ಸಮಗ್ರ ಪ್ರಗತಿಗೆ ಶಿಕ್ಷಣವೇ ಕಾರಣ: ರಾಜ್ಯಪಾಲ
0
ಡಿಸೆಂಬರ್ 19, 2018
ಕಾಸರಗೋಡು: ಇಂದು ನಾವು ಅನುಭವಿಸುತ್ತಿರುವ ಸಾಮಾಜಿಕ-ಆರ್ಥಿಕ-ಪರಿಸರ ಅಭಿವೃದ್ಧಿಗೆ ಶಿಕ್ಷಣವೇ ಕಾರಣ ಎಂದು ರಾಜ್ಯಪಾಲ, ನ್ಯಾಯಮೂರ್ತಿ ಪಿ.ಸದಾಶಿವಂ ಅಭಿಪ್ರಾಯಪಟ್ಟರು.
ಜಿಲ್ಲೆಯ ಕಾಂಞÂಂಗಾಡು ಬಳಿಯ ಅಜಾನೂರಿನ ಕ್ರಸಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಬೆಳ್ಳಿಹಬ್ಬ ಕಟ್ಟಡವನ್ನು ಮಂಗಳವಾರ ನಡೆದ ಸಮಾರಂಭದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಸಭ್ಯ ಬದುಕು ಸಾಧ್ಯವಾಗಿದ್ದು, ಮೂಲಭೂತವಾದ ಎಲ್ಲ ವಿಚಾರಗಳನ್ನು ಗಳಿಸಿರುವುದು ವಿದ್ಯಾಭ್ಯಾಸದ ಕಾರಣದಿಂದಲೇ ಎಂದವರು ಹೇಳಿದರು. ಬದುಕಿನ ಎಲ್ಲ ವಲಯಗಳು ಸುಧಾರಿತಗೊಳ್ಳುವುದು ತಾಂತ್ರಿಕತೆಯ ಮೂಲಕ. ಆದರೆ ಇದು ಮಾನವೀಯತೆಯ ಅಳತೆ ಮೀರಬಾರದು. ಇತ್ತೀಚಿನ ದಿನಗಳಲ್ಲಿ ಸರಕಾರಿ ವಿದ್ಯಾಲಯಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಭೌತಿಕ ಅಭಿವೃದ್ಧಿ ವಿಚಾರದಲ್ಲಿ ಜಾಗೃತಿ ವಹಿಸುತ್ತಿರುವ ಕಾರಣ ತಾಂತ್ರಿಕ ಶಿಕ್ಷಣದ ಸಂಯೋಜನೆ ಸುಲಭ ಸಾಧ್ಯವಾಗಿದೆ ಎಂದರು.
ತಮ್ಮ ಕಲಿಕೆಯ ದಿನಗಳಲ್ಲಿದ್ದ ಸೀಮಿತ ಅವಕಾಶಗಳನ್ನು ಅವರು ಈ ಸಂದರ್ಭ ನೆನಪಿಸಿಕೊಂಡರು. ಕೇರಳದ ಉನ್ನತ ಶಿಕ್ಷಣ ರಂಗದಲ್ಲಿ ಗುಣಮಟ್ಟದಲ್ಲಿ ಕೊಂಚ ಏರುಪೇರಾಗಿದೆ ಎಂಬ ಕೆಲವರ ದೂರಿನ ಹಿನ್ನೆಲೆಯಲ್ಲಿ ೫ ಕೋಟಿ ರೂ. ಬಹುಮಾನ ಇರುವ ಚಾಂಸಿಲರ್ಸ್ ಅವಾರ್ಡ್ ಏರ್ಪಡಿಸಲಾಗಿದೆ ಎಂದೂ, ಆದರೆ ಅದರಲ್ಲಿ ನೂತನವಾಗಿ ರಚನೆಗೊಂಡಿರುವ ವಿವಿಗಳಿಗೆ ಸ್ಪರ್ಧಿಸಲು ಸಾಧ್ಯವಾಗದೇ ಇರುವುದರಿಂದ ಯಂಗ್ ಎಮರ್ಜಿಂಗ್ ಎಂಬ ವಿಶೇಷ ಅವಾರ್ಡ್ ನೀಡುವ ಕ್ರಮ ಕೈಗೊಳ್ಳಲಾಗಿದೆ ಎಂದವರು ತಿಳಿಸಿದರು.
ಕೇರಳದ ವಿವಿಗಳ ಚಾಂಸಿಲರ್ ಪದವಿ ಅಲಂಕರಿಸಿರುವ ರಾಜ್ಯಪಾಲರಿಗೆ ದಿನಕ್ಕೆ ೧೦ರಿಂದ ೧೫ ಇ-ಮೇಲ್ ವಿದ್ಯಾರ್ಥಿಗಳ ಸಹಿತ ಸಾರ್ವಜನಕರಿಂದ ಲಭಿಸುತ್ತಿದೆ. ಬಹುತೇಕ ದೂರುಗಳಿಗೆ ಪರಿಹಾರ ಒದಗಿಸಲು ಯತ್ನಿಸುತ್ತಿರುವುದಾಗಿ ಅವರು ಹೇಳಿದರು.
ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಮಾತನಾಡಿದ ಅವರು ಬದಲಾಗುತ್ತಿರುವ ಜಗತ್ತಿನಲ್ಲಿ ಆಂಗ್ಲಭಾಷೆಯ ಬಳಕೆ ಅನಿವಾರ್ಯ ಎಂದು ವಿವರಿಸಿದ ಅವರು ಶೈಕ್ಷಣಿಕವಾಗಿ ಹಿಂದುಳಿದ ವಲಯಗಳನ್ನು ಪ್ರಧಾನವಾಹಿನಿಗೆ ಕರೆತರುವ ಸರ್ವ ಯತ್ನ ಶಿಕ್ಷಣಾಲಯಗಳು ನಡೆಸಬೇಕು ಎಂದು ಆಗ್ರಹಿಸಿದರು.
ವಿಧಾನಸಭೆ ಪ್ರತಿಪಕ್ಷ ಉಪನೇತಾರ ಡಾ.ಎಂ.ಕೆ.ಮುನೀರ್, ಅಜಾನೂರು ಗ್ರಾಮಪಂಚಾಯತ್ ಅಧ್ಯಕ್ಷ ಪಿ.ದಾಮೋದರನ್, ಶಾಲೆಯ ಅಧ್ಯಕ್ಷ ಎಂ.ಬಿ.ಎಂ.ಅಶ್ರಫ್, ಉಪಾಧ್ಯಕ್ಷ ಸಿ.ಮಹಮ್ಮದ್ ಕುಂಞÂ ಪ್ರಬಂಧಕ ಪಿ.ಕೆ.ಅಬ್ದುಲ್ಲ ಕುಂಞÂ ಮೊದಲಾದವರು ಉಪಸ್ಥಿತರಿದ್ದರು.
೧೯೮೭ರಲ್ಲಿ ಸ್ಥಾಪನೆಗೊಂಡ ಈ ಶಾಲೆ ಸಿ.ಎಚ್.ಮಹಮ್ಮದ್ ಕೋಯ ಸ್ಮಾರಕ ಶಿಕ್ಷಣ ಮತ್ತು ಚಾರಿಟಿ ಟ್ರಸ್ಟ್ ಸ್ವಾಮ್ಯದಲ್ಲಿ ಚಟುವಟಿಕೆ ನಡೆಸುತ್ತಿದೆ.

