ಕುಂಬಳೆ ಹೊಳೆ ಸಂರಕ್ಷಣೆಗಾಗಿ ಜಾಗೃತಿ ನಡೆತ
0
ಡಿಸೆಂಬರ್ 21, 2018
ಕುಂಬಳೆ: ಕುಂಬಳೆ ಗ್ರಾ.ಪಂ. ನೇತೃತ್ವದಲ್ಲಿ ಕುಂಬಳೆ ಹೊಳೆಯ ಸಂರಕ್ಷಣೆಗಾಗಿ ಜಾಗೃತಿ ಜಾಥಾ ಶುಕ್ರವಾರ ನಡೆಯಿತು. ಕಾರಿಂಜ ದೇವಸ್ಥಾನ ಪರಿಸರ, ನಾರಾಯಣಮಂಗಲ ಹಾಗೂ ಕುಂಬಳೆ ಗದ್ದೆ ಮಠದಿಂದ ಹೊರಟ ಪ್ರತ್ಯೇಕ ಮೂರು ತಂಡಗಳಾಗಿ ಚಾಲನೆಗೊಂಡ ಜಾಗೃತಿ ನಡೆತವು ಕಂಚಿಕಟ್ಟೆ ಸೇತುವೆ ಸಮೀಪ ಏಕಕಾಲದಲ್ಲಿ ಜೊತೆಯಾದವು. ಹೊಳೆಗಾಗಿ ನಡೆಸಿದ ನಡೆತದಿಂದ ಅರಿತುಕೊಂಡ ಪ್ರಮುಖ ಅಂಶಗಳನ್ನು ಹಾಗೂ ಜಲಸಂರಕ್ಷಣೆಯ ಬಗ್ಗೆ ಆಯಾ ಪ್ರದೇಶದ ಜನಪ್ರತಿನಿಧಿಗಳು ಹಾಗೂ ಕೃಷಿಕರು ತಮ್ಮ ಅಭಿಪ್ರಾಯಗಳನ್ನು ಈ ಸಂದರ್ಭ ಹಂಚಿಕೊಂಡರು.
ಕಂಚಿಕಟ್ಟೆ ಸೇತುವೆ ಸಮೀಪ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್.ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ ಪ್ರಾಕೃತಿಕ ಹೊಳೆ, ನದಿ, ಹಳ್ಳಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಮರೋಪಾದಿಯ ಜಾಗೃತಿ ಅಗತ್ಯವಿದೆ. ನದಿ, ಹೊಳೆಗಳನ್ನು ಮಲಿನಗೊಳಿಸುವುದು, ದುರ್ಬಳಕೆ ಮಾಡುವುದು ಮೊದಲಾದ ಸಮಾಜ ಬಾಹಿರ ಚಟುವಟಿಕೆಗಳ ವಿರುದ್ದ ಸಾರ್ವಜನಿಕರು ತಿಳಿಯಬೇಕಾದ ಅಂಶಗಳು ಸಾಕಷ್ಟಿವೆ. ಪ್ರಕೃತಿಯ ವಿರುದ್ದದ ಹೆಜ್ಜೆಗಳು ವಿನಾಶಕ್ಕೆ ನಾಂದಿಯಾಗುತ್ತದೆ ಎಂದು ತಿಳಿಸಿದರು.
ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ಲೋಕನಾಥ ಶೆಟ್ಟಿ, ಆರೋಗ್ಯ-ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ.ಆರೀಫ್, ಬ್ಲಾಕ್ ಪಂಚಾಯತು ಸದಸ್ಯ ಸತ್ಯಶಂಕರ ಭಟ್ ಹಿಳ್ಳೆಮನೆ, ಗ್ರಾ.ಪಂ. ಸದಸ್ಯರುಗಳಾದ ಸುಧಾಕರ ಕಾಮತ್, ರಮೇಶ್ ಭಟ್, ಮುರಳೀಧರ ಯಾದವ್ ನಾಯ್ಕಾಪು, ಸುಜಿತ್ ರೈ, ಹರೀಶ, ಮಂಜುನಾಥ ಆಳ್ವ ಮಡ್ವ ಮೊದಲಾದವರು ನದಿ ಸಂರಕ್ಷಣೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಹೊಳೆಯಲ್ಲಿ ಕಾಂಡ್ಲಾ ಗಿಡಗಳನ್ನು ನೆಟ್ಟು ನದಿ ನೀರು ವೇಗದಲ್ಲಿ ಹರಿಯದಂತೆ ತಡೆಹಿಡಿದಿಡಲಾಗುತ್ತದೆ. ಜೊತೆಗೆ ನದಿಯು ಮಲಿನವಾಗಿದೆ. ಕಾಡು ಹಂದಿಗಳ ಉಪಟಳದಿಂದ ಕೃಷಿಗೆತೊಂದರೆಗಳಾಗುತ್ತಿದೆ ಎಂಬ ಅಂಶಗಳ ಬಗ್ಗೆ ಉಪಸ್ಥಿತರಿದ್ದ ಹಿರಿಯ ಧಾರ್ಮಿಕ ಮುಂದಾಳು, ಕೃಷಿಕ ಯೋಗೀಶ ಕಡಮಣ್ಣಾಯ ಅವರು ಬೊಟ್ಟುಮಾಡಿದರು. ಸಹಾಯಕ ಕೃಷಿ ಅಧಿಕಾರಿ ಬಿಜು ಅವರು ಈ ಬಗ್ಗೆ ಸಮರ್ಪಕ ಉತ್ತರಗಳನ್ನು ನೀಡಿ, ಪರಿಹಾರ ಮಾಗೋಧಪಾಯಗಳನ್ನು ಪತ್ತೆಹಚ್ಚುವ ಬಗ್ಗೆ ಭರವಸೆ ನೀಡಿದರು. ಜಲಪ್ರಾಧಿಕಾರದ ಸಹಾಯಕ ಅಭಿಯಂತರ ಪದ್ಮನಾಭನ್, ಅಧಿಕಾರಿ ಆನಂದ, ಶುಚಿತ್ವ ಮಿಷನ್ ಸಂಯೋಜಕ ರಾಧಾಕೃಷ್ಣ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಯೋಜನಾಧಿಕಾರಿ ದಿಲೀಪ್ ಸ್ವಾಗತಿಸಿ, ಸಹಾಯಕ ಕಾರ್ಯದರ್ಶಿ ಶೈನ್ ಕುಮಾರ್ ನದಿ ಗೀತೆಯನ್ನು ಹಾಡಿ ವಂದಿಸಿದರು.




