ಕಂಬಳ ನಿಷೇಧ ತೆರವಿಗೆ ಕೇರಳ ಸರಕಾರ ಪ್ರಯತ್ನಿಸಬೇಕು- ಮಣಿಕಂಠ ರೈ ಪಟ್ಲ
0
ಡಿಸೆಂಬರ್ 17, 2018
ಕುಂಬಳೆ: ಕೇರಳದಲ್ಲಿ ತುಳುವರ ಕೃಷಿ ಪ್ರಧಾನವಾದ ಅತಿ ಪ್ರಮುಖ ಗ್ರಾಮೀಣ ಕ್ರೀಡೆಯಾಗಿರುವ ಕಂಬಳದ ಮೇಲಿರುವ ನಿಷೇಧವನ್ನು ತೆರವು ಮಾಡಲು ಸರಕಾರ ಮುಂದಾಗಬೇಕು ಎಂದು ಬಿಜೆಪಿ ಮಂಜೇಶ್ವರ ಮಂಡಲ ಕಾರ್ಯದರ್ಶಿ ಮಣಿಕಂಠ ರೈ ಪಟ್ಲ ಅವರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ಪೈವಳಿಕೆಯಲ್ಲಿ ನಡೆದ ಅಣ್ಣ ತಮ್ಮ ಜೋಡುಕೆರೆ ಕಂಬಳ ಆತಂಕದಲ್ಲಿ ನಡೆಸಬೇಕಾಗಿ ಬಂದಿರುವುದು ತುಳುವರ ಪಾಲಿಗೆ ನೋವಿನ ಸಂಗತಿ. ಕಂಬಳವು ತುಳುವರ ಜಾನಪದ ಕ್ರೀಡೆಯಾಗಿದ್ದು, ಅದನ್ನು ಕಾನೂನುಬದ್ಧಗೊಳಿಸುವಲ್ಲಿ ನೆರೆಯ ಕರ್ನಾಟಕ ಸರಕಾರ ಕೈಗೊಂಡ ಕ್ರಮಗಳನ್ನು ಕೇರಳ ಸರಕಾರವೂ ಕೈಗೊಂಡು ರಾಜ್ಯ ಉಚ್ಚ ನ್ಯಾಯಾಲಯಕ್ಕೆ ಇದರ ಮಹತ್ವ ಮತ್ತು ಹಿನ್ನೆಲೆಯನ್ನು ಮನವರಿಕೆ ಮಾಡಿಕೊಡಬೇಕಾಗಿದೆ. ತುಳುವರ ಹಲವು ಗ್ರಾಮೀಣ ಕ್ರೀಡೆಗಳಿಗೆ ಪ್ರಾಣಿಹಿಂಸೆ ಕಾರಣ ಮುಂದಿಟ್ಟು ನಿಷೇಧ ಹೇರಿರುವುದು ಅವರ ಗ್ರಾಮ್ಯ ಬದುಕಿನ ಮೇಲೆ ಎಳೆದಿರುವ ಬರೆಯಾಗಿದೆ. ಕರ್ನಾಟಕದಲ್ಲಿ ಹಿಂಸೆರಹಿತವಾಗಿ ಸರಕಾರದ ಉಸ್ತುವಾರಿಯಲ್ಲಿಯೇ ಕಂಬಳಗಳು ನಡೆಯುತ್ತಿದ್ದು, ಅದೇ ರೀತಿ ಕಾಸರಗೋಡಿನಲ್ಲೂ ಯಾವುದೇ ಭಯವಿಲ್ಲದೆ, ಹಿಂಸೆರಹಿತ ಕಂಬಳ ನಡೆಸಲು ಪೂರಕವಾದ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕೇರಳ ತುಳು ಅಕಾಡೆಮಿಯನ್ನು ಆರಂಭಿಸಿ ಇಲ್ಲಿನ ತುಳುವರ ಸಂಸ್ಕøತಿ ಮತ್ತು ಕಲೆಯನ್ನು ಪ್ರೋತ್ಸಾಹಿಸಲು ಆ ಅಕಾಡೆಮಿ ವಿಫಲವಾಗಿದೆ. ಕೇರಳ ಸರಕಾರವು ಇನ್ನೊಂದು ಮಗ್ಗುಲಲ್ಲಿ ತುಳುವರ ಗ್ರಾಮೀಣ ಕ್ರೀಡೆಗಳನ್ನು ಬೆಂಬಲಿಸದೆ ಪರೋಕ್ಷವಾಗಿ ನಿಷೇಧ ಹೇರಿದೆ. ಪರಮೋಚ್ಚ ನ್ಯಾಯಾಲಯದತ್ತ ಬೆರಳು ತೋರಿಸದೆ, ನ್ಯಾಯಾಲಯಕ್ಕೆ ಈ ಗ್ರಾಮೀಣ ಕ್ರೀಡೆಯ ಮಹತ್ವವನ್ನು ತಿಳಿಸಿ ನಿಷೇಧ ತೆರವು ಮಾಡಬೇಕಾಗಿರುವುದು ಸರಕಾರದ ಕರ್ತವ್ಯವಾಗಿದೆ. ಇಂಥ ಕ್ರಮಗಳಿಂದ ಮಾತ್ರವೇ ತುಳು ಸಂಸ್ಕøತಿಯನ್ನು ಪ್ರೋತ್ಸಾಹಿಸಲು ಮತ್ತು ಬೆಳೆಸಲು ಸಾಧ್ಯ ಎಂದು ಮಣಿಕಂಠ ರೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕೋಳಿಅಂಕ ಮತ್ತು ಕಂಬಳಕ್ಕೆ ಜಾನಪದ ಮತ್ತು ಧಾರ್ಮಿಕ ನಂಬಿಕೆಯ ಸ್ಪರ್ಶವಿದೆ. ಇವುಗಳನ್ನು ಜೂಜು ರಹಿತವಾಗಿ ಮತ್ತು ಪ್ರಾಣಿಹಿಂಸೆಯಾಗದ ರೀತಿಯಲ್ಲಿ ನಡೆಸಲು ಪೂರಕವಾದ ಕ್ರಮಗಳನ್ನು ತಕ್ಷಣವೇ ಕೈಗೊಂಡು ತುಳುವರ ನಂಬಿಕೆ ಮತ್ತು ಭಾವನೆಯನ್ನು ಗೌರವಿಸುವ ಕೆಲಸವನ್ನು ಸರಕಾರ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.


