ಕುಂಜತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಭೂತ ಬಲಿ ಉತ್ಸವ ಸಂಪನ್ನ
0
ಡಿಸೆಂಬರ್ 17, 2018
ಮಂಜೇಶ್ವರ: ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಶ್ರೀಭೂತಬಲಿ ಉತ್ಸವ ಸೋಮವಾರ ಸಂಪನ್ನಗೊಂಡಿತು.
ಆಡಳಿತ ಮೊಕ್ತೇಸರ ವಿ.ರವೀಂದ್ರ ರಾವ್, ಪವಿತ್ರಪಾಣಿ ಕೆ ಎಸ್ ಕೃಷ್ಣ ಭಟ್ , ಪಿ ಕೆ ರವೀಂದ್ರ ಶೆಟ್ಟಿ, ಕೆ ವಿಶ್ವನಾಥ ಶೆಟ್ಟಿ ಹಾಗೂ ವಿದ್ಯಾನಿಕೇತನದ ಅಧ್ಯಕ್ಷ ಸುರೇಶ್ ಶೆಟ್ಟಿ ಯವರ ನೇತೃತ್ವದಲ್ಲಿ ಶನಿವಾರ ಪ್ರಾರ್ಥಣೆ, ನಿತ್ಯಪೂಜೆ ಮತ್ತು ಶ್ರೀ ಮಹಾಗಣಪತಿ ದೇವರಿಗೆ ರಂಗಪೂಜೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರಕಿತ್ತು.
ಬಳಿಕ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಸಂಗಮ ನಡೆಯಿತು. ಬಳಿಕ ಛತ್ರಪತಿ ಪ್ರಭು ಸಭಾಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ರಾಮಚಂದ್ರ ಸ್ವಾಮೀಜಿ ಕಪಿಲಾಶ್ರಮ, ಉತ್ತರಕಾಶಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಹಿರಿಯ ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ, ಬೇಳೂರು ಗೋಪಾಲ ಕೃಷ್ಣ, ಕೃಷ್ಣ ಎನ್ ಉಚ್ಚಿಲ್, ಭಾಸ್ಕರ ರೈ ಮಂಜಲ್ತೋಡಿ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು.
ಭಾನುವಾರ ಶ್ರೀ ದೇವರ ಬಯ್ಯನ ಬಲಿ ಹೊರಟ ಬಳಿಕ ರಾತ್ರಿ ಉದ್ಯಾವರ ಶ್ರೀಭವಗವತೀ ಅಮ್ಮನವರ ಭೇಟಿ ಉತ್ಸವ ನಡೆದು ವಸಂತ ಕಟ್ಟೆ ಪೂಜೆ, ರಂಗಪೂಜೆ ಪ್ರಸಾದ ವಿತರಣೆ ನಡೆದ ಬಳಿಕ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ, ಹಾಗೂ ಶ್ರೀ ಶರತ್ ಶೆಟ್ಟಿ ಪಡುವಳ್ಳಿ ಇವರಿಂದ ಹರಿಕಥಾ ಸತ್ಸಂಗ ನಡೆಯಿತು.
ಸೋಮವಾರ ಬೆಳಿಗ್ಗೆ ಶ್ರೀದೇವರ ಬಲಿ ಹೊರಟ ಬಳಿಕ ದರ್ಶನ ಬಲಿ ಹಾಗೂ ಉದ್ಯಾವರ ಶ್ರೀ ದೈವಗಳ ಭೇಟಿ ಮತ್ತು ಬಟ್ಲು ಕಾಣಿಕೆ, ಮಹಾಪ್ರಸಾದ ನಡೆಯಿತು.
ಬಳಿಕ ಮಹಾ ಮಂತ್ರಾಕ್ಷತೆ, ಶ್ರೀ ನಾಗದೇವರಿಗೆ ಮತ್ತು ಶ್ರೀ ರಕ್ತೇಶ್ವರಿ ಅಮ್ಮನವರಿಗೆ ತಂಬಿಲ ಸೇವೆ ಹಾಗೂ ಮಹಾ ಪೂಜೆ ಮತ್ತು ಪ್ರಸಾದ ವಿತರಣೆಯೊಂದಿಗೆ ಮೂರು ದಿವಸಗಳ ಕಾಲ ವಿಜೃಂಭಣೆಯಿಂದ ಜರಗಿದ ಭೂತಬಲಿ ಉತ್ಸವ ಸೋಮವಾರ ಸಂಪನ್ನ ಗೊಂಡಿತು.



