ಕೂಡ್ಲು ಮೇಳದ ರಜತ ಕಿರೀಟ ಸಮರ್ಪಣೆ
0
ಡಿಸೆಂಬರ್ 21, 2018
ಮಧೂರು: ಇತಿಹಾಸ ಪ್ರಸಿದ್ಧ ಅತಿ ಪ್ರಾಚೀನ ಕೂಡ್ಲು ಮೇಳದ ಇತ್ತೀಚೆಗೆ ನಡೆದ ಪ್ರಥಮ ಸೇವೆ ಆಟದ ಶುಭ ದಿನದಂದು ಕೂಡ್ಲು ಮೇಳಕ್ಕೆ ಯಕ್ಷಾಭಿಮಾನಿ ಕೂಡ್ಲು ಅವರಿಂದ ಶ್ರೀದೇವಿಗೆರಜತ ಕಿರೀಟ ಹಾಗೂ ಕಿಶನ್ ಕುಮಾರ್ ಕೂಡ್ಲು ಅವರಿಂದ ಹನೂಮಂತನ ಕಿರೀಟಕ್ಕೆ ಬೆಳ್ಳಿಯ ಕವಚದ ಸಮರ್ಪಣಾ ಕಾರ್ಯಕ್ರಮ ರಾಮದಾಸನಗರದಿಂದ ವಿಜೃಂಭಣೆಯ ಮೆರವಣಿಗೆಯ ಮೂಲಕ ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ಸಂಭ್ರಮ ಸಡಗರದ ಮೆರವಣಿಗೆಯೊಂದಿಗೆ ತರಲಾಯಿತು.
ಶೋಭಾಯಾತ್ರೆಯಲ್ಲಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್, ಹಿರಿಯ ಧಾರ್ಮಿಕ ಮುಂದಾಳು, ಯಕ್ಷಗಾನ ಸಂಘಟಕ ವೆಂಕಟರಮಣ ಹೊಳ್ಳ ಕಾಸರಗೋಡು, ತರಬೇತಿ ಕೇಂದ್ರದ ಅಧ್ಯಕ್ಷ ಅಚ್ಯುತ ಬಲ್ಯಾಯ ಕೂಡ್ಲು, ಮಧೂರು ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಧರ ಕೂಡ್ಲು, ಪುಷ್ಪಾ ಕೂಡ್ಲು, ವಿವಿಧ ಕುಟುಂಬಶ್ರೀಯ ಸದಸ್ಯರು, ಯಕ್ಷಾಭಿಮಾನಿ ಕೂಡ್ಲು ಇದರ ಅಧ್ಯಕ್ಷ ಸುನಿಲ್ ಗಟ್ಟಿ, ಕಾರ್ಯದರ್ಶಿ ಅರ್ಪಿತ್ ಶೆಟ್ಟಿ, ಕೋಶಾಧಿಕಾರಿ ಪ್ರವೀಣ್ ಕೂಡ್ಲು, ಚಂದ್ರಮೋಹನ ಕೂಡ್ಲು, ಅರುಣ್ ಪಾಟಾಳಿ, ರಾಕೇಶ್ ಗೋಳಿಯಡ್ಕ, ಸುಜನ್ ಕೂಡ್ಲು, ಸಂತೋಷ್ ಪೆರ್ನಡ್ಕ, ರಂಜಿತ್ ಗೋಳಿಯಡ್ಕ, ವಿಘ್ನೇಶ್ ಕಾರಂತ್, ಕುತ್ಯಾಳ ಶ್ರೀ ಅಯ್ಯಪ್ಪ ಭಕ್ತವೃಂದ ಮೊದಲಾದವರು ಭಾಗವಹಿಸಿದರು.
ಭವ್ಯ ಮೆರವಣಿಗೆಯಲ್ಲಿ ವಾದ್ಯ ಮೇಳ, ವರ್ಣರಂಜಿತ ಕೊಡೆಗಳು ಮತ್ತು ವಿಷ್ಣುಮಂಗಲ ಭಜನಾ ಸಂಘದಿಂದ ಭಜನಾ ಸಂಕೀರ್ತನೆ ನಡೆಯಿತು. ರಾತ್ರಿ ಕೂಡ್ಲು ಮೇಳದಿಂದ `ಪಾಂಡವಾಶ್ವಮೇಧ' ಪ್ರಸಂಗದ ಯಕ್ಷಗಾನ ಬಯಲಾಟ ನಡೆಯಿತು.


