HEALTH TIPS

ಮಕ್ಕಳ ಹಾದಿ ತಪ್ಪಿಸುವ ಮಿಠಾಯಿ ರೂಪದ ಮಾದಕಪದಾರ್ಥ: ಆರೋಪಿಗಳ ವಿರುದ್ಧ ಕ್ರಮಕ್ಕೆ ನಿರ್ಧಾರ

ಕಾಸರಗೋಡು:ಮಿಠಾಯಿ ರೂಪದಲ್ಲಿ ಮಾದಕದ್ರವ್ಯ ರವಾನೆಗೊಳಿಸಿ, ಪುಟಾಣಿ ಮಕ್ಕಳನ್ನು ಆಕರ್ಷಿಸಿ, ಅವರನ್ನು ಹಾದಿ ತಪ್ಪಿಸುವ ಕ್ರಮ ಜಿಲ್ಲೆಯಲ್ಲಿ ವ್ಯಾಪಾಕವಾಗಿದ್ದು, ಇಂಥಾ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಜಿಲ್ಲಾ ಹೊಗೆಸೊಪ್ಪು ನಿಯಂತ್ರಣ ಘಟಕ(ಡಿ.ಟಿ.ಸಿ.ಸಿ.) ವ್ಯಾಪ್ತಿಯಲ್ಲಿ ರಚನೆಗೊಂಡಿರುವ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ (ಡಿ.ಎಲ್.ಸಿ.ಸಿ.)ಯ ಪ್ರಥಮ ಸಭೆ ಮುನ್ನೆಚ್ಚರಿಕೆನೀಡಿದೆ. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅಧ್ಯಕ್ಷತೆ ವಹಿಸಿದ್ದರು. ಕಾನೂನು ಕ್ರಮಗಳ ಹಿನ್ನೆಲೆಯಲ್ಲಿ ಶಾಲೆಯ ಆಸುಪಾಸು ಪ್ರದೇಶಗಳಲ್ಲಿ ಹೊಗೆಸೊಪ್ಪು ಉತ್ಪನ್ನಗಳ ಮಾರಾಟ ನಿಯಂತ್ರಣದಲ್ಲಿದೆ. ಮಕ್ಕಳು ಹೊಗೆಸೊಪ್ಪು ಉತ್ಪನ್ನಗಳ ಬಗ್ಗೆ ಆಸಕ್ತಿ ತೋರುವ ಕ್ರಮವೂ ಕಡಿಮೆಯಾಗಿದೆ. ಆದರೆ ಮಾದಕದ್ರವ್ಯಗಳು ಪುಟಾಣಿ ಮಕ್ಕಳನ್ನು ಕೇಂದ್ರೀಕರಿಸಿ ಮಿಠಾಯಿ ಇತ್ಯಾದಿ ರೂಪದಲ್ಲಿ ಯಥೇಚ್ಛವಾಗಿ ದೊರೆಯುತ್ತಿವೆ. ಇದು ಗಂಭೀರ ಸಮಸ್ಯೆಗೆ ಕಾರಣವಾಗಲಿದೆ ಎಂದು ಸಭೆ ಕಳಕಳಿ ವ್ಯಕ್ತಪಡಿಸಿದೆ. ಮುಂದಿನ ಜನಾಂಗವನ್ನು ಬಾಲ್ಯದಲ್ಲೇ ಇಂಥಾ ಪಿಡುಗುಗಳು ಹಾದಿ ತಪ್ಪಿಸದೇ ಇರುವಂಥಾ ಮತ್ತು ಒಂದೊಮ್ಮೆ ಇಂಥಾ ಜಾಲದೊಳಗೆ ಸಿಕ್ಕಿ ನರಳುತ್ತಿರುವ ಮಕ್ಕಳನ್ನು ಪತ್ತೆ ಮಾಡಿ, ಅವರನ್ನು ಪೂರ್ವಸ್ಥಿತಿಗೆ ಮರಳಿ ತರುವ ಸೃಜನಾತ್ಮಕ ಮಾರ್ಗಗಳ ಕುರಿತು ಸಭೆ ಚರ್ಚಿಸಿದೆ. ಜಿಲ್ಲೆಯ ಎಲ್ಲ ಶಿಕ್ಷಣ ಕೇಂದ್ರಗಳ 91 ಮೀಟರ್ ಅಂತರದಲ್ಲಿ ಹೊಗೆಸೊಪ್ಪು ಉತ್ಪನ್ನಗಳ, ಮಾದಕಪದಾರ್ಥ ಬೆರೆತ ಮಿಠಾಯಿಗಳ ಇತ್ಯಾದಿ ಕಾನೂನು ರೀತ್ಯಾ ಅಪರಾಧವಾಗಿದ್ದು, ಅಪರಾಧಿಗಳ ವಿರುದ್ಧ ಜೆಜೆ ಕಾಯಿದೆ ಪ್ರಕಾರ 7 ವರ್ಷ ಸಜೆಯಲ್ಲದೆ, ಬೇರೆ ಬೇರೆ ಕಾಯಿದೆ ಪ್ರಕಾರ ಸಜೆ, ದಂಡ ವಿಧಿಸಲಾಗುವುದು ಎಂದು ಹೆಚ್ಚುವರಿ ದಂಡನಾಧಿಕಾರಿ ಸಭೆಯಲ್ಲಿ ತಿಳಿಸಿದರು. ಈ ಪಿಡುಗಿನ ನಿಯಂತ್ರಣಕ್ಕೆ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಜಿಲ್ಲಾ ಮಟ್ಟದ ಸ್ಕ್ವಾಡ್ ರಚನೆಗೆ ಸಭೆ ನಿರ್ಧಾರ ಕೈಗೊಂಡಿದೆ. ಮಾದಕಪದಾರ್ಥಗಳ ವಿರುದ್ಧ ಮೊದಲ ಹೆಜ್ಜೆಯಾಗಿ ಮೂರು ನಗರಸಭೆಗಳ ತಲಾ ಒಂದು ಶಾಲೆಯಲ್ಲಿ ಹೆತ್ತವರ ಸಮಿತಿ, ಶಾಲೆಯ ವಿವಿಧ ಕ್ಲಬ್ ಗಳ, ಎಸ್.ಪಿ.ಸಿ. ಸಹಿತ ತಂಡಗಳನ್ನು ಸೇರ್ಪಡೆಗೊಳಿಸಿ ಶಾಲೆಯನ್ನು ಹೊಗೆಸೊಪ್ಪು-ಮಾದಕಪದಾರ್ಥಗಳು ಅಳವಡಗೊಂಡ ಮಿಠಾಯಿ ರಹಿತ ವಲಯವನ್ನಾಗಿಸುವ ಚಟುವಟಿಕೆ ಆರಂಭಿಸಲಾಗುವುದು ಎಂದು ಸಭೆ ಹೇಳಿದೆ. ಕೋಪ್ಟ ಕಾಯಿದೆ(ಸಿಗರೆಟ್ ಆಂಡ್ ಅದರ್ ಟೊಬೆಕೋ ಕಾಯಿದೆ) ಸೆಕ್ಷನ್ 25 ಪ್ರಕಾರ ದೇಶದ ಎಲ್ಲ ಜಿಲ್ಲೆಗಳಲ್ಲಿ ಸಂಚಲನಾ ಸಮಿತಿ ರಚಿಸಲಾಗುವುದು. ದಾಳಿ ಸಹಿತ ಕ್ರಮಗಳಿಗೆ ವಿಳಂಬವಾಗುವುದನ್ನು ತಪ್ಪಿಸಲು ಪೊಲೀಸ್ ,ಅಬಕಾರಿ, ರೈಲ್ವೇ ಪೊಲೀಸ್, ಆರೋಗ್ಯ, ಆಹಾರ ಸುರಕ್ಷೆ, ಶಿಕ್ಷಣ, ಎನ್.ಜಿ.ಒ.ಗಳು ಮೊದಲಾದವರ ಪ್ರತಿನಿಧಿಗಳನ್ನು ಸೇರಿಸಿಕೊಂಡು ಸಮಿತಿ ರಚಿಸಲಾಗುವುದು. ಜಿಲ್ಲೆಯಲ್ಲಿ ಚಟುವಟಿಕೆ ನಡೆಸುತ್ತಿರುವ ಯಾವುದೇ ಶಿಕ್ಷಣಾಲಯದಲ್ಲಿ, ಶಾಲೆಗೆ ಸಂಬಂಧಪಟ್ಟ ಮೈದಾನ ಸಹಿತ ಜಾಗದಲ್ಲಿ, ವಾಹನಗಳಲ್ಲಿ,ವಿದ್ಯಾಲಯದಲ್ಲಿ ನಡೆಯುತ್ತಿರುವ ಸಮಾರಂಭಗಳಲ್ಲಿ ಮಕ್ಕಳು, ಹೆತ್ತವರು, ಶಿಕ್ಷಕರು, ಸಿಬ್ಬಂದಿ ಹೊಗೆಸೊಪ್ಪಿನ ಉತ್ಪನ್ನ ಬಳಕೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈ ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ಸಾರ್ವಜನಿಕರು ಸಂಬಂಧಪಟ್ಟವರಿಗೆ ತಿಳಿಸಬಹುದು ಎಂದು ಸಭೆ ತಿಳಿಸಿದೆ. ಜಿಲ್ಲಾ ಕಾನೂನು ಸೇವಾ ಕಾರ್ಯದರ್ಶಿ ಫಿಲಿಪ್ ಥಾಮಸ್, ಕಾರ್ಕೋಟಿಕ್ ಸೆಲ್ ಡಿವೈ ಎಸ್ ಪಿ ನಂದನ್ ಪಿಳ್ಳೆ, ಜಿಲ್ಲಾ ವೈದ್ಯಾಧಿಕಾರಿ ಎ.ಪಿ.ದಿನೇಶ್ ಕುಮಾರ್, ಹೊಗೆಸೊಪ್ಪು ನಿಯಂತ್ರಣ ಅಧಿಕಾರಿ ಡಾ.ಶಾಂಟೋ, ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ಟಿ.ಪಿ.ಆಮಿನಾ, ಆರ್.ಪಿ.ಎಫ್ ಸಹಾಯಕ ಎಸ್.ಐ.ಸಿ.ಪಿ.ಸುರೇಶ್, ರಾಜ್ಯ ತೆರಿಗೆ ಸಹಾಯಕ ಕಮೀಷನರ್ ವಿ.ಎಂ.ಶ್ರೀಕಾಂತ್, ಆಹಾರ ಸುರಕ್ಷೆ ಅಧಿಕಾರಿ ಪಿ.ಶಾಜಿ, ಆರೋಗ್ಯ ಲೈನ್ ನಿರ್ದೇಶಕ ಮೋಹನ್ ಮಾಂಙಾಡ್, ಕೇರಳ ವಲಿಂಟರಿ ಹೆಲ್ತ್ ಸರ್ವೀಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಸಾಜು ವಿ.ಇಟ್ಟಿ, ನಗರಸಭೆ ಆರೋಗ್ಯ ವಿಭಾಗ ಪ್ರತಿನಿಧಿಗಳು ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries