HEALTH TIPS

ಸಮರಸಸುದ್ದಿಯ ಎಲ್ಲಾ ಓದುಗರಿಗೂ ಸುಬ್ರಹ್ಮಣ್ಯ ಷಷ್ಠಿಯ ಶುಭಾಶಯಗಳು.

ಚಾತುರ್ಮಾಸದಲ್ಲಿ ಹಬ್ಬ ಹರಿದಿನಗಳು ಒಂದರ ಹಿಂದೊಂದು ಬಂದೇ ಬರುತ್ತಿದ್ದವು. ಆದರೆ ಮಾರ್ಗಶಿರ ಮಾಸದಲ್ಲಿ ಅವುಗಳ ಬಾಹುಳ್ಯ ಪರಿಮಿತ ಸಂಖ್ಯೆಗೆ ಇಳಿದಿರುವುದು. ಅದರಲ್ಲಿ ಶುಕ್ಲಪಕ್ಷದ ಷಷ್ಠಿಯು ಸುಬ್ರಮಣ್ಯ ಷಷ್ಠಿ, ಚಂಪಾಷಷ್ಠಿ ಎಂಬ ಹೆಸರಿನಿಂದ ನಾಡಿಗರೆಲ್ಲರಿಗೆ ಚಿರಪರಿಚಿತ. ಸುಬ್ರಮಣ್ಯ ದಕ್ಷಿಣ ಭಾರತದ ಬಹುಜನಪ್ರಿಯ ದೇವ, ಶರಣವಭವ. ಕುಮಾರ ಸ್ವಾಮಿಯ ಆರಾಧನೆ ತಮಿಳುನಾಡಿನಲ್ಲಿ, ಇದರ ಪ್ರಭಾವದಿಂದ ಕನ್ನಡ ನಾಡಿನಲ್ಲೂ, ವಿಶೇಷವಾಗಿ ತುಳುನಾಡಿನಲ್ಲೂ ನಡೆಯುತ್ತಿದೆ. ಹಲವು ರೀತಿ ರಿವಾಜುಗಳಲ್ಲಿ, ನೇಮ ನಿಷ್ಠೆಗಳಲ್ಲಿ ವೈವಿಧ್ಯಮಯವಾಗಿ ನಡೆಯುವ ಸ್ಕಂದನ ಉಪಾಸನೆ ದಿನೇ ದಿನೇ ಹೆಚ್ಚುತ್ತಿದೆ. ನಾಗಾರಾಧನೆಯ ಹಂದರದಲ್ಲಿ ಸುಬ್ರಾಯನೂ ಸೇರಿಕೊಳ್ಳುತ್ತಾನೆ. ಸುಬ್ರಮಣ್ಯ ಇಷ್ಟು ಜನಪ್ರಿಯನಾಗಲು ಕಾರಣ ಅವನ ಜಾನಪದ ನೆಲೆ. ಮುರುಗ ಶಾಸ್ತ್ರಗಳಲ್ಲಿ ಅಥವಾ ಆಗಮಗಳಲ್ಲಿ ಮೊದಲು ತೋರಿಕೊಂಡು ಅನಂತರ ಜನರ ನಡುವೆ ಬಳಕೆಗೆ ಬಂದವನಲ್ಲ. ಜನರ ನಡುವೆಯೂ ಮೊದಲು ತೋರಿಕೊಂಡು ಅನಂತರ ಆಗಮದ ಅಟ್ಟಕ್ಕೇರಿದವನು. ಬೆಟ್ಟಗುಡ್ಡಗಳಲ್ಲಿ ಅಡ್ಡಾಡುವ ಕಾಡು ಜನರ ದೈವವಾದ್ದರಿಂದ ಅವನ ಕ್ಷೇತ್ರಗಳು ಬಹುಮಟ್ಟಿಗೆ ಆ ಪ್ರದೇಶಗಳೇ ಆಗಿರುತ್ತವೆ. ಅವನೇನೂ ಮೋಕ್ಷ ನೀಡುವ ದೇವತೆಯೂ ಅಲ್ಲ. ಬದುಕಿನ ಗೆಲುವನ್ನು, ಸುಖವನ್ನು ಒದಗಿಸುವುದು ಅವನ ವೈಶಿಷ್ಟ್ಯ. ಜನರಿಗೆ ಬೇನೆ, ಬಂಜೆತನ, ಬಾಲಗ್ರಹ ಮೊದಲಾದ ತೊಂದರೆಗಳಿಗಂತೂ ಈ ದೇವರಿಗೆ ಕಟ್ಟಿಕೊಂಡ ಹರಕೆ ಗಟ್ಟಿಯಾದ ಫಲ ಕೊಡುತ್ತದೆ. ಹರೋಹರ ಎಂದು ಕೂಗುತ್ತಾ ಕಾವಡಿ ಹೊರುವುದು ತುಂಬಾ ಹಳೆಯ ಪದ್ಧತಿ. ಪರಮ ಪಾವನನಾದ ಷಣ್ಮುಖಸ್ವಾಮಿಯ ಅವತಾರ, ಸ್ವರೂಪ ಮತ್ತು ಲೀಲೆಗಳ ಆಂತರಿಕ ತತ್ವವು ಪ್ರಣವತತ್ವವೇ ಆಗಿರುವುದರಿಂದ ಈ ದೇವ ತನ್ನ ತಂದೆಯಾದ ಶಿವನಿಗೂ ಗುರುವಾಗಿ ಸ್ವಾಮಿನಾಥನೆಂದು ಪ್ರಸಿದ್ಧಿ ಹೊಂದಿದ್ದಾನೆ. ನಾಗನಿಗೆ ಪಂಚಮಿಯಾದರೆ, ಸುಬ್ರಮಣ್ಯನಿಗೆ ಷಷ್ಠಿ. ಬ್ರಹ್ಮ ಮಾನಸ ಪುತ್ರಿಯರಲ್ಲಿ ಷಷ್ಠಿ ಒಬ್ಬಳು. ಬ್ರಹ್ಮವೈವರ್ತ ಪುರಾಣದ ಪ್ರಕೃತಿ ಖಂಡದಲ್ಲಿ ಈ ದೇವತೆಯನ್ನು ಸೂತಿಕಾಗೃಹದಲ್ಲಿ ಮಗುಹುಟ್ಟಿದ ಆರನೇ ದಿನದಂದು ಪೂಜಿಸಬೇಕೆಂಬ ವಿಧಿಯಿದೆ. ಆರನೇ ದಿನ ತಾಯಿಗೂ ಮಗುವಿಗೂ ಪೀಡೆ ಕಳೆಯಿತೆಂದು ಕೃತಜ್ಞತೆಯಿಂದ ಪೂಜಿಸಬೇಕು. ಆ ಕಾರಣ ಮಾರ್ಗಶಿರ ಮಾಸದ ಷಷ್ಠಿಯಂದು ಸ್ಕಂದನ ಪ್ರತಿನಿಧಿಯಂತಿರುವ ಸುಬ್ರಮಣ್ಯನನ್ನು ವಟು ಅಧಿಷ್ಠಾನದಲ್ಲಿ ಆರಾಧಿಸಬೇಕು. ಇದರಿಂದ ಷಷ್ಠಿ ದೇವತೆಗೆ ಪ್ರೀತಿಯುಂಟಾಗಿ ಮನೆಯ ಮಕ್ಕಳನ್ನು ಕಾಪಾಡುವಳು ಎಂದು ನಂಬುಗೆ. ದುಷ್ಟ ತಾರಕನ ಸಂಹಾರಕ್ಕಾಗಿ ದೇವತೆಗಳು ಶಿವ ಹಾಗೂ ಆತನಿಗಾಗಿ ತಪಸ್ಸು ಮಾಡುತ್ತಿದ್ದ ಪಾರ್ವತಿಯರನ್ನು ಸಂಗಮಕ್ಕಾಗಿ ಪ್ರಯತ್ನಪಟ್ಟ ಫಲವಾಗಿ ಕಾಮನೇ ಶಿವನಿಂದ ಜಾರಿದ ತೇಜಸ್ಸಿನಿಂದ ಸೃಷ್ಟಿಗೊಂಡವನೇ ಸ್ಕಂದ. ಶಿವನ ತೇಜಸ್ಸನ್ನು ಹೆಚ್ಚುಕಾಲ ತನ್ನ ಕೈಯಲ್ಲಿಟ್ಟುಕೊಳ್ಳಲು ಸಾಧ್ಯವಾಗದೇ ಹೋದುದರಿಂದ ಅವನು ಅದನ್ನು ಗಂಗೆಯಲ್ಲಿ ಇಟ್ಟನಂತೆ. ಈ ಕಾರಣದಿಂದ ಸುಬ್ರಮಣ್ಯನು (ಭೀಷ್ಮರಂತೆ) ಗಾಂಗೇಯ ಎನಿಸಿಕೊಂಡ. ಶಿವನ ತೇಜಸ್ಸನ್ನು ಹೊರಲು ಗಂಗೆಗೂ ಸಾಧ್ಯವಾಗದಿದ್ದರಿಂದ ಆಕೆ ಅದನ್ನು ನೊಜೆ ಹುಲ್ಲಿನ ಮೇಲಿಟ್ಟಳು. ಅ ಹುಲ್ಲಿಗೆ ಸಂಸ್ಕೃತದಲ್ಲಿ ಶರವಣವೆಂಬ ಹೆಸರಿದೆ. ಶಿವನ ತೇಜಸ್ಸು ಹುಲ್ಲಿನಲ್ಲಿ ಶಿಶುರೂಪ ತಾಳಿದುದರಿಂದ ಸುಬ್ರಮಣ್ಯನು ಶರವಣಭವ ಎನಿಸಿಕೊಂಡನು. ಜೋತಿಷ್ಯ ಶಾಸ್ತ್ರದ ಪ್ರಕಾರ, ಕುಜನ ಶಾಂತಿಗೆ ಸುಬ್ರಮಣ್ಯನ ಆರಾಧನೆ ಪರಿಣಾಮಕಾರಿ. ಕುಮಾರಸ್ವಾಮಿಯಲ್ಲಿ 17 ಪ್ರಬೇಧಗಳಿವೆ ಎಂದು ತತ್ವನಿಧಿ ತಿಳಿಸುತ್ತದೆ. ಅವನ ಧ್ಯಾನಸ್ಥಾನ ಅನಾಹತ ಚಕ್ರ, ಹೃದಯ ಪ್ರದೇಶ. ಇಂದ್ರ ಸಮಕಕ್ಷೆಯ ಮನ್ಮಥ, ಕೃತ್ತಿಕೆಯಿಂದ ಪ್ರವರ್ಧಮಾನನಾದ್ದರಿಂದ ಕಾರ್ತಿಕೇಯ ಷಣ್ಮುಖಿಯಾಗಿ ಆರು ತಾಯಂದಿರನ್ನು ಪಡೆದಿದ್ದರಿಂದ ಷಾಣ್ಮುತುರನಾದ. ಆರು ಎಂಬಲ್ಲಿ ಅರಿಷಡ್ವರ್ಗ ಗೆಲುವು ಮುಖ್ಯ ಎಂಬುದನ್ನು ಸೂಚಿಸುತ್ತದೆ. ಮಂಡಲ ಮಂಡಿತನಾದ ಸರ್ಪದ ರೂಪದಲ್ಲೂ ಕೆಲವೆಡೆ ಸುಬ್ರಮಣ್ಯನ ಆರಾಧನೆ ನಡೆಯುವುದುಂಟು. ಸ್ಕಂದ ಷಷ್ಠಿ ಹಾಗು ಶೂರ ಸಂಹಾರ ಸ್ಕಂದ ಷಷ್ಠಿ, ಶಿವನ ಮಗನಾದ ಸುಬ್ರಹ್ಮಣ್ಯ/ಕಾರ್ತಿಕೇಯ/ಮುರುಗನ್ ದೇವರಿಗೆ ಸಂಬಂಧ ಪಟ್ಟ, ಆರು ದಿನಗಳ ಕಾಲ ನಡೆಯುವ ಹಬ್ಬ ಆಚರಿಸಲಾಗುತ್ತದೆ. ಕಾರ್ತೀಕ ಮಾಸದ(ಅಕ್ಟೋಬರ್- ನವೆಂಬರ್) ಹುಣ್ಣಿಮೆಯಂದು ಪ್ರಾರಂಭವಾಗುವ ಈ ಹಬ್ಬದಲ್ಲಿ ದೇವರಿಗೆ ರಥೋತ್ಸವ ಹಾಗು ವಿಶೇಷ ಪೂಜೆಗಳು ನಡೆಯುತ್ತವೆ. ಸ್ಕಂದ ಅಥವಾ ಸುಬ್ರಹ್ಮಣ್ಯನು ತನ್ನ ಆಯುಧವನ್ನು(ಭರ್ಜಿಯನ್ನು) ಪಡೆಯುವ ಮೂಲಕ ಕತ್ತಲೆಯ ಮೇಲೆ ಆಧ್ಯಾತ್ಮದ ಬೆಳಕಿನ ಗೆಲ್ಲುವ ಹಬ್ಬ. ಜಪ, ಸಂಯಮ, ಉಪವಾಸ ಹಾಗು ಭಕ್ತಿಯನ್ನು ಈ ಸಮಯದಲ್ಲಿ ನಿಷ್ಠೆಯಿಂದ ಆಚರಿಸುವುದರಿಂದ ಒಳ್ಳೆಯ ಫಲಗಳು ದೊರೆಯುತ್ತವೆ. ಸ್ಕಂದ ಷಷ್ಠಿಯನ್ನು ಆಚರಿಸುವ ವಿಧಾನ: ದಕ್ಷಿಣ ಭಾರತದಲ್ಲಿ ನಡೆಯುವ ಅತ್ಯಂತ ಅದ್ಧೂರಿ ಹಬ್ಬಗಳಲ್ಲಿ ಇದೂ ಕೂಡ ಒಂದು. ಬಹಳಷ್ಟು ಸ್ಥಳಗಳಲ್ಲಿ ಈ ಹಬ್ಬ ಷಷ್ಠಿಗೂ ಆರು ದಿನ ಮುನ್ನ ಶುರು ಆಗಿ ಷಷ್ಠಿಯ ದಿನ ಮುಕ್ತಾಯಗೊಳ್ಳುತ್ತದೆ. ಈ ದಿನಗಳಲ್ಲಿ ಭಕ್ತರು, ಸುಬ್ರಹಮಣ್ಯನ ಸ್ತೋತ್ರಗಳನ್ನು, ಕಥೆಗಳನ್ನು ಓದುತ್ತಾರೆ ಹಾಗು ದೇವರ ಕಥೆಗಳನ್ನು ವೇದಿಕೆಯ ಮೇಲೆ ನಿರ್ವಹಿಸುತ್ತಾರೆ. ಸಾವಿರಾರು ಜನ ಅಂದಿನ ವಿಶೇಷವಾದ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಶ್ರೀ ಸುಬ್ರಹಮಣ್ಯನ ದೇವಸ್ಥಾನಗಳಲ್ಲಿ ಸ್ಕಂದ ಷಷ್ಠಿಯಂದು ಜಾತ್ರೆ ಹಾಗು ಉತ್ಸವಗಳು ನಡೆಯುತ್ತವೆ. ಸ್ಕಂದ ಷಷ್ಠಿಯ ದಿನ ಭಕ್ತಾದಿಗಳು ಜಪವನ್ನು ಮಾಡಿ, ಕಾವಡಿಯನ್ನು ಸುಬ್ರಹ್ಮಣ್ಯನ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಾರೆ. ಸ್ಕಂದ ಷಷ್ಠಿಯ ಹಿಂದಿನ ಕಥೆ: ಅತಿ ದೊಡ್ಡದಾದ ಹಾಗು 18 ಮಹಾಪುರಾಣಗಳಲ್ಲಿ ಒಂದಾದ ಸ್ಕಂದ ಪುರಾಣದ ಪ್ರಕಾರ, ಶೂರಪದ್ಮ (ಸೂರಪದ್ಮನೆಂದೂ ಕರೆಯುತ್ತಾರೆ), ಸಿಂಹಮುಖ ಹಾಗು ತಾರಕಾಸುರ ರಾಕ್ಷಸರ ನಾಯಕತ್ವದಲ್ಲಿ ರಾಕ್ಷಸರು ದೇವತೆಗಳನ್ನು ಸೋಲಿಸಿ ಧರೆಯನ್ನು ಆಕ್ರಮಿಸುತ್ತಾರೆ. ದೇವತೆಗಳನ್ನು ಹಾಗು ಮನುಷ್ಯರನ್ನು ಹಿಂಸಿಸಿ, ದೇವತೆಗಳಿಗೆ ಸಂಬಂಧ ಪಟ್ಟದ್ದನ್ನೆಲ್ಲಾ ಧ್ವಂಸ ಮಾಡುತ್ತಾರೆ. ಆದರೆ ಶೂರಪದ್ಮನಿಗೆ, ಶಿವನು ಸತಿಯ ನಂತರ ಐಹಿಕ ಜೀವನವನ್ನು ತ್ಯಜಿಸಿ, ಗಂಭೀರವಾದ ತಪ್ಪಸ್ಸಿನಲ್ಲಿ ಮುಳುಗಿದ್ದಾನೆಂಬುದನ್ನು ಅರಿತು, ತನಗೆ ಶಿವನ ಮಗನಿಂದಲೇ ಸಾವಾಗ ಬೇಕು ಎಂಬ ವರವನ್ನು ತೆಗೆದುಕೊಂಡಿರುತ್ತಾನೆ. ದೇವತೆಗಳು ತಪ್ಪಸ್ಸಿನಲ್ಲಿದ್ದ ಶಿವನ ಪಾದಕ್ಕೆ ಬಿದ್ದು ಅವನ ಆಶ್ರಯ ಪಡೆಯುತ್ತಾರೆ. ಬ್ರಹ್ಮ ದೇವನ ಸಲಹೆಯ ಮೇರೆಗೆ ದೇವತೆಗಳು ಮನ್ಮಥನ ಸಹಾಯದದಿಂದ ಶಿವನಲ್ಲಿ ಕಾಮದ ಇಚ್ಚೆಯನ್ನು ಪ್ರಚೋದಿಸುತ್ತಾನೆ. ಇದರಿಂದ ಕೋಪಗೊಂಡ ಶಿವನು ಮನ್ಮಥನನ್ನು ಸುಟ್ಟು ಬೂದಿ ಮಾಡುತ್ತಾನೆ. ಶಿವನಿಂದ ಬಂದ ವೀರ್ಯಗಳು ಆರು ಭಾಗಗಳಾಗಿ ಗಂಗೆಯಲ್ಲಿ ಲೀನವಾಗುತ್ತದೆ. ಗಂಗೆಯು, ಆ ಆರು ಭಾಗಗಳನ್ನು ಒಂದು ಕಾಡಿನಲ್ಲಿ ಸ್ಥಾಪಿಸಿದಾಗ ಅದು ಆರು ಮಕ್ಕಳ ರೂಪ ಪಡೆದುಕೊಳ್ಳುತ್ತದೆ. ಆ ಮಕ್ಕಳನ್ನು ಆರು ಕಾರ್ತಿಕೇಯ ನಕ್ಷತ್ರಗಳ ಹೆಣ್ಣು ಮಕ್ಕಳು ನೋಡಿಕೊಳ್ಳುತ್ತಿದ್ದಾಗ ಪಾರ್ವತಿ ದೇವಿಯು ಆ ಆರು ಮಕ್ಕಳನ್ನು ಒಂದಾಗಿ ಮಾಡಿದಾಗ ಆರು ತಲೆಯುಳ್ಳ ಒಂದು ಮಗುವಾಗುತ್ತದೆ. ಹಾಗಾಗಿ ಸುಬ್ರಹ್ಮಣ್ಯ ಅಥವಾ ಕಾರ್ತಿಕೇಯ ಆರು ತಲೆಯುಳ್ಳ ದೇವರಾಗಿ ಚಿತ್ರಿಸಲಾಗುತ್ತದೆ. ರಾಕ್ಷಸರು ತಮ್ಮ ಅಟ್ಟಹಾಸ ಮುಂದುವರೆಸಿದ್ದರು. ಶೂರಪದ್ಮ ಇಂದ್ರನ ಮಗನನ್ನು, ಋಶಿಗಳನ್ನು ಹಾಗು ದೇವತೆಗಳನ್ನು ಒತ್ತೆಯಾಗಿಟ್ಟುಕೊಂಡಿರುತ್ತಾನೆ. ಸುಬ್ರಹಮಣ್ಯ ಸ್ವಾಮಿಯು ಶೀಘ್ರವಾಗೆ ದೇವತೆಗಳ ಸೇನಾಪತಿಯಾಗಿ ರಾಕ್ಷಸರನ್ನು ಸೋಲಿಸುತ್ತಾನೆ. ಕೊನೆಯ ಯುದ್ಧದಲ್ಲಿ, ಸುಬ್ರಹ್ಮಣ್ಯ ಸ್ವಾಮಿಯು ಶೂರಪದ್ಮನನ್ನು ತನ್ನ ಆಯುಧದಿಂದ ಕೊಲ್ಲುತ್ತಾನೆ. ಈ ಪ್ರಕ್ರಿಯೆಗೆ 'ಶೂರಸಂಹಾರ' ಎಂದು ಹೆಸರು ಬಂತು. ಮುಖ್ಯ ಸ್ಕಂದ ಷಷ್ಠಿ ಇಂದೇ ಆಚರಿಸಲಾಗುತ್ತದೆ. ಸ್ಕಂದ ಷಷ್ಠಿ, ಶಿವನ ಮಗನಾದ ಸುಬ್ರಹ್ಮಣ್ಯ/ಕಾರ್ತಿಕೇಯ/ಮುರುಗನ್ ದೇವರಿಗೆ ಸಂಬಂಧ ಪಟ್ಟ, ಆರು ದಿನಗಳ ಕಾಲ ನಡೆಯುವ ಹಬ್ಬ ಆಚರಿಸಲಾಗುತ್ತದೆ. ಕಾರ್ತೀಕ ಮಾಸದ(ಅಕ್ಟೋಬರ್- ನವೆಂಬರ್) ಹುಣ್ಣಿಮೆಯಂದು ಪ್ರಾರಂಭವಾಗುವ ಈ ಹಬ್ಬದಲ್ಲಿ ದೇವರಿಗೆ ರಥೋತ್ಸವ ಹಾಗು ವಿಶೇಷ ಪೂಜೆಗಳು ನಡೆಯುತ್ತವೆ. ಸ್ಕಂದ ಅಥವಾ ಸುಬ್ರಹ್ಮಣ್ಯನು ತನ್ನ ಆಯುಧವನ್ನು(ಭರ್ಜಿಯನ್ನು) ಪಡೆಯುವ ಮೂಲಕ ಕತ್ತಲೆಯ ಮೇಲೆ ಆಧ್ಯಾತ್ಮದ ಬೆಳಕಿನ ಗೆಲ್ಲುವ ಹಬ್ಬ. ಜಪ, ಸಂಯಮ, ಉಪವಾಸ ಹಾಗು ಭಕ್ತಿಯನ್ನು ಈ ಸಮಯದಲ್ಲಿ ನಿಷ್ಠೆಯಿಂದ ಆಚರಿಸುವುದರಿಂದ ಒಳ್ಳೆಯ ಫಲಗಳು ದೊರೆಯುತ್ತವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries