ಬದಿಯಡ್ಕ : ಇಲ್ಲಿಗೆ ಸಮೀಪದ ಬಳ್ಳಪದವಿನಲ್ಲಿರುವ ನಾರಾಯಣೀಯಮ್ ಸಮುಚ್ಚಯದ ವೀಣಾವಾದಿನಿ ಸಂಗೀತ ವಿದ್ಯಾಪೀಠದ ವಾರ್ಷಿಕೋತ್ಸವವನ್ನು ವೇದ ನಾದ ಯೋಗ ತರಂಗಿಣಿ ಎಂಬ ಹೆಸರಿನಲ್ಲಿ ಫೆ. 1 ರಿಂದ 3 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ನಾರಾಯಣೀಯಮ್ ವಿಸ್ತರಿತ ಕಟ್ಟಡ ಓಂಕಾರಿಯ ಉದ್ಘಾಟನೆ ಫೆ.3 ರಂದು ಸಂಜೆ 4 ಗಂಟೆಗೆ ಆಯೋಜಿಸಿಕೊಳ್ಳಲಾಗಿದೆ.
ಫೆ. 1 ರಂದು ಬೆಳಗ್ಗೆ 9 ಗಂಟೆಗೆ ದೀಪ ಬೆಳಗಿ ಉದ್ಘಾಟಿಸಲಾಗುವ ಕಾರ್ಯಕ್ರಮದಲ್ಲಿ ಸಂಗೀತ ಕಲಾಚಾರ್ಯ ಪ್ರೊ. ಕೆ. ವೆಂಕಟರಮಣ, ಬ್ರಹ್ಮಶ್ರೀ ಮುಲ್ಲಪ್ಪಳ್ಳಿ ಕೃಷ್ಣನ್ ನಂಬೂದಿರಿ, ಬ್ರಹ್ಮಶ್ರೀ ಪಳ್ಳತ್ತಡ್ಕ ಪರಮೇಶ್ವರ ಭಟ್ ಮತ್ತು ಬ್ರಹ್ಮಶ್ರೀ ಕನ್ಯಾಕುಮಾರಿ ಕೃಷ್ಣನ್ ಭಾಗವಹಿಸುವರು. ಬಳಿಕ ಮಹಾ ಶ್ರೀಚಕ್ರ ನವಾವರಣ ಪೂಜೆ, ನವಾವರಣ ಕೃತಿಗಳ ಪ್ರಸ್ತುತಿ ಮತ್ತು ಮಹಾ ಮಂಗಳಾರತಿ ಜರಗಲಿರುವುದು.
ಫೆ 2 ರಂದು ಬೆಳಿಗ್ಗೆ 9 ರಿಂದ ನವಗ್ರಹ ಕೃತಿಗಳ ಪ್ರಸ್ತುತಿ ಮತ್ತು 10.30 ರಿಂದ ವೀಣಾವಾದಿನಿ ವಿದ್ಯಾರ್ಥಿಗಳಿಂದ ನಾದೋಪಾಸನೆ ಹೆಸರಿನಲ್ಲಿ ಸಂಗೀತ ಕಚೇರಿಗಳು ಜರಗುವವು. ಮಂಗಳೂರಿನ ಕಿರಿಯ ಕಲಾವಿದ ಆಗಮ ಪೆರ್ಲ, ಕುಮಾರಿ ಶ್ರೇಯಾ, ಧನ್ವೀಪ್ರಸಾದ, ಕುಮಾರಿ ವಿಧಾತ್ರಿ ಭಟ್ ಅಬರಾಜೆ, ವಿದುಷಿ ಸ್ವರ್ಣಗೌರಿ ಕೇದಾರ ಮೊದಲಾದವರು ಕಚೇರಿ ನಡೆಸುವರು. ಅನಂತರ ತಿರುವಿಳ ವಿಜು ಎಸ್. ಆನಂದ್ ಮತ್ತು ಮಾಂಜೂರು ರೆಂಜಿತ್ ಅವರಿಂದ ದ್ವಂದ್ವ ವಯೊಲಿನ್ ವಾದನ ಆಯೋಜಿಸಲಾಗಿದೆ.
ಫೆ. 3 ರಂದು ಬೆಳಿಗ್ಗೆ 6.30 ಕ್ಕೆ ಈಶಾ ಫೌಂಡೇಶನ್ ನ ಉಪ ಯೋಗ ಕಾರ್ಯಕ್ರಮ, 9 ರಿಂದ ಪಂಚರತ್ನ ಕೃತಿಗಳ ಗಾಯನ ಮತ್ತು ವೀಣಾವಾದಿನಿ ವಿದ್ಯಾರ್ಥಿಗಳಿಂದ ನಾದೋಪಾಸನೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ ವಿದ್ವಾನ್ ಟಿ. ಜಿ. ಗೋಪಾಲ ಕೃಷ್ಣನ್ ಮತ್ತು ವಿದುಷಿ ಉಷಾ ಈಶ್ವರ ಭಟ್ ಅವರಿಗೆ ವೀಣಾವಾದಿನಿ ಪುರಸ್ಕಾರ ಪ್ರದಾನ ಮತ್ತು ಸಮಾಜ ಸೇವಕ ಸಾಯಿರಾಮ್ ಗೋಪಾಲಕೃಷ್ಣ ಭಟ್ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೆಹಲಿಯಲ್ಲಿರುವ ಕೇಂದ್ರೀಯ ಸಾಮಾಜಿಕ ನ್ಯಾಯ ಮಂಡಳಿಯ ಸದಸ್ಯ ಎಂ. ರಾಜೀವಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ರಾಮ ಭಟ್ ಸಜಂಗದ್ದೆ ಮತ್ತು ಬಳ್ಳಪದವು ರಾಧಾಕೃಷ್ಣ ಭಟ್ ಉಪಸ್ಥಿತರಿರುವರು.
ಸಂಜೆ 6 ಗಂಟೆಗೆ ಪ್ರಸಿದ್ಧ ಕಲಾವಿದ ಚೆನ್ನೈಯ ಸಂದೀಪ್ ನಾರಾಯಣ ಅವರ ಸಂಗೀತ ಕಚೇರಿ ಜರಗಲಿದೆ.


