ಆರಾಧನಾಲಯಗಳು ಜೀರ್ಣೋದ್ಧಾರಗೊಂಡರೆ ನಾಡು ಸಂಮೃದ್ಧ- ವಸಂತ ಪೈ
0
ಡಿಸೆಂಬರ್ 24, 2018
ಬದಿಯಡ್ಕ: ತುಳುನಾಡು ದೈವ-ದೇವರುಗಳ ಆರಾಧನೆಗಳಿಗೆ ಪ್ರಸಿದ್ಧವಾಗಿದೆ. ಪೂರ್ವಜರು ಅನಾದಿಕಾಲದಿಂದಲೇ ವಿವಿಧ ಆರಾಧನೆಗಳನ್ನು ರೂಢಿಸಿಕೊಂಡು ಬಂದಿದ್ದಾರೆ. ನಾಗಾರಾಧನೆ, ದೇವತಾರಾಧನೆ, ದೈವಾರಾಧನೆ ಮೊದಲಾದ ಆರಾಧನಾ ಪದ್ದತಿಗಳಿಂದ ನಾಡು ಸಂಪನ್ನವಾಗಿದೆ. ಅಜೀರ್ಣಗೊಂಡಿರುವ ಆರಾಧನಾಲಯಗಳು ಜೀರ್ಣೋದ್ಧಾರಗೊಂಡು ಶ್ರದ್ಧಾ ಭಕ್ತಿಯಿಂದ ಆರಾಧನೆಗೊಂಡರೆ ಆ ನಾಡು ಸಂಮೃದ್ಧವಾಗಿ ಶಾಂತಿ, ನೆಮ್ಮದಿ ನೆಲೆಸುವುದರಲ್ಲಿ ಸಂಶಯವಿಲ್ಲ. ಹಿರಿಯರು ರೂಢಿಸಿಕೊಂಡ ಪದ್ದತಿಗಳನ್ನು ನಾವೂ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಜೀವನವು ಸಾರ್ಥಕ್ಯವನ್ನು ಕಾಣುವುದು ಎಂದು ಖ್ಯಾತ ಉದ್ಯಮಿ, ಧಾರ್ಮಿಕ ಮುಂದಾಳು ವಸಂತ ಪೈ ಬದಿಯಡ್ಕ ಅಭಿಪ್ರಾಯಪಟ್ಟರು.
ಅವರು ಕುಂಬ್ಡಾಜೆ ಗ್ರಾಮದ ಪುತ್ರೋಡಿ ಪಡುಮನೆಯ ಶ್ರೀ ಲಕ್ಷ್ಮೀ ಸಹಿತ ವೆಂಕಟರಮಣ ಮಠದ ಜೀರ್ಣೋದ್ಧಾರ ಸಹಾಯಾರ್ಥ ಅದೃಷ್ಟ ಚೀಟಿಯನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಪುತ್ರೋಡಿ ಶ್ರೀ ಮಠದ ಪರಿಸರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ ಅಧ್ಯಕ್ಷತೆ ವಹಿಸಿದ್ದರು. ನಾರಂಪಾಡಿ ಶ್ರೀಉಮಾಮಹೇಶ್ವರ ಕ್ಷೇತ್ರದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ತಲೇಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕ್ಷೇತ್ರದ ತಂತ್ರಿವರ್ಯರಾದ ಅರವಿಂದ ಅಲೆವೂರಾಯ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ತಿಮ್ಮಪ್ಪ ರೈ ಕುಂಬ್ಡಾಜೆ, ಧಾರ್ಮಿಕ ಮುಂದಾಳು ನಾರಾಯಣ ರೈ ಕುದ್ಕಾಡಿ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶಂಕರನಾರಾಯಣ ಮಯ್ಯ ಬದಿಯಡ್ಕ, ಗೋಸಾಡ ಶ್ರೀ ಮಹಿಶಮರ್ಧಿನಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಕೃಷ್ಣ ಅಮ್ಮಣ್ಣಾಯ ಪಾವೂರು, ಬಿ.ಎನ್.ಅಪ್ಪು ಪಾಟಾಳಿ ಬಂಬ್ರಾಣ, ನಾರಾಯಣ ಕಾರ್ನವರ್ ಪುತ್ರೋಡಿ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಪುತ್ರೋಡಿ ಶಾಸ್ತಾರ ದೇವಸ್ಥಾನದ ಅರ್ಚಕ ವೆಂಕಟ್ರಮಣ ಭಟ್ ಪುತ್ರೋಡಿ, ಪುತ್ರೋಡಿ ಶ್ರೀ ಮಠದ ಅರ್ಚಕ ಉದಯ ಕುಂಜತ್ತಾಯ ಬೆಳಿಂಜ, ಮಹಿಷಮರ್ದಿನಿ ಸೇವಾ ಸಮಿತಿ ಗೋಸಾಡ ಇದರ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಧಾರ್ಮಿಕ,ಸಾಮಾಜಿಕ ಮುಂದಾಳು ಹರೀಶ ನಾರಂಪಾಡಿ ಮೊದಲಾದವರು ಉಪಸ್ಥಿತರಿದ್ದರು. ಅನನ್ಯ ರೈ, ಶ್ರೇಯಾ ರೈ, ಪ್ರತೀಕ್ಷಾ ರೈ ಪ್ರಾರ್ಥನೆ ಹಾಡಿದರು, ಶ್ರೀ ಲಕ್ಷ್ಮೀ ವೆಂಕಟರಮಣ ಟ್ರಸ್ಟ್ ಪುತ್ರೋಡಿ ಇದರ ಅಧ್ಯಕ್ಷ ಮಹಾಬಲ ಶೆಟ್ಟಿ ಉಪ್ಪಳ ಸ್ವಾಗತಿಸಿ, ಚಂದ್ರಹಾಸ ರೈ ಮಾಚಾವು ವಂದಿಸಿದರು. ಉದಯ ಮಲ್ಲಾರ ಕಾರ್ಯಕ್ರಮ ನಿರೂಪಿಸಿದರು.

