ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋ ಚಿತ್ತ
0
ಡಿಸೆಂಬರ್ 25, 2018
ಮಂಜೇಶ್ವರ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನವಾದ ಮಂಗಳವಾರ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾದ ಕ್ಯಾಂಪ್ಕೋ ವಿಶಿಷ್ಟವಾದ ಆಚರಣೆಯ ಮೂಲಕ ಹೊಸ ಭಾಷ್ಯ ಬರೆದು ಅಗಲಿದ ಮಾಜಿ ಪ್ರಧಾನಿಗೆ ಗೌರವ ನಮನ ಸಲ್ಲಿಸಿತು.
ಕ್ಯಾಂಪ್ಕೋದ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಅವರು ಮೀಂಜ ಗ್ರಾ.ಪಂ. ವ್ಯಾಪ್ತಿಯ ಕುಳೂರು ಗ್ರಾಮದ ಶುಂಠಿಮನೆಯ ಇತ್ತೀಚೆಗೆ ಹೃದಯದ ಶಸ್ತ್ರಕ್ರೀಯೆಗೊಳಗಾದ ಕ್ಯಾಂಪ್ಕೋ ಸದಸ್ಯ ಲಕ್ಷ್ಮೀ ತಿಮ್ಮಪ್ಪ ಆಳ್ವ ಅವರಿಗೆ ಕ್ಯಾಂಪ್ಕೋದ ವತಿಯಿಂದ 50 ಸಾವಿರ ರೂ.ಗಳ ನೆರವಿನ ಮೊತ್ತದ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭ ಮಾತನಾಡಿದ ಎಸ್.ಆರ್.ಸತೀಶ್ಚಂದ್ರ ಅವರು, ಸದಸ್ಯರ ಸರ್ವತೋಮುಖ ಏಳಿಗೆಯ ನಿಟ್ಟಿನಲ್ಲಿ ಕ್ಯಾಂಪ್ಕೋ ಕಳಕಳಿ ವ್ಯಕ್ತಪಡಿಸುತ್ತದೆ. ಕ್ಯಾಂಪ್ಕೋ ಸಂಸ್ಥೆ ಒಂದು ಕುಟುಂಬದಂತೆ ಬೆಳೆದುನಿಂತಿದ್ದು, ಅದರೊಳಗೆ ಒಬ್ಬರ ನೋವು ಪೂರ್ತಿ ಸಂಸ್ಥೆಯನ್ನೇ ವಿಚಲಿತಗೊಳಿಸುತ್ತದೆ. ಈ ನಿಟ್ಟಿನಲ್ಲಿ ನೆರವಿನ ಹಸ್ತಕ್ಕೆ ಸಿದ್ದವಿದೆ ಎಂದು ತಿಳಿಸಿದರು. ಯಾವತ್ತೂ ಕ್ಯಾಂಪ್ಕೊ ಬೆಳೆಗಾರರ ಹಿತಕಾಯುವ ಸಂಸ್ಥೆ. ಕೃಷಿ ಉತ್ಪನ್ನಗಳ ಖರೀದಿಯಿಂದ ಹಿಡಿದು ಬೇರೆ ಬೇರೆ ಸಂದರ್ಭಗಳಲ್ಲಿ ಸಂಸ್ಥೆ ಸದಸ್ಯರ ಜೊತೆಗೆ ನಿಂತಿದೆ. ಯಾರೂ ಅಡಿಕೆ ಕೊಳ್ಳುವವರಿಲ್ಲದಾಗ ಮತ್ತು ಕೊಕ್ಕೊ ಮಾರುಕಟ್ಟೆಗೆ ಬಂದು ಬಹುರಾಷ್ಟ್ರೀಯ ಕಂಪನಿಗಳು ಖರೀದಿ ಮಾಡದೆ ಹಿಂದೆ ಸರಿದಾಗ ಬೆಳೆಗಾರರ ಹಿತಕಾಯುವ ಕೆಲಸ ಮಾಡಿದ್ದು ಕ್ಯಾಂಪ್ಕೊ ಎಂದರು. ಯುವಕರು ಕ್ಯಾಂಪ್ಕೊ ಸದಸ್ಯರಾಗಿ ಸಂಸ್ಥೆಯನ್ನು ಇನ್ನಷ್ಟು ಬೆಳಸಬೇಕು ಎಂದು ಅಧ್ಯಕ್ಷರು ಕರೆಕೊಟ್ಟರು.
ಈ ಸಂದರ್ಭ ಕ್ಯಾಂಪ್ಕೋ ಉಪಾಧ್ಯಕ್ಷ ಶಂಕರನಾರಾಯಣ ಖಂಡಿಗೆ, ನಿರ್ದೇಶಕರಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಬಾಲಕೃಷ್ಣ ರೈ ಬಾನೋಟ್ಟು, ಸ್ಥಳೀಯ ಗಣ್ಯರಾದ ಡಾ.ಡಿ.ಕೆ.ಚೌಟ, ಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ, ಮಹಮ್ಮದ್ ಕಂಚಿಲ, ಜಗದೀಶ ಶೆಟ್ಟಿ, ದಿನೇಶ್ ಬುಡಾಲೆ, ನಾರಾಯಣ ನಾಯ್ಕ ಮತ್ತಿತರರು, ಕ್ಯಾಂಪ್ಕೋ ಡಿಜಿಟಲ್ ವಿಭಾಗದ ಪ್ರಬಂಧಕ ಪ್ರಕಾಶ್ ಕುಮಾರ್ ಶೆಟ್ಟಿ, ಬಾಯಾರು ಶಾಖಾ ವ್ಯವಸ್ಥಾಪಕ ಶ್ರೀಧರ ಜಿ.ಪಿ.ವಿಟ್ಲ, ವಿಟ್ಲ ಶಾಖಾ ವ್ಯವಸ್ಥಾಪಕ ರಾಜೇಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.



