ಬೆಂಗಳೂರು: ದೇಶದ ಅತಿ ದೊಡ್ಡ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾದ ಇನ್ಫೋಸಿಸ್ ತನ್ನ 'ಬ್ರಿಡ್ಜ್ ಪ್ರೊಗ್ರಾಮ್' ಅನ್ನು ಯಶಸ್ವಿಯಾಗಿ ಪೂರೈಸಿದ ದಕ್ಷ ನೌಕರರ ಸಂಬಳವನ್ನು ಡಬಲ್ ಮಾಡುತ್ತಿದೆ. ಈ ಮೂಲಕ ಹೆಚ್ಚಿನ ಸಂಬಳಕ್ಕಾಗಿ ಕಂಪನಿ ತೊರೆಯುತ್ತಿರುವ ಸಮರ್ಥ ನೌಕರರಿಗೆ ಬ್ರೇಕ್ ಹಾಕಲು ಮುಂದಾಗಿದೆ.
ಇತ್ತೀಚಿನ ದಿನಗಳ ಜೂನಿಯರ್ ಮಟ್ಟದ ಉದ್ಯೋಗಿಗಳು ಶೇ.20ರಷ್ಟು ವೇತನ ಹೆಚ್ಚಳಕ್ಕಾಗಿ ಕಂಪನಿ ತೊರೆಯುತ್ತಿದ್ದು, ಇದನ್ನು ತಡೆಯಲು ಕಂಪನಿಯಲ್ಲಿ ಮೂರು ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಿದ ದಕ್ಷ ನೌಕರರಿಗಾಗಿ ಈ ವರ್ಷ 'ಬ್ರಿಡ್ಜ್ ಟು ಕನ್ಸಲ್ಟ್' ಪ್ರೊಗ್ರಾಮ್ ಆರಂಭಿಸಿದ್ದು, ಇದನ್ನು ಯಶಸ್ವಿಯಾಗಿ ಪೂರೈಸಿದ ನೌಕರರ ವೇತನವನ್ನು ಬಡಲ್ ಮಾಡಲು ನಿರ್ಧರಿಸಲಾಗಿದೆ.
ಈ ಪ್ರೊಗ್ರಾಮ್ ನಡಿ ಇದುವರೆಗೆ ಸುಮಾರು 400 ಯುವ ನೌಕರರಿಗೆ ತರಬೇತಿ ನೀಡಲಾಗಿದ್ದು, ಅವರ ಸಂಬಳವನ್ನು ಶೇ.80ರಿಂದ ಶೇ.120ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಇನ್ಫೋಸಿಸ್ ಮಾನವ ಸಂಪನ್ಮೂಲ ಮುಖ್ಯಸ್ಥ ಕ್ರಿಶ್ ಶಂಕರ್ ಅವರು ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಟಿಸಿಎಸ್ ಮತ್ತು ವಿಪ್ರೊ ಸೇರಿದಂತೆ ದೇಶದ ಹಲವು ಐಟಿ ಸಂಸ್ಥೆಗಳು ಈ ಮಾದರಿಯನ್ನು ಅನುಸರಿಸುತ್ತಿದ್ದು, ಕನ್ಸಲ್ಟಿಂಗ್, ಆಟೋಮೇಷನ್ ವಿಭಾಗದ ನೌಕರರಿಗೆ ಕೌಶಲ್ಯ ತರಬೇತಿ ನೀಡುತ್ತಿವೆ.


