ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 25, 2017
ಸಾಯಿರಾಂ ಭಟ್ ರವರಿಂದ ಮತ್ತೆರಡು ಮನೆಗಳ ಹಸ್ತಾಂತರ
ಬಾಬಾ ಜನ್ಮ ದಿನಾಚರಣೆಯ ಕಾರ್ಯಕ್ರಮ
ಬದಿಯಡ್ಕ: ಸಮಾಜದಲ್ಲಿ ಆರ್ತರಾದವರಿಗೆ ನೆರವು ನೀಡಿ ಬದುಕನ್ನು ಸಾರ್ಥಕಗೊಳಿಸುವುದು ಮಾನವ ಜೀವನದ ಪರಮೋನ್ನತ ಸೇವೆಯಾಗಿದ್ದು, ಇಂದಿನ ಆಧುನಿಕ ಸಮಾಜದ ತಾಂತ್ರಿಕ ಮನೋಸ್ಥಿತಿಗೆ ಇಂತಹ ಮೌಲ್ಯಗಳ ಆದರ್ಶವನ್ನು ತೊರಿಸಿಕೊಟ್ಟಿರುವ ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್ ರವರು ಸಮಾಜೋದ್ದಾರಕ ಸಂತ ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ಅಭಿಪ್ರಾಯ ವ್ಯಕ್ತಪಡಿಸಿದರು.
ಸತ್ಯಸಾಯಿ ಬಾಬಾರ ಜನ್ಮ ದಿನಾಚರಣೆಯ ಅಂಗವಾಗಿ ಗುರುವಾರ ಕಿಳಿಂಗಾರು ಸಾಯಿ ಮಂದಿರದಲ್ಲಿ ಸಾಯಿರಾಂ ಗೋಪಾಲಕೃಷ್ಣ ಭಟ್ ಆಯೋಜಿಸಿದ ತಾವು ಕೊಡಮಾಡುವ 246 ಹಾಗೂ 247ನೇ ಉಚಿತ ಮನೆಗಳ ಕೀಲಿಕೈ ಹಸ್ತಾಂತರ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಜಗತ್ತು ವ್ಯಾಪಕ ಪ್ರಮಾಣದಲ್ಲಿ ಅಭಿವೃದ್ದಿಯ ಏರುಗತಿಯಲ್ಲಿದ್ದರೂ ಸಂಕಷ್ಟದಲ್ಲಿ ತೊಳಲುವ ಸಾಕಷ್ಟು ಜನರಿದ್ದಾರೆ. ಸರಕಾರ, ಸಂಸ್ಥೆಗಳು ನಿರ್ವಹಿಸುವ ಕೆಲಸವನ್ನು ಕಳೆದ ಹಲವಾರು ವರ್ಷಗಳಿಂದ ಒಬ್ಬಂಟಿಯಾಗಿ ಸದ್ದಿಲ್ಲದೆ ನಿರ್ವಹಿಸುತ್ತಿರುವ ಸಾಯಿರಾಂ ಗೋಪಾಲಕೃಷ್ಣ ಭಟ್ ರವರ ಬದುಕು ಹೊಸ ತಲೆಮಾರಿಗೆ ಅಚ್ಚರಿ ಹಾಗೂ ದಾಖಲೀಕರಣಗೊಳಿಸುವ ಸೇವಾ ತತ್ಪರತೆಯಾಗಿದ್ದು, ಅವರ ಸೇವೆ ಈ ನಾಡಿನ ಹೆಮ್ಮೆ ಎಂದು ಅವರು ತಿಳಿಸಿದರು. ಫಲಾಪೇಕ್ಷೆಯ ಲವಲೇಶಗಳಿಲ್ಲದೆ ಜಾತಿ,ಮತ ಬೇಧಗಳನ್ನು ಪರಿಗಣಿಸಿದೆ ಮನುಷ್ಯ ಸ್ನೇಹಿಯಾಗಿ ಕೈಗೊಳ್ಳುವ ಸೇವಾ ಬದುಕು ಮಾನವನನ್ನು ದೈವತ್ವಕ್ಕೇರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭ ಉಚಿತ ಮನೆಗಳ ಕೀಲಿಕೈ ಹಸ್ತಾಂತರಿಸಿ ಮಾತನಾಡಿದ, ಸಮಾರಂಭದ ಮುಖ್ಯ ಅತಿಥಿ ಶಾಸಕ ಎನ್.ಎ.ನೆಲ್ಲಿಕುನ್ನು ರವರು ಬಡವರ ಸೇವೆ, ಸಂಕಷ್ಟಕ್ಕೆ ನೆರವಾಗುವ ಮನೋಸ್ಥಿತಿಯು ಅಪೂರ್ವ , ವಿರಳಾತಿವಿರಳ ಮಾನವೀಯತೆಯಾಗಿದ್ದು ಸಾಯಿರಾಂ ಭಟ್ ಅವತಾರ ಪುರುಷರ ಸಾಲಿನಲ್ಲಿ ನಿಲ್ಲುವ ಅಜಾತ ಶತ್ರು ಎಂದು ತಿಳಿಸಿದರು.
ಸಾಯಿರಾಂ ಗೋಪಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷ ಮಹಿನ್ ಕೇಳೋಟ್, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಕಾಸರಗೋಡು, ಸಂಗೀತ ವಿದ್ವಾನ್ ರಾಜೇಶ್ ಬಾಲ್ಗೋಡಿ, ಬದಿಯಡ್ಕ ಠಾಣಾಧಿಕಾರಿ ಪ್ರಶಾಂತ್, ಕಾದರ್ ಮಾನ್ಯ, ಅಬ್ಬಾಸ್ ಮೊದಲಾದವರು ಉಪಸ್ಥಿತರಿದ್ದು ಮಾತನಡಿದರು.
ಸಾಯಿರಾಂ ಗೋಪಾಲಕೃಷ್ಣ ಭಟ್ ರವರ ಪುತ್ರ, ಬದಿಯಡ್ಕ ಗ್ರಾ.ಪಂ. ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸ್ವಾಗತಿಸಿ, ನಿವೃತ್ತ ಮುಖ್ಯೋಪಾಧ್ಯಾಯ ಸುಬ್ರಾಯ ಭಟ್ ವಂದಿಸಿದರು. ಈ ಸಂದರ್ಭ ಕೇಶವ ಕುಂಟಾಲುಮೂಲೆ ಹಾಗೂ ಸುಬ್ಬ ಮುಖಾರಿ ಕಡೆಕಂಜಿ ಯವರಿಗೆ ಮನೆಗಳ ಕೀಲಿಕೈಗಳನ್ನು ಹಸ್ತಾಂತರಿಸಲಾಯಿತು. ಜೊತೆಗೆ ಕೆ.ಎನ್.ಕೃಷ್ಣ ಭಟ್ ಉಚಿತವಾಗಿ ಕೊಡಮಾಡುವ 8 ಹೊಲಿಗೆ ಯಂತ್ರಗಳನ್ನೂ ಸ್ವ ಉದ್ಯೋಗಕಾಂಕ್ಷಿ ಮಹಿಳೆಯರಿಗೆ ಹಸ್ತಾಂತರಿಸಲಾಯಿತು.



