ಏತಡ್ಕ ಶಾಲಾ ಶತಮಾನೋತ್ಸವಕ್ಕೆ ತೆರೆ- ಕುಗ್ರಾಮವಾಗಿದ್ದ ಪ್ರದೇಶವನ್ನು ಜ್ಞಾನ ದೇಗುಲದ ಮೂಲಕ ಬೆಳಗಿಸಿದ ಕೈಗಳ ಶ್ರಮ ಸಾರ್ಥಕ-ನ್ಯಾಯವಾದಿ.ಕೆ.ಶ್ರೀಕಾಂತ್
0
ಡಿಸೆಂಬರ್ 24, 2018
ಬದಿಯಡ್ಕ: ಬಹುಮಂದಿಗೆ ವಿದ್ಯೆ ಅಲಭ್ಯವಾದ ಕಾಲಘಟ್ಟದಲ್ಲಿ ಸಿಂಹಾಸನದ ಯಾವ ನೆರವುಗಳೂ ಇಲ್ಲದೆ ಗ್ರಾಮದ ಜನತೆಯನ್ನು ವಿದ್ಯಾ ಸಂಪನ್ನರನ್ನಾಗಿಸುವ ಸದುದ್ದೇಶದೊಂದಿಗೆ ಸ್ಥಾಪಿಸಲ್ಪಟ್ಟ ಶಾಲೆ ಶತಮಾನೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಭಾಗಶಃ ದ್ವೀಪವಾಗಿದ್ದು ಜನ ವಿರಳ ಪ್ರದೇಶ ಏತಡ್ಕದಲ್ಲಿ ವಿದ್ಯಾಸಂಸ್ಥೆಯ ಹುಟ್ಟಿಗೆ ಕಾರಣವಾದ ಸ್ಥಾಪಕರ ಶ್ರಮ ಹಾಗೂ ಸಾಧನೆಗೆ ಇಂದಿನ ತಲೆಮಾರು ತಲೆಬಾಗಲೇ ಬೇಕು.ನೂರು ವರ್ಷಗಳಲ್ಲಿ ವಿದ್ಯಾ ಸಂಸ್ಥೆಯನ್ನು ಪ್ರಗತಿಯ ಪಥದಲ್ಲಿ ನಡೆಸಿಕೊಂಡು ಬಂದ ವ್ಯವಸ್ಥಾಪಕರ ಶ್ರಮ ಅದ್ಭುತ ಹಾಗೂ ಊಹನೆಗೂ ನಿಲುಕದ ಸಾಧನೆ ಎಂದು ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ನ್ಯಾಯವಾದಿ. ಕೆ. ಶ್ರೀಕಾಂತ್ ಹೇಳಿದರು.
ಏತಡ್ಕ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಸಂಜೆ ನಡೆದ ಶತಮಾನೋತ್ಸವ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ದೇವರ ಸ್ಥಾನ ಕಲ್ಪಿಸಲಾಗಿದೆ.ಗುರು ಶಿಷ್ಯರ ನಡುವೆ ಭಾವನಾತ್ಮಕ ಸಂಬಂಧವಿರಬೇಕು.ಆದರೆ ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾಭ್ಯಾಸ ಸಂಸ್ಥೆಗಳು ವ್ಯಾಪಾರೀ ಕೇಂದ್ರಗಳಾಗಿ ಬದಲಾಗುತ್ತಿರುವುದು ದುರದೃಷ್ಟಕರ ವಿಷಯ ಆದರೆ ಗ್ರಾಮೀಣ ಪ್ರದೇಶದ ಶಾಲೆಗಳು ಇಂದಿಗೂ ವಿದ್ಯಾರ್ಥಿಗಳೊಂದಿಗೆ ಭಾವನಾತ್ಮಕ ಸಂಬಂಧವಿರಿಸಿ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಪ್ರಪ್ರಥಮ ಬಾರಿ ಎಂಡೋ ಸಿಂಪಡಣೆ ವಿರುದ್ಧ ಧ್ವನಿ ಎತ್ತಿ ಹೋರಾಡಿದ ಮೂವರಲ್ಲಿ ಪ್ರಮುಖರಾದ ವೈದ್ಯ ಡಾ. ಮೋಹನ್ ಕುಮಾರ್ ವೈ.ಎಸ್ ಅವರಿಗೆ ಪ್ರಾಥಮಿಕ ಶಿಕ್ಷಣ ನೀಡಿ ಸಾಮಾಜಿಕ ಕಳಕಳಿ ವ್ಯಕ್ತಿತ್ವವನ್ನು ರೂಪಿಸಿದ ಶಾಲೆ ಇದಾಗಿದೆ.ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕೇಶವ ಶರ್ಮ ಕಲಿತಿರುವುದೂ ಅಲ್ಲದೆ ಅನೇಕ ಸಾಧಕ ಮೇಧಾವಿಗಳನ್ನು ಸಮಾಜಕ್ಕೆ ನೀಡಿದ ಇತೀಹಾಸ ಈ ಶಾಲೆಗಿದೆ.ನಾನಾ ಹಂತಗಳಲ್ಲಾಗಿ ಅಡ್ಡಿ ಆತಂಕಗಳ ನಡುವೆ ಬೆಳೆದು ಬಂದ ಶಾಲೆ ಪ್ರೌಢ ಹಾಗೂ ಸೆಕೆಂಡರಿ ಶಿಕ್ಷಣ ನೀಡುವ ಮಟ್ಟಕ್ಕೆ ಬೆಳೆಯಲಿ ಎಂದರು.
ಕಾಸರಗೋಡು ಡಿವೈಎಸ್ ಪಿ ಎಂ.ವಿ.ಸುಕುಮಾರನ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಗುರುವಿನ ಪಾತ್ರ ಮಹತ್ವ ಪೂರ್ಣ ವಾಗಿದ್ದು ಗುರುವಿನ ಪ್ರಾಮಾಣಿಕತೆ, ಶಿಷ್ಯರ ಗೌರವ, ಬದ್ಧತೆ, ಭಕ್ತಿ ಮತ್ತು ವಿಧೇಯತೆ ಮೇಲೆ ಆಧಾರಿತ ಸಂಬಂಧವಾಗಿದೆ.ಹಿಂದೆ ಮಕ್ಕಳನ್ನು ಶಿಕ್ಷೆ ನೀಡುವ ಮೂಲಕ ತಿದ್ದಿ ತೀಡುವ ಅವಕಾಶವಿತ್ತು.ಆದರೆ ಆ ಸ್ವಾತಂತ್ರ್ಯ ಈಗ ಇಲ್ಲವಾಗಿದೆ. ಪ್ರಾಥಮಿಕ ಹಂತದಲ್ಲಿ ಮಕ್ಕಳು ಶಿಕ್ಷಕರನ್ನು ಅನುಸರಿಸುತ್ತಾರೆ. ಜೀವನದಲ್ಲಿ ಉತ್ತಮ ಮೌಲ್ಯವನ್ನು ಅಳವಡಿಸಲು ಶಿಕ್ಷಕರು ಕಾರಣರಾಗಬೇಕು ಎಂದರು.
ಹಂಪಿ ಮತ್ತು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ.ಬಿ.ಎ.ವಿವೇಕ ರೈ ಅಧ್ಯಕ್ಷತೆ ವಹಿಸಿ ಸಮಾರೋಪ ಭಾಷಣದಲ್ಲಿ ಮಾತನಾಡಿ, ಹಳ್ಳಿಗಳು ದೇಶದ ಸಂಪನ್ಮೂಲಗಳ ಮೂಲ ಹಾಗೂ ಶಕ್ತಿ. ಸರಕಾರದ ಅನುಕೂಲತೆ, ಇನ್ನೊಬ್ಬರ ಸಹಾಯ ನಿರೀಕ್ಷಿಸದೆ ಗಾಂಧೀಜಿಯವರ ತತ್ವ, ಆದರ್ಶ, ಸರಳತೆ, ಸ್ವಾಭಿಮಾನವನ್ನು ನಾವು ಬೆಳೆಸಿದರೆ ಅವರ ಸ್ವರಾಜ್ಯ ಕಲ್ಪನೆ ರಾಮ ರಾಜ್ಯದ ಕನಸು ನನಸಾಗುವುದು. ಜ್ಞಾನದ ಸ್ನಾನ ಮಾಡಿಸುವ ವಿದ್ಯಾ ಸಂಸ್ಥೆ ಪುಣ್ಯಕ್ಷೇತ್ರ. ನೂರು ವರ್ಷಗಳ ಹಿಂದೆ ದುರ್ಗಮ ಪ್ರದೇಶದಲ್ಲಿ ಶಾಲೆ ಸ್ಥಾಪನೆಯಿಂದ ತೊಡಗಿ ಶಿಕ್ಷಣದ ಜೀವಜಲವನ್ನು ಹರಿಸಿ ಅನೇಕ ಧುರೀಣರನ್ನು ಎತ್ತಿ ಹಿಡಿದ ಸ್ಥಳ ಏತಡ್ಕವಾಗಿದೆ.ಭಾಷೆ, ಸಂಸ್ಕೃತಿ, ಜೀವನ ರೂಪಿಸುವ ವಿದ್ಯಾ ಸಂಸ್ಥೆಗೆ ರೂಪು ಕೊಟ್ಟ ಸ್ಥಾಪಕರು, ವ್ಯವಸ್ಥಿತವಾಗಿ ಶತವರ್ಷಗಳ ಕಾಲ ಮುಂದೆ ಕೊಂಡೊಯ್ದ ವ್ಯವಸ್ಥಾಪಕರ, ವ್ಯಕ್ತಿತ್ವ ರೂಪಿಸಿದ ಅಧ್ಯಾಪಕರ, ಬೆನ್ನೆಲುಬಾಗಿ ನಿಂತ ಪೋಷಕರು ಹಾಗೂ ಊರವರ ಶ್ರಮ ಸ್ಮರಣೀಯ. ಕರ್ನಾಟಕದಲ್ಲೇ ಕನ್ನಡ ಮಾಧ್ಯಮ ಶಾಲೆಗಳು ಆತಂಕ ಸ್ಥಿತಿಯಲ್ಲಿರುವಾಗ ಕೇರಳದ ಮಣ್ಣಲ್ಲಿ ಕನ್ನಡ ಶಾಲೆ ಇಂದಿಗೂ ಉಳಿದು ಬೆಳೆಯುತ್ತಿರುವುದು ಅಭಿನಂದನಾರ್ಹ ಎಂದರು.
ಸಾಹಿತಿ ನಾ.ದಾ ಶೆಟ್ಟಿ ಮಾತನಾಡಿದರು.ಸೇವೆಯಿಂದ ನಿವೃತ್ತರಾಗಲಿರುವ ಮುಖ್ಯ ಶಿಕ್ಷಕಿ ಸರೋಜ ಪಿ., ಶಿಕ್ಷಕಿ ಸರೋಜ ಎನ್.ಕೆ., ಕುಂಬಳೆ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಕೈಲಾಸ ಮೂರ್ತಿ ಅವರಿಗೆ ಗೌರವಾರ್ಪಣೆ ನಡೆಯಿತು.ಶಾಲಾ ಹಳೆ ವಿದ್ಯಾರ್ಥಿನಿ ಸೌಮ್ಯ ವೈ.ಎಸ್. ಮತ್ತು ಮಂಜುಳಾ ಕುಂಡಾಪು ಸಮ್ಮಾನ ಪತ್ರ ಓದಿದರು. ಅಗಲ್ಪಾಡಿ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಸತೀಶ ವೈ., ಹಳೆವಿದ್ಯಾರ್ಥಿನಿ ಶ್ರದ್ಧಾ ಕೆ.ಅಭಿನಂದನಾ ಭಾಷಣ ಮಾಡಿದರು.
ಕುಂಬ್ಡಾಜೆ ಗ್ರಾ.ಪಂ. ಸದಸ್ಯರುಗಳಾದ ಶೈಲಜಾ ನಡುಮನೆ, ಎಲಿಜಬೆತ್ ಕ್ರಾಸ್ತಾ, ಮಾತೃ ಮಂಡಳಿ ಅಧ್ಯಕ್ಷೆ ಸೌಮ್ಯ ನೆಲ್ಲಿಮೂಲೆ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ವೈ. ಸುಬ್ರಾಯ ಭಟ್ ಸ್ವಾಗತಿಸಿ, ಖಜಾಂಚಿ ಸುಬ್ರಹ್ಮಣ್ಯ ವೈ.ವಿ. ವಂದಿಸಿದರು.ಕಾಸರಗೋಡು ಸರಕಾರಿ ಕಾಲೇಜು ಉಪನ್ಯಾಸಕ ಚಂದ್ರಶೇಖರ್ ಏತಡ್ಕ ನಿರೂಪಿಸಿದರು.



