ದೇವರಲ್ಲಿ ನಂಬಿಕೆ ಇರುವ ತಾಯಂದಿರು ಎಡರಂಗದ ನವೋತ್ಥಾನ ಗೋಡೆ ಬಹಿಷ್ಕರಿಸಿ- ಮೀರಾ ಆಳ್ವ
0
ಡಿಸೆಂಬರ್ 19, 2018
ಮಂಜೇಶ್ವರ: ಶಬರಿಮಲೆ ಆಚಾರ ಉಲ್ಲಂಘನೆ ಮಾಡಲು ಸ್ತ್ರೀಯರನ್ನು ಉಪಯೋಗಿಸಿ ವಿಫಲವಾದ ರಾಜ್ಯ ಸರಕಾರ ಇದೀಗ ಸ್ತ್ರೀಯರನ್ನು ಮುಂದಿಟ್ಟು ನವೋತ್ಥಾನದ ಹೆಸರಲ್ಲಿ ಗೋಡೆ ನಿರ್ಮಿಸಲು ಸರಕಾರಿ ಪ್ರಾಯೋಜಿತ ಕಾರ್ಯಕ್ರಮ ಮಾಡುತ್ತಿರುವುದು ಅಧಿಕಾರದ ದುರುಪಯೋಗ ಎಂದು ವಿಶ್ವ ಹಿಂದೂ ಮಾತೃ ಸಮಿತಿ ಅಧ್ಯಕ್ಷೆ ಮೀರಾ ಆಳ್ವ ಹೇಳಿದರು.
ರೆಹನ ಫಾತಿಮಾಳಂತಹ ಸ್ತ್ರೀಯನ್ನು ಆಯ್ಯ್ಯಪ್ಪ ಸನ್ನಿಧಿಗೆ ಪೊಲೀಸ್ ವೇಷ ಧರಿಸಿ ಕರೆದೊಯ್ದ ಎಡರಂಗದ ನಿರ್ಣಯ ಸುಸಂಸ್ಕೃತ ಮಾತೆಯರಿಗೆ ಸರಕಾರ ಮಾಡಿದ ಅವಮಾನ. ಎಡರಂಗ ಸರಕಾರ ಹಿಂದೂ ಸ್ತ್ರೀಯರನ್ನು ಕಪಟ ಭರವಸೆ ನೀಡಿ ವಂಚಿಸುತ್ತಿದೆ. ಬಡ ಉದ್ಯೋಗ ಖಾತರಿ ಸ್ತ್ರೀಯರನ್ನು, ಆಶಾ ಕಾರ್ಯಕರ್ತೆಯರನ್ನು, ಶಿಕ್ಷಕರನ್ನು ಬೆದರಿಸಿ ಎಡರಂಗದ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಂದ ಆದೇಶ ಮಾಡಿಸಿ ಬೆದರಿಸುತ್ತಿರುವುದು ಖಂಡನೀಯ. ದೇವರಲ್ಲಿ ವಿಶ್ವಾಸವಿರುವ, ಹಿಂದೂ ಆಚಾರ ಅನುಷ್ಠಾನ ಮಾಡುವ ತಾಯಂದಿರು ಎಡರಂಗದ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು ಎಂದವರು ತಿಳಿಸಿದರು. ಶಬರಿಮಲೆ ವಿಚಾರದಲ್ಲಿ ಹಿಂದೂ ತಾಯಂದಿರಿಗೆ ಅವಮಾನಿಸಿದ ಸರಕಾರಕ್ಕೆ ಹಿಂದುಗಳು ಒಗ್ಗಟಾಗಿ ಉತ್ತರ ನೀಡಬೇಕು. ತಪ್ಪು ಮಾಹಿತಿ ನೀಡಿ ಹಿಂದೂ ಮಹಿಳೆಯರನ್ನು ನವೋತ್ಥಾನದ ಹೆಸರಲ್ಲಿ ರಸ್ತೆಯಲ್ಲಿ ನಿಲ್ಲಿಸುವ ಪ್ರಯತ್ನ ಮಾಡಿದರೆ ಅದು ವಿಫಲವಾಗಲಿದೆ. ಸಾಧ್ಯವಾದರೆ ಅನ್ಯ ಧರ್ಮಿಯ ಮಾತೆಯರನ್ನು ಸೇರಿಸಿ ನವೋತ್ಥಾನ ನಿರ್ಮಿಸಲಿ ಎಂದು ಹೇಳಿದರು.
ಡಿ. 26 ರಂದು ಮಂಜೇಶ್ವರದಿಂದ ತಿರುವನಂತಪುರದವರೆಗೆ ಜರಗುವ ಆಯ್ಯ್ಯಪ್ಪ ಜ್ಯೋತಿ ಕಾರ್ಯಕ್ರಮದಲ್ಲಿ ಹಿಂದುಗಳು ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಗಿರಿಜಾ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಅನುಪಮ ನವೀನರಾಜ್, ಚಂಚಲಾಕ್ಷಿ ಕಡಪ್ಪರ, ವಿಮಲ ನಾರಾಯಣ್, ಜಯಲಕ್ಷ್ಮಿಕೃಷ್ಣ, ಜಯಶ್ರೀ ಮಾಡ, ಶಶಿಕಲಾ ಮಾಡ, ಪ್ರಮೀಳಾ ಮಂಜು, ಗೀತಾ ವಸಂತ, ಸರೋಜ ಬಲ್ಲಾಳ್ ,ಅಶಲತಾ ಪೇಲಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಜಯಲಕ್ಷ್ಮಿ ಭಟ್ ಸ್ವಾಗತಿಸಿ, ಜಯಂತಿ ಶೆಟ್ಟಿ ವಂದಿಸಿದರು.


