HEALTH TIPS

ಸೇವಾಅಘ್ರ್ಯ- ಗೋವಿಗಾಗಿ ಮೇವು-ಮೇವಿಗಾಗಿ ನಾವು ಸೀತಾಂಗೋಳಿ ಮುಖಾರಿಕಂಡದಲ್ಲಿ ಸಂಪನ್ನ

ಕುಂಬಳೆ: ಬಜಕೂಡ್ಲು ಅಮೃತಧಾರಾ ಗೋಶಾಲೆಯ `ಗೋವಿಗಾಗಿ ಮೇವು-ಮೇವಿಗಾಗಿ ನಾವು' ಯೋಜನೆಯ ಅಂಗವಾಗಿ ಭಾನುವಾರ ಸೀತಾಂಗೋಳಿ ಮುಖಾರಿಕಂಡದಲ್ಲಿ ನಡೆದ ಸೇವಾ ಅಘ್ರ್ಯದಲ್ಲಿ ವಿವಿಧ ಕ್ಲಬ್‍ನ ಸದಸ್ಯರು ಪಾಲ್ಗೊಂಡು ಗೋಸೇವೆಗೈದರು. ಕಳೆದ ಕೆಲವು ವಾರಗಳಿಂದ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ಮೇವು ಸಂಗ್ರಹಕ್ಕಾಗಿ ವಿವಿಧೆಡೆ ಶ್ರಮದಾನಗಳನ್ನು ನಡೆಸಲಾಗಿತ್ತು. ಅದರಂತೆ ಸೀತಾಂಗೋಳಿ ಮುಖಾರಿಕಂಡದಲ್ಲಿ ಪ್ರಕೃತಿ ಸಹಜವಾಗಿ ಬೆಳೆದ ಮುಳಿ ಹುಲ್ಲನ್ನು ಕಟಾವು ಮಾಡಿ ಸಾಗಿಸುವ ಕಾರ್ಯ ಆಯೋಜನೆಗೊಂಡಿತು. ಈ ವಿಶಿಷ್ಟವಾದ ಗೋಸೇವಾಕಾರ್ಯವನ್ನು ಕಾಮಧೇನು ಧ್ವಜಾರೋಹಣಗೈಯುವ ಮೂಲಕ ಪುತ್ತಿಗೆ ಗ್ರಾಮಪಂಚಾಯತಿ ಸದಸ್ಯ ಚಂದ್ರ ಮುಖಾರಿಕಂಡ ಉದ್ಘಾಟಿಸಿದರು. ಕೋಡಿಮೂಲೆ ಡಾ. ಸುರೇಶ ಭಟ್ ದಂಪತಿಗಳು ಫಲ ಸಮರ್ಪಣೆ ಮಾಡಿದರು. ಗೋಕರ್ಣ ಮಂಡಲದ ಕಾಮದುಘಾ ಕಾರ್ಯದರ್ಶಿ ಡಾ. ವೈ.ವಿ. ಕೃಷ್ಣ ಮೂರ್ತಿ ಕಾರ್ಯಕ್ರಮದ ರೂಪುರೇಷೆಯನ್ನು ಸವಿವರವಾಗಿ ನೀಡಿ ಮಾತನಾಡಿ, ಮಳೆಗಾಲದ ನಂತರ ವಿವಿಧೆಡೆಗಳಲ್ಲಿ ಹುಲುಸಾಗಿ ಬೆಳೆದ ಹುಲ್ಲು ಉಪಯೋಗವಾಗದೆ ನಾಶವಾಗುತ್ತಿದೆ. ಕೊನೆಗೆ ಬಿಸಿಲಲ್ಲಿ ಒಣಗಿ ಅನೇಕ ಕಡೆಗಳಲ್ಲಿ ಬೆಂಕಿಗೆ ಆಹುತಿಯಾಗಿರುವ ಘಟನೆಗಳೂ ನಮ್ಮ ಕಣ್ಣಮುಂದಿದೆ. ಇದನ್ನೆಲ್ಲ ಮನಗಂಡು ಈ ಯೋಜನೆಯನ್ನು ವಿಸ್ತರಿಸಲಾಗಿದೆ. ಗೋವನ್ನು ಸಾಕಲು ಅಸಾಧ್ಯವಾದವರು ಈ ಮೂಲಕವೂ ಗೋಸೇವಾ ಕಾರ್ಯದಲ್ಲಿ ಪಾಲ್ಗೊಳ್ಳಬಹುದು. ಇಂದು ಇಲ್ಲಿ ಸೇರಿದ ವಿವಿಧ ಸಂಘಟನೆಗಳ ಕಾರ್ಯಕರ್ತರು ಧನ್ಯರಾದರು ಎಂದು ಅಭಿಪ್ರಾಯಪಟ್ಟರು. ಕೋಡಿಮೂಲೆ ಪ್ರೆಂಡ್ಸ್ ಕ್ಲಬ್, ವೀರ ಹನುಮಾನ್ ಪ್ರೆಂಡ್ಸ್ ಕ್ಲಬ್, ಮಹಿಳಾ ಘಟಕ ಕೋಡಿಮೂಲೆ ಮುಕಾರಿಕಂಡ, ಮುಳ್ಳೇರಿಯ ಹವ್ಯಕ ಮಂಡಲದ ವಿವಿಧ ವಲಯಗಳ ಕಾರ್ಯಕರ್ತರು ಭಾಗವಹಿಸಿದ್ದರು. 10ಹುಲ್ಲು ಕತ್ತರಿಸುವ ಯಂತ್ರವನ್ನು ಬಳಸಿ ಕಟಾವು ಮಾಡಲಾಗಿತ್ತು. 90 ಕ್ಕೂ ಅಧಿಕ ಗೋಕಿಂಕರರೆಲ್ಲ ಸೇರಿ ಕಟ್ಟ ಕಟ್ಟಿ ಲಾರಿಗೆ ತುಂಬಿ ಬಜಕೂಡ್ಲು ಗೋಶಾಲೆಗೆ ಸಾಗಿಸಲಾಯಿತು. ಸೇವಾಕಿಂಕರರಿಗೆ ಇಡೀ ದಿನದ ತಿಂಡಿ, ಬಾಯಾರಿಕೆ, ಊಟದ ವ್ಯವಸ್ಥೆಯ ಜವಾಬ್ದಾರಿಯನ್ನು ಮಾತೃ ವಿಭಾಗದವರು ವಹಿಸಿದ್ದರು. ಸೇವಾ ಕೈಂಕರ್ಯದಲ್ಲಿ ಗೋಕರ್ಣ ಮಹಾಮಂಡಲ ಅಧ್ಯಕ್ಷೆ ಈಶ್ವರಿ ಶ್ಯಾಮ ಭಟ್ ಬೇರ್ಕಡವು, ಉಲ್ಲೆಖ ಪ್ರಧಾನ ಬಳ್ಳಮೂಲೆ ಗೋವಿಂದ ಭಟ್, ಡಾ.ಮಾಲತಿ ಪ್ರಕಾಶ ಭಟ್, ಶ್ಯಾಮ ಭಟ್ ಬೇರ್ಕಡವು, ಮುಳ್ಳೇರಿಯಾ ಮಂಡಲ ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ಉಲ್ಲೇಖ ಪ್ರಧಾನ ಕೃಷ್ಣ ಮೋಹನ, ಜೀವಿಕಾವಿಭಾಗ ಪ್ರಧಾನ ಸತ್ಯ ಶಂಕರ ಭಟ್, ಸಹಾಯ ವಿಭಾಗದ ಪುರುಷೋತ್ತಮ ಭಟ್, ವಿದ್ಯಾರ್ಥಿವಾಹಿನೀ ಪ್ರಧಾನ ಕೇಶವಪ್ರಸಾದ ಎಡಕ್ಕಾನ, ಕುಂಬಳೆ ವಲಯಾಧ್ಯಕ್ಷ ಬಾಲಕೃಷ್ಣ ಶರ್ಮ, ಗುಂಪೆ ವಲಯ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಬೆಜಪ್ಪೆ, ಕುಂಬಳೆ ವಲಯ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್, ಕುಂಬಳೆ ವಲಯ ಸೇವಾ ಪ್ರಧಾನ ಸೂರ್ಯನಾರಾಯಣ, ವಿವಿಧ ವಲಯ ಗುರಿಕ್ಕಾರರು, ಪದಾಧಿಕಾರಿಗಳು, ವಿದ್ಯಾರ್ಥಿಗಳು, ಮಾತೆಯರು ಭಾಗವಹಿಸಿದ್ದರು. ಮುಂದಿನ ಸೇವಾಅಘ್ರ್ಯವು ಮುಕಾರಿಕಂಡದಲ್ಲಿ ಜ. 2ರಂದು ಅಪರಾಹ್ನ 2 ಗಂಟೆಗೆ ಮಾಡುವುದೆಂದು ನಿಶ್ಚಯಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries