ಮಲೆನಾಡ ಹೆದ್ದಾರಿ ಎರಡೂವರೆ ವರ್ಷದಲ್ಲಿ ಪೂರ್ಣ: ಸಚಿವ ಸುಧಾಕರನ್
0
ಡಿಸೆಂಬರ್ 17, 2018
ಉಪ್ಪಳ: ಗಡಿನಾಡ ಜನರ ಸುಧೀರ್ಘ ಅವಧಿಯ ಕನಸಾಗಿರುವ ಮಲೆನಾಡ ಹೆದ್ದಾರಿ ಎರಡೂವರೆ ವರ್ಷದಲ್ಲಿ ಪೂರ್ತಿಗೊಳ್ಳಲಿದೆ ಎಂದು ಲೋಕೋಪಯೋಗಿ ಸಚಿವ ಜಿ.ಸುಧಾಕರನ್ ಹೇಳಿದರು.
ಪೈವಳಿ ಸಮೀಪದ ಚೇವಾರಿನಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಮಲೆನಾಡ ಹೆದ್ದಾರಿ ಕಾಮಗಾರಿ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎಲ್ಲರ ಸಹಭಾಗಿತ್ವದೊಂದಿಗೆ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡಿ, ಸಮಾಜವನ್ನು ಆಧುನಿಕರಣಗೊಳಿಸುವ ಯೋಜನೆ ರಾಜ್ಯಸರಕಾರದ್ದು. ಈಗ ಕಂಡುಬರುತ್ತಿರುವ ರಾಜಕೀಯ-ಸಾಮಾಜಿಕ ಸಮಸ್ಯೆಗಳು ತಾತ್ಕಾಲಿಕವಾಗಿದ್ದು, ಕೃತಕ ಸೃಷ್ಟಿಯಾಗಿವೆ. ಜನತೆಯನ್ನು ಒಗ್ಗೂಡಿಸಿ ಕ್ರಿಯಾ ಯೋಜನೆ ಮೂಲಕ ನಡೆಸುವ ಅಭಿವೃದ್ಧಿ ಮಾತ್ರ ಶಾಶ್ವತವಾದುದು ಎಂದವರು ತಿಳಿಸಿದರು.
ಮಲೆನಾಡ ಹೆದ್ದಾರಿ ನಿರ್ಮಾಣಮೂಲಕ ಈ ವಲಯದ ಜನತೆಯ ಸಾಮಾಜಿಕ-ಸಾಂಸ್ಕೃತಿಕ ಏಳಿಗೆಗೆ ನಾಂದಿಯಾಗಲಿದೆ. 45 ರೀಚ್ ಗಳ ಮೂಲಕ ಈ ಹೆದ್ದಾರಿ ನಿರ್ಮಾಣವಾಗಲಿದ್ದು, 18 ರೀಚ್ ಗಳ ಆರಂಭ ಕ್ರಮಗಳು ಈ ತಿಂಗಳಲ್ಲೇ ನಡೆಯಲಿವೆ. ಉಳಿದವುಗಳ ನಿರ್ಮಾಣ ವಿಧಾನಸಭಾ ಕ್ಷೇತ್ರಗಳ ಮಟ್ಟದಲ್ಲಿ ಜಾಗ ಬಿಟ್ಟು ಸಿಗುತ್ತಿದ್ದಂತೆ ಆರಂಭಗೊಳ್ಳಲಿದೆ. ಈ ಕುರಿತು ಆಯಾ ಕ್ಷೇತ್ರಗಳ ಶಾಸಕರಿಗೆ ಆದೇಶ ನೀಡಲಾಗಿದೆ ಎಂದರು.
ರಾಜ್ಯದ ಎರಡು ಬದಿಗಳನ್ನು ಜೋಡಿಸುವ ಕರಾವಳಿ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕುರಿತು ಆರಂಭದ ಕ್ರಮಗೆಲ್ಲವೂ ತ್ವರಿಯಗತಿಯಲ್ಲಿ ನಡೆಯುತ್ತಿವೆ. ಕೇಂದ್ರ ಸರಕಾರದ ಮಂದಗತಿ ನೀತಿಯ ಕಾರಣ ಕಾಸರಗೋಡು ಜಿಲ್ಲೆಯ ಟೆಂಡರ್ಗಳ ವಿಚಾರ ವಿಳಂಬವಾಗುತ್ತಿದೆ ಎಂದು ಆರೋಪಿಸಿದ ಸಚಿವ, ತಲಶ್ಶೇರಿ-ಮಾಹೆ ಬೈಪಾಸ್ ರಸ್ತೆ ಉದ್ಘಾಟನೆಗೆ ನವೆಂಬರ್ ತಿಂಗಳಲ್ಲಿ ಆಗಮಿಸಿದ್ದ ಕೇಂದ್ರ ಸಚಿವ ನಿಥಿನ್ ಗಡ್ಕಿರಿ ಅವರು ತಿಳಿಸಿದ್ದ ಪ್ರಕಾರ ಜನವರಿಯಲ್ಲಿ ಟೆಂಡರ್ ವಿಚಾರ ಅನುಷ್ಠಾನಗೊಳ್ಳಬೇಕಿದೆ ಎಂದವರು ನುಡಿದರು.
ಶಾಸಕ ಪಿ.ಬಿ.ಅಬ್ದುಲ್ ರಝಾಕ್ ಅವರ ನಿಧನದಲ್ಲಿಸಂತಾಪ ಸೂಚಿಸಲಾಯಿತು. ಪೈವಳಿಕೆ ಗ್ರಾಮಪಂಚಾಯತಿ ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್, ಮಾಜಿ ಶಾಸಕ ಸಿ.ಎಚ್.ಕುಂಞಂಬು, ಲೋಕೋಪಯೋಗಿ ಇಲಾಖೆಯ ಪ್ರಧಾನ ಅಭಿಯಂತರ ವಿ.ವಿ.ಬಿನು, ಪೈವಳಿಕೆ ಗ್ರಾಮಪಂಚಾಯತಿ ಉಪಾಧ್ಯಕ್ಷೆ ಸುನಿತಾ ವಲ್ಟಿ ಡಿಸೋಜಾ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯಕೆ.ಆರ್.ಜಯಾನಂದ, ಪೈವಳಿಕೆ ಗ್ರಾಮಪಂಚಾಯತಿ ಸದಸ್ಯೆ ರಾಬಿಯಾ ಟೀಚರ್, ಕಾರ್ಯಕಾರಿ ಅಭಿಯಂತರ ಕೆ.ಪಿ.ವಿನೋಗ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ವಿವಿಧ ವಲಯಗಳ ಗಣ್ಯರು ಉಪಸ್ಥಿತರಿದ್ದರು.



