ಪೆರ್ಮುದೆ : ಕ್ರಿಸ್ಮಸ್ ಕ್ಯಾರಲ್ಸ್
0
ಡಿಸೆಂಬರ್ 17, 2018
ಕುಂಬಳೆ: ಜಗದೋದ್ಧಾರಕ ಪ್ರಭು ಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್ ಹಬ್ಬಕ್ಕೆ ನಾಡಿನಾದ್ಯಂತ ವೈಭವದ ಸಿದ್ಧತೆ ನಡೆಯುತ್ತಿದೆ. ಕ್ರಿಸ್ಮಸ್ ಸಂಭ್ರಮದಲ್ಲಿ ಕ್ರಿಸ್ಮಸ್ ತಾತನ ನೆನಪು ಪ್ರಮುಖವಾದುದಾಗಿದೆ. ಮನುಕುಲದ ರಕ್ಷಣೆಗಾಗಿ ಭೂಲೋಕದಲ್ಲಿ ಜನಿಸಿದ ಯೇಸುಕ್ರಿಸ್ತನ ಹುಟ್ಟಿನ ಸಂದೇಶವನ್ನು ಕ್ರಿಸ್ಮಸ್ ದಿನದಂದು ಮನೆಮನೆಗೆ ತೆರಳಿ ಸಾರುತ್ತಿದ್ದ, ಬಡವರಿಗೆ ಕ್ರಿಸ್ಮಸ್ ಕಾಣಿಕೆಗಳನ್ನು, ಮಕ್ಕಳಿಗೆ ಸಿಹಿತಿಂಡಿಗಳನ್ನು ಹಂಚುತ್ತಿದ್ದ ಸಾಂತಾ ನಿಕೋಲಸ್‍ರನ್ನು ಇಂದಿಗೂ ಕ್ರಿಸ್ಮಸ್ ದಿನಗಳಂದು ನೆನಪಿಸಲಾಗುತ್ತಿದೆ. ಈ ಸಾಂತಾ ನಿಕೋಲಸ್ ಇಂದು ಎಲ್ಲರ ಅಚ್ಚುಮೆಚ್ಚಿನ ಕ್ರಿಸ್ಮಸ್ ತಾತ ಆಗಿದ್ದಾರೆ. ರಾತ್ರಿ ವೇಳೆಗಳಲ್ಲಿ ಮನೆ ಮನೆಗೆ ತೆರಳಿ ಬಡವರಿಗೆ, ಬಡಮಕ್ಕಳಿಗೆ ಕ್ರಿಸ್ಮಸ್ ಉಡುಗೊರೆಗಳನ್ನು, ಸಿಹಿತಿಂಡಿಗಳನ್ನು ಹಂಚುತ್ತಿದ್ದ, ಕ್ರಿಸ್ಮಸ್ ಸಂದೇಶ ಸಾರುತ್ತಿದ್ದ ಸಾಂತಾ ನಿಕೋಲಸ್ ಅವರ ಸ್ಮರಣೆಗೆ ಇಂದಿಗೂ ಕ್ರಿಸ್ಮಸ್ ತಾತನ ವೇಷ ಧರಿಸಿ ಕ್ರಿಸ್ಮಸ್ ಕ್ಯಾರಲ್ಸ್ ಗಾಯನದೊಂದಿಗೆ ಮನೆಮನೆಗೆ ತೆರಳುವ ಸಂಪ್ರದಾಯವಿದೆ.
ಇದರಂತೆ ಈ ವರ್ಷದ ಕ್ರಿಸ್ಮಸ್ ಕ್ಯಾರಲ್ಸ್ ಗಾಯನಗಳಿಗೆ ಎಲ್ಲೆಡೆ ಚಾಲನೆ ನೀಡಲಾಗಿದೆ, ಬ್ಯಾಂಡ್ ವಾದ್ಯಗಳೊಂದಿಗೆ ಕ್ಯಾರಲ್ಸ್ ಹಾಡುಗಳನ್ನು ಹಾಡುತ್ತಾ ಮನೆಮನೆಗೆ ಬರುವ ಕ್ರಿಸ್ಮಸ್ ತಾತನನ್ನು ಸ್ವಾಗತಿಸಲು ಕ್ರೈಸ್ತರ ಸಹಿತ ಎಲ್ಲ ಧರ್ಮದವರು ಕಾತುರರಾಗಿರುವುದು ನಾಡಿನ ಸೌಹಾರ್ದತೆಯ ಸಂಕೇತವಾಗಿದೆ.
ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯ ವ್ಯಾಪ್ತಿಯಲ್ಲಿ ಐಸಿವೈಎಂ ಘಟಕದ ನೇತೃತ್ವದಲ್ಲಿ ಭಾನುವಾರ ಕ್ರಿಸ್ಮಸ್ ಕ್ಯಾರಲ್ಸ್ ಆರಂಭಗೊಂಡಿತು. ಧರ್ಮಗುರು ಫಾ.ಮೆಲ್ವಿನ್ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು. ಡಿ.18ರ ವರೆಗೆ ಇಗರ್ಜಿ ವ್ಯಾಪ್ತಿಯ ವಿವಿಧ ಮನೆಗಳಿಗೆ ಕ್ಯಾರಲ್ಸ್ ತಂಡ ಭೇಟಿ ನೀಡಲಿದೆ.


