ಕುಂಟಾರು ಶಾಲೆಯಲ್ಲಿ ಎನ್‍ಎಸ್‍ಎಸ್ ಶಿಬಿರ ಆರಂಭ
0
ಡಿಸೆಂಬರ್ 22, 2018
ಮುಳ್ಳೇರಿಯ: ಬೋವಿಕ್ಕಾನ ಬಿಎಆರ್‍ಎಚ್‍ಎಸ್ ಶಾಲೆಯ ಎನ್‍ಎಸ್‍ಎಸ್ ಸಪ್ತದಿನ ಶಿಬಿರ ಹರಿತಂ-2018 ಶನಿವಾರ ಆರಂಭಗೊಂಡಿದ್ದು ಡಿ.28ರ ತನಕ ಕುಂಟಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಶನಿವಾರ ಕುಂಟಾರು ಶಾಲೆಯ ಮುಖ್ಯ ಶಿಕ್ಷಕಿ ಪ್ರಶಾಂತ ಧ್ವಜಾರೋಹಣ ಮಾಡಿದರು. ಮಧ್ಯಾಹ್ನ ನಡೆದ ಕಾರ್ಯಕ್ರಮದಲ್ಲಿ ಕಾರಡ್ಕ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಓಮನಾ ರಾಮಚಂದ್ರನ್ ಉದ್ಘಾಟಿಸಿ ರಾಷ್ಟ್ರದ ಸಂಪತ್ತು ಮಕ್ಕಳು. ಆರೋಗ್ಯಯುತ ಸಮಾಜ ನಿರ್ಮಾಣ ಎನ್‍ಎಸ್‍ಎಸ್ ಗುರಿಯಾಗಬೇಕು. ಉತ್ತಮ ವ್ಯಕ್ತಿತ್ವದ ವಾರಸುದಾರರಾಗಬೇಕು. ನಾಡಿನ ಅಭಿವೃದ್ಧಿಯಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಕಾರಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಸೂಯ ರೈ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜನನಿ, ಕುಂಟಾರು ಶಾಲೆಯ ವ್ಯವಸ್ಥಾಪಕ ಜಗದೀಶ್.ಕೆ, ಬೋವಿಕ್ಕಾನ ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಗಫೂರ್, ಕುಂಟಾರು ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಶಿಧರ, ಬೋವಿಕ್ಕಾನ ಶಾಲೆಯ ಮಾತೃಸಂಘದ ಅಧ್ಯಕ್ಷರಾದ ಸುಹರಾ, ಬಿಎಆರ್‍ಎಚ್‍ಎಸ್‍ಎಸ್ ಪ್ರಾಂಶುಪಾಲ ಮೆಜೋ ಜೋಸೆಫ್, ಮುಖ್ಯ ಶಿಕ್ಷಕ ಅರವಿಂದಾಕ್ಷನ್ ನಂಬ್ಯಾರ್, ಕುಂಟಾರು ಶಾಲೆಯ ಮುಖ್ಯ ಶಿಕ್ಷಕಿ ಪ್ರಶಾಂತ, ಪಿಎಸಿ ಸದಸ್ಯರಾದ ಮಣಿಕಂಠನ್, ಶಿಕ್ಷಕಿ ಆಶಾ ಉಪಸ್ಥಿತರಿದ್ದರು.
ಸಂಘಟನಾ ಸಮಿತಿ ಅಧ್ಯಕ್ಷೆ ಶ್ರೀವಿದ್ಯಾ ಸ್ವಾಗತಿಸಿದರು. ಎನ್‍ಎಸ್‍ಎಸ್ ಕಾರ್ಯಯೋಜನಾ ಅಧಿಕಾರಿ ಪ್ರೀತಮ್.ಎ.ಕೆ ವಂದಿಸಿದರು.


