ಕೇಂದ್ರ ಸರಕಾರದ ಗ್ರಾಹಕನೀತಿ ಬದಲಾವಣೆ ಯತ್ನ ಸ್ವಾಗತಾರ್ಹ: ಸಚಿವ ಪಿ.ತಿಲೋತ್ತಮನ್
0
ಡಿಸೆಂಬರ್ 22, 2018
ಉಪ್ಪಳ: ಗ್ರಾಹಕರಿಗೆ ಬೇಕಾದ ಉತ್ಪನ್ನಗಳು ಆನ್‍ಲೈನ್ ಸಹಿತ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಮನೆಬಾಗಿಲಿಗೇ ತಲಪುತ್ತಿರುವ ಇಂದಿನ ಯುಗದಲ್ಲಿ ಗ್ರಾಹಕನೀತಿಯಲ್ಲಿ ಬದಲಾವಣೆ ತರುವ ಕೇಂದ್ರ ಸರಕಾರದ ಯತ್ನ ಸ್ವಾಗತಾರ್ಹ ಎಂದು ರಾಜ್ಯ ಕಾನೂನು ತೂಕ-ಅಳತೆ ಸಚಿವ ಪಿ.ತಿಲೋತ್ತಮನ್ ಅಭಿಪ್ರಾಯಪಟ್ಟರು.
ಮಂಜೇಶ್ವರ ಕಾನೂನು ತೂಕ-ಅಳತೆ ಇನ್ಸ್‍ಪೆಕ್ಟರ್ ಕಚೇರಿಯನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ವೇಳೆ ಗ್ರಾಹಕರ ಹಕ್ಕು ಸಂರಕ್ಷಣೆಗಿರುವ ರಾಜ್ಯಸರಕಾರಗಳ ಅಧಿಕಾರಗಳನ್ನು ಕಡಿತಗೊಳಿಸಿರುವ ಕೇಂದ್ರ ಸರಕಾರದ ನೀತಿ ನುಂಗಲಾರದ ತುತ್ತಾಗಿದ್ದು, ಇದನ್ನು ಪುನರ್ ಪರಿಶೀಲನೆ ನಡೆಸಬೇಕು ಎಂದವರು ಆಗ್ರಹಿಸಿದರು. 1986ರಲ್ಲಿ ಗ್ರಾಹಕರ ಹಿತ ಸಂರಕ್ಷರಣೆಗಾಗಿ ಅನುಷ್ಠಾನಕ್ಕೆ ತರಲಾದ ನೀತಿ ಬಹು ಪ್ರಯೋಜನಕಾರಿಯಾಗಿತ್ತು ಎಂದು ತಿಳಿಸಿದರು.
ತಂತ್ರಜ್ಞಾನ ಬದಲಾಗುತ್ತಿದ್ದಂತೆ ಬದುಕಿನ ರೀತಿಗಳೂ ಬದಲಾಗುತ್ತಿವೆ. ಈ ವೇಳೆ ಕಾನೂನಿನಲ್ಲೂ ಬದಲಾವಣೆ ಅನಿವಾರ್ಯ. ಉತ್ಪಾದಕನಿಂದ ಗ್ರಾಹಕರು ನೇರವಾಗಿ ಉತ್ಪನ್ನಗಳನ್ನು ಖರೀದಿಸುವ ಕ್ರಮ ವ್ಯಾಪಕವಾಗುತ್ತಿದೆ. ಈ ವೇಳೆ ರಾಜ್ಯ ಮಟ್ಟದಲ್ಲಿ ರಚಿಸಲಾದ ನೀತಿಗಳೂ ಆಯಾ ಪ್ರದೇಶದ ಜನತೆಗೆ ಪೂರಕವಾಗಿದ್ದರೆ, ಅದನ್ನು ತಿರಸ್ಕರಿಸಬಾರದು ಎಂದು ಹೇಳಿದರು.
ಆಹಾರ ಧಾನ್ಯಗಳ ಖರೀದಿಯಿಂದ ತೊಡಗಿ ಚಿಕಿತ್ಸಾ ವಲಯದಲ್ಲಿ ಲಭಿಸುವ ಸೇವೆ ವರೆಗೆ ಕಾನೂನು ತೂಕ-ಅಳತೆ ಇಲಾಖೆ ನಡೆಸುತ್ತಿರುವ ನಿರೀಕ್ಷಣೆ, ಗ್ರಾಹಕರಿಗೆ ನ್ಯಾಯ ಒದಗಿಸುವ ಕ್ರಮಗಳು ಜನಪರ ಸೇವೆಗೆ ನಿದರ್ಶನವಾಗಿದೆ. ನೂತನವಾಗಿ ರಾಜ್ಯದಲ್ಲಿ ರಚನೆಗೊಂಡ 14 ತಾಲೂಕುಗಳಲ್ಲೂ ಕಾನೂನು ತೂಕ-ಅಳತೆ ಇನ್ಸ್ ಪೆಕ್ಟರರ ಕಚೇರಿ ಮಂಜೂರಾಗಿದೆ. ಅವುಗಳಲ್ಲಿ 9ನೇ ಕಚೇರಿ ಮಂಜೇಶ್ವರದ್ದು. ಗ್ರಾಹಕ ಅತಿಥಿಯಂತೆ ಎಂಬ ಗಾಂಧೀಜಿ ಅವರ ನುಡಿ ನಮಗೆ ಮಾದರಿ ಎಂದು ಹೇಳಿದರು.
ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಮುಖ್ಯ ಅತಿಥಿಯಾಗಿದ್ದರು. ಮಂಗಲ್ಪಾಡಿ ಗ್ರಾಮಪಂಚಾಯತಿ ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡ್, ವರ್ಕಾಡಿ ಗ್ರಾಮಪಂಚಾಯತಿ ಅಧ್ಯಕ್ಷ ಅಬ್ದುಲ್ ಹಮೀದ್ ಬಿ.ಎ., ಕುಂಬಳೆ ಗ್ರಾಮಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್, ವಿವಿಧ ರಾಜಕೀಯ ಪಕ್ಷಗಳ ನೇತಾರರಾದ ಕೆ.ಆರ್.ಜಯಾನಂದ, ಹಸೈನಾರ್ ನುಳ್ಳಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಇಲಾಖೆ ನಿಯಂತ್ರಣಾಧಿಕಾರಿ ಡಾ.ಪಿ.ಸುರೇಶ್ ಬಾಬು ಸ್ವಾಗತಿಸಿದರು. ಉತ್ತರ ವಲಯ ಹೆಚ್ಚುವರಿ ನಿಯಂತ್ರಣಾಧಿಕಾರಿ ಶಶೀಂದ್ರನ್ ಕೆ.ವಿ. ವಂದಿಸಿದರು.

