HEALTH TIPS

ಹಾರ್ಮುಝ್ ಜಲಸಂಧಿಯಲ್ಲಿ LPG ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ| ಇಬ್ಬರು ಭಾರತೀಯರಿಗೆ ಗಾಯ; ಓರ್ವ ನಾಪತ್ತೆ

 ಹಾರ್ಮುಝ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಪನಾಮ ಧ್ವಜವಿದ್ದ LPG ಟ್ಯಾಂಕರ್ 'ಎಂಟಿ ತಾರಾ ಗ್ಯಾಸ್' ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ಭಾರತೀಯ ಸಿಬ್ಬಂದಿ ಗಾಯಗೊಂಡಿದ್ದು, ಮತ್ತೊಬ್ಬ ಭಾರತೀಯ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ.


ನ.17ರಂದು ನಡೆದ ಈ ಘಟನೆಯಲ್ಲಿ ಹಡಗಿನ ಮೇಲೆ ಎರಡು ಪ್ರತ್ಯೇಕ ದಾಳಿಗಳು ನಡೆದಿವೆ ಎಂದು ಸಮುದ್ರ ಆಡಳಿತ ನಿರ್ದೇಶನಾಲಯದ ವರದಿ ತಿಳಿಸಿದೆ.

ಮೊದಲ ದಾಳಿಯಲ್ಲಿ ಹಡಗಿನ ನೀರಿನ ಮಟ್ಟಕ್ಕಿಂತ ಮೇಲಿನ ಹೊರಭಾಗಕ್ಕೆ ಹಾನಿಯಾಗಿ ಬಿರುಕು ಕಾಣಿಸಿಕೊಂಡಿತ್ತು. ಆದರೆ, ಈ ವೇಳೆ ಬೆಂಕಿ ಕಾಣಿಸಿಕೊಂಡಿರಲಿಲ್ಲ ಮತ್ತು ಯಾವುದೇ ಸಿಬ್ಬಂದಿಗೆ ಗಾಯಗಳಾಗಿರಲಿಲ್ಲ. ಬಳಿಕ ಸಿಬ್ಬಂದಿ ಹಡಗನ್ನು ತಾತ್ಕಾಲಿಕವಾಗಿ ಸರಿಪಡಿಸಿ, ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಿದ್ದರು.

ಕೆಲವು ಗಂಟೆಗಳ ಬಳಿಕ ನಡೆದ ಎರಡನೇ ದಾಳಿಯಲ್ಲಿ ಎರಡು ಕ್ಷಿಪಣಿಗಳು ಹಡಗಿಗೆ ಅಪ್ಪಳಿಸಿದವು. ಇದರಿಂದ ಹಡಗಿನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತು. ಬೆಂಕಿಯಿಂದಾಗಿ ಲೈಫ್‌ಬೋಟ್‌ ಗಳು ಮತ್ತು ಲೈಫ್‌ರಾಫ್ಟ್‌ ಗಳನ್ನು ಬಳಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಯಿತು. ಹೀಗಾಗಿ, ಹಡಗಿನ ಕ್ಯಾಪ್ಟನ್ ಸಿಬ್ಬಂದಿಗೆ ತಕ್ಷಣ ಹಡಗನ್ನು ತೊರೆಯುವಂತೆ ಸೂಚಿಸಿದರು. ಇದರಂತೆ, ಹಡಗಿನಲ್ಲಿದ್ದ 25 ಮಂದಿ ಸಿಬ್ಬಂದಿ ಸಮುದ್ರಕ್ಕೆ ಹಾರಿದರು. ಸಮೀಪದಲ್ಲಿದ್ದ ಮರ್ಚೆಂಟ್ ಹಡಗುಗಳು 24 ಮಂದಿಯನ್ನು ರಕ್ಷಿಸಿ ಒಮಾನ್‌ ಗೆ ಕರೆದೊಯ್ದವು. ನಾಪತ್ತೆಯಾಗಿರುವ ಭಾರತೀಯರಾಗಿರುವ ಮೂರನೇ ಅಧಿಕಾರಿಗಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ವರದಿ ತಿಳಿಸಿದೆ.

ಹಡಗಿನ ಮೇಲಿನ ದಾಳಿಯನ್ನು ಖಂಡಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಒಮಾನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಅಲ್ಲಿನ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ.

''ಒಮಾನ್‌ನಲ್ಲಿರುವ ನಮ್ಮ ರಾಯಭಾರಿ ಕಚೇರಿಯು ಒಮಾನ್‌ ಅಧಿಕಾರಿಗಳ ಸಹಕಾರದೊಂದಿಗೆ ನಡೆಯುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಿಕಟವಾಗಿ ಗಮನಿಸುತ್ತಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಒಮಾನ್ ಸರಕಾರ ನೀಡಿದ ತ್ವರಿತ ನೆರವು ಮತ್ತು ಬೆಂಬಲವನ್ನು ನಾವು ಪ್ರಶಂಸಿಸುತ್ತೇವೆ'' ಎಂದು ಅವರು ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಾರಾ ಗ್ಯಾಸ್ ಹಡಗಿನ ಮೇಲಿನ ಎರಡನೇ ದಾಳಿಯ ಬಳಿಕ ಇಡೀ ಸಿಬ್ಬಂದಿ ಹಡಗನ್ನು ತೊರೆಯಬೇಕಾಯಿತು ಎಂದು ಕೇಂದ್ರ ಬಂದರು, ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ತಿಳಿಸಿದ್ದಾರೆ. ನಾಪತ್ತೆಯಾಗಿರುವ ನಮ್ಮ ನಾವಿಕನನ್ನು ಪತ್ತೆಹಚ್ಚಿ ರಕ್ಷಿಸಲು ಹಾಗೂ ರಕ್ಷಿಸಲ್ಪಟ್ಟ ಸಿಬ್ಬಂದಿಯ ತಕ್ಷಣದ ಸುರಕ್ಷತೆ, ಕಲ್ಯಾಣ ಮತ್ತು ಅಗತ್ಯ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ಹಡಗು ನಿರ್ವಹಣಾ ಕಂಪೆನಿ ಮತ್ತು ಪ್ರಾದೇಶಿಕ ರಕ್ಷಣಾ ಅಧಿಕಾರಿಗಳೊಂದಿಗೆ ತುರ್ತಾಗಿ ಸಮನ್ವಯ ಸಾಧಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries