ಕನ್ನಡ ಪರ ಚಟುವಟಿಕೆಗಳು ಗಡಿನಾಡಿನ ಕನ್ನಡ ಅಸ್ಮಿತೆಯನ್ನು ಕಾಪಿಡುವಲ್ಲಿ ಬಲ ನೀಡುತ್ತಿದೆ-ಕೇಶವ ಪ್ರಸಾದ ಕುಳಮರ್ವ
0
ಡಿಸೆಂಬರ್ 22, 2018
ಸಿರಿಚಂದನ ಯುವ ಬಳಗದ 9ನೇ ಸರಣಿ ಕಾರ್ಯಕ್ರಮ
ಉಪ್ಪಳ: ಭಾಷೆ, ಸಂಸ್ಕøತಿಗಳ ಮೇಲಿನ ಪ್ರೀತಿ, ಅಭಿಮಾನವಿಲ್ಲದ ಯಾಂತ್ರಿಕ, ವ್ಯಾವಹಾರಿಕ ಬದುಕು ಜೀವನವನ್ನು ಹಾನಿಗೊಳಿಸುತ್ತದೆ. ಜೊತಗೆ ಬದುಕಿನ ಮೂಲ ಪರಿಕಲ್ಪನೆಗೆ ಅಪಚಾರವೆಸಗಿದ ಪಾಪತ್ವ ಅಂಟಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಾಮಾಜಿಕ-ಸಾಂಸ್ಕøತಿಕದಂತಹ ವಿಚಾರಗಳಿಗೂ ಒಂದಷ್ಟು ಒಲವು ಬೆಳೆಸಬೇಕು ಎಂದು ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಅಧೀಕ್ಷಕ ಕೇಶವಪ್ರಸಾದ ಕುಳಮರ್ವ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಸರಗೋಡಿನ ಸಿರಿಚಂದನ ಕನ್ನಡ ಯುವ ಬಳಗ ತಿಂಗಳ ಕಾರ್ಯಕ್ರಮ ಯಕ್ಷ ನುಡಿ ಸರಣಿ ಮನೆಮನೆ ಅಭಿಯಾನದ 9ನೇ ಸರಣಿ ಕಾರ್ಯಕ್ರಮ ಹಾಗೂ ಕನ್ನಡ ಜಾಗೃತಿ ಉಪನ್ಯಾಸವನ್ನು ಶನಿವಾರ ಅಪರಾಹ್ನ ಬೇಕೂರು ಸಮೀಪದ ಅಗರ್ತಿಮೂಲೆಯ ಗೀತಾ ಅವರ ಸ್ವಗೃಹದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಗಡಿನಾಡಿನ ಕನ್ನಡ ಯುವ ಮನಸ್ಸುಗಳಲ್ಲಿ ಧೈರ್ಯ-ಜಾಗೃತಿಗಾಗಿ ನಿರಂತರ ಚಟುವಟಿಕೆಗಳು ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತಿದೆ. ಯಕ್ಷಗಾನ ಕಲೆಯು ಕನ್ನಡದ ಗಟ್ಟಿತನವನ್ನು ದೃಢಗೊಳಿಸುವಲ್ಲಿ ಅಳಿಸಲಾರದ ಕೊಡುಗೆ ನೀಡುತ್ತಿದೆ ಎಂದು ಅವರು ತಿಳಿಸಿದರು. ಸಿರಿಚಂದನ ಕನ್ನಡ ಯುವ ಬಳಗ ಜಿಲ್ಲೆಯಾದ್ಯಂತ ನಡೆಸುತ್ತಿರುವ ಸರಣಿ ಕಾರ್ಯಕ್ರಮ ಕನ್ನಡ ಮನಸ್ಸುಗಳಲ್ಲಿ ಸಂಚಲನ ಮೂಡಿಸುವಲ್ಲಿ ಸಫಲವಾಗಿದೆ. ಇನ್ನಷ್ಟು ಗುಣಮಟ್ಟದ ಕಾರ್ಯಕ್ರಮಗಳು ಈ ಮೂಲಕ ಮೂಡಿಬರಲಿ ಎಂದು ಅವರು ಹಾರ್ಯಸಿದರು.
ಸಿರಿಚಂದನ ಕನ್ನಡ ಯುವ ಬಳಗದ ಕೋಶಾಧಿಕಾರಿ ವಿನೋದ್ ಕುಮಾರ್ ಸಿ.ಎಚ್. ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಯಕ್ಷಗಾನ ಗುರು, ಸಂಘಟಕ ರಾಮ ಸಾಲಿಯಾನ್ ಮಂಗಲ್ಪಾಡಿ ಅವರು ಯುವಕರನ್ನು ಜೊತೆಯಾಗಿಸಿ ಅವರಲ್ಲಿರುವ ಕಲಾಭಿವ್ಯಕ್ತಿತ್ವವನ್ನು ಬೆಳೆಸುವಲ್ಲಿ ಸಿರಿಚಂದನ ಬಳಗ ನಡೆಸುತ್ತಿರುವ ಪ್ರಯತ್ನಗಳು ಶ್ಲಾಘನೀಯ ಎಂದು ತಿಳಿಸಿದರು.
ಸಮಾರಂಭದಲ್ಲಿ ಕನ್ನಡ ಜಾಗೃತಿ ವಿಶೇಷೋಪನ್ಯಾಸಗೈದು ಮಾತನಾಡಿದ ಆದೂರು ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕಿ ತಾಹಿರಾ ಎಂ. ಅವರು, ರಾಷ್ಟ್ರದ ಬೇರೆ ಯಾವ ಭಾಷೆಗಳಲ್ಲೂ ಕಂಡುಬರಲಾರದ ಸಂಸ್ಕøತಿ-ಸಂಸ್ಕಾರಗಳಿರುವ ಏಕೈಕ ಭಾಷೆ ಕನ್ನಡ ಮಾತ್ರ ಆಗಿದೆ. ಕನ್ನಡ ಭಾಷೆಯ ಬಗೆಗಿನ ಕೀಳರಿಮೆಯ ದೃಷ್ಟಿಕೋನ ಅಧಃಪತನಕ್ಕೆ ಕಾರಣವಾಗುವುದೇ ಹೊರತು ಬೇರೇನನ್ನೂ ನಿರೀಕ್ಷಿಸಲಾಗದು ಎಂದು ತಿಳಿಸಿದರು. ಕಾಸರಗೋಡಿನ ಕನ್ನಡ ಅಸ್ಮಿತೆಯನ್ನು ಕಾಪಿಡುವಲ್ಲಿ ಯುವ ಸಮೂಹ ಕೀಳರಿಮೆಯನ್ನು ಬಿಟ್ಟು ಎದ್ದೇಳಬೇಕು. ವಿಶಾಲ ಮನೋಭಾವದಿಂದ ಗ್ರಹಿಸುವ ಶಕ್ತಿ ಜಾಗೃತವಾಗಿರಬೇಕು ಎಂದು ಕರೆನೀಡಿದರು.
ಗೀತಾ ಅಗರ್ತಿಮೂಲೆ, ಸುಜಿತ್ ಕುಮಾರ್ ಉಪ್ಪಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿರಿಚಂದನ ಕನ್ನಡ ಯುವ ಬಳಗದ ಮಾರ್ಗದರ್ಶಕ, ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಪ್ರಾಸ್ತಾವಿಕವಾಗಿ ಮಾತನಾಡಿ ಯುವ ಬಳಗದ ಉದ್ದೇಶ ಲಕ್ಷ್ಯಗಳ ಬಗ್ಗೆ ಮಾಹಿತಿ ನೀಡಿದರು. ಬದಿಯಡ್ಕ ಉಪನೋಂದಾವಣಾ ಕಚೇರಿಯ ಸಿಬ್ಬಂದಿ ಹರೀಶ್ ಮಂಗಲ್ಪಾಡಿ ಸ್ವಾಗತಿಸಿ, ಶಿವಕುಮಾರ್ ಅಗರ್ತಿಮೂಲೆ ವಂದಿಸಿದರು. ಸುಜಾತಾ ಸಿ.ಎಚ್. ಕಾರ್ಯಕ್ರಮ ನಿರೂಪಿಸಿದರು. ಶ್ರದ್ದಾ ನಾಯರ್ಪಳ್ಳ ಪ್ರಾರ್ಥಿಸಿದರು.
ಬಳಿಕ ಸಿರಿಚಂದನ ಕನ್ನಡ ಯುವ ಬಳಗದವರಿಂದ ಭೀಷ್ಮ ವಿಜಯ ಪ್ರಸಂಗದ ತಾಳಮದ್ದಳೆ ಕೂಟ ನಡೆಯಿತು.ಹಿಮ್ಮೇಳದಲ್ಲಿ ಸಂದೇಶ್ ಪಂಜತ್ತೊಟ್ಟಿ, ಶಂಕರ ಕಾಮತ್ ಚೇವಾರು, ಶಿವರಾಮ ಆಚಾರ್ಯ ಚೇವಾರು ಸಹಕರಿಸಿದರು. ಮುಮ್ಮೇಳದಲ್ಲಿ ಡಾ.ರತ್ನಾಕರ ಮಲ್ಲಮೂಲೆ, ನವೀನ ಕುಂಟಾರು, ಶ್ರದ್ದಾ ಭಟ್ ನಾಯರ್ಪಳ್ಳ, ಮಣಿಕಂಠ ಪಾಂಡಿಬಯಲು, ಕಾರ್ತಿಕ್ ಪಡ್ರೆ ಮೊದಲಾದವರು ಪಾತ್ರಗಳನ್ನು ನಿರ್ವಹಿಸಿದರು. ಶ್ರದ್ದಾ ನಾಯರ್ಪಳ್ಳ ಕಲಾವಿದರ ಪರಿಯಚ ನೀಡಿದರು. ಸುಜಿತ್ ಕುಮಾರ್ ಉಪ್ಪಳ ವಂದಿಸಿದರು.



