್ಧರಿಸಿದೆ. ಹಾಲಿ ಪಿಎಸ್‌ಸಿ ಸದಸ್ಯರನ್ನು ವಜಾಗೊಳಿಸುವ ಶಿಫಾರಸು ಅಸಂವಿಧಾನಿಕವಾಗಿದ್ದರೂ, ಅದರ ನೆಪದಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ಪಿಎಸ್‌ಸಿಯಲ್ಲಿ ನಡೆದ ಅಕ್ರಮಗಳನ್ನು ಮುಚ್ಚಿಹಾಕಲು ಬಿಡುವುದಿಲ್ಲ; ತನಿಖೆಯ ಮೂಲಕ ಎಲ್ಲವೂ ಹೊರಬರಲಿದೆ ಎಂದು ಸಿಎಂ ಸತೀಶನ್ ಎಚ್ಚರಿಸಿದರು.



