ಪೆರ್ಲ: ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞದ ಭಾಗವಾಗಿ ವಿದ್ಯಾರ್ಥಿಗಳಲ್ಲಿ ಕೃಷಿ ಆಭಿರುಚಿ ಮತ್ತು ಪರಿಸರ ಸ್ನೇಹ ಬೆಳೆಸುವ ಉದ್ದೇಶದಿಂದ ಇಕೋ ಕ್ಲಬ್ ನೇತೃತ್ವದಲ್ಲಿ ಶಾಲಾ ಕೈತೋಟ ನಿರ್ಮಿಸಲಾಗಿದ್ದು ಅದರಲ್ಲಿ ಬೆಳೆದ ತರಕಾರಿಗಳ ಕೊಯ್ಲು ಇತ್ತೀಚೆಗೆ ನಡೆಯಿತು.
ಪಡುವಲ, ಹೀರೆ, ತೊಂಡೆ, ಅಲಸಂಡೆ ಕೃಷಿಯೊಂದಿಗೆ ನಳ ನಳಿಸುತ್ತಿರುವ ಶಾಲಾ ಕೈತೋಟದಲ್ಲಿ ಪ್ರಥಮ ಬಾರಿ ಹಾಗೂ ಪ್ರಯೋಗಾರ್ಥ ಈ ಬಾರಿ ಹೊಸ ಮಣ್ಣಿನಲ್ಲಿ ನೆಟ್ಟು ಬೆಳೆಸಲಾದ ಸೌತೆ ವಿಪುಲ ಫಲ ನೀಡಿದೆ. ಅಗತ್ಯಕ್ಕೆ ತಕ್ಕ ಮರಗೆಣಸನ್ನು ಕೀಳಲಾಗಿತ್ತಿದೆ.ಹೂಕೋಸು ಹೂ ಬಿಟ್ಟಿದೆ.ಕೇಬೇಜು ಶೀಘ್ರ ಹೂ ಬಿಡುವ ನಿರೀಕ್ಷೆ ಇದೆ. ಕೃಷಿಭವನದಿಂದ ದೊರೆತ ಬಾಳೆ ಸಸಿ ಬೆಳೆಯುತ್ತಿದೆ.
ಎಣ್ಮಕಜೆ ಕೃಷಿ ಭವನದ ಸಹಯೋಗ ಹಾಗೂ ಮಾರ್ಗದರ್ಶನದಲ್ಲಿ ಪರಿಸರ ಕ್ಲಬ್ ಸದಸ್ಯರ ನಿರಂತರ ಚಟುವಟಿಕೆ ಮೂಲಕ ಬೆಳೆಯಲಾದ ಜೈವ ತರಕಾರಿಯನ್ನೇ ಸಾಂಬಾರು ಹಾಗೂ ಪಲ್ಯವಾಗಿ ಮಧ್ಯಾಹ್ನದ ಊಟದೊಂದಿಗೆ ಮಕ್ಕಳಿಗೆ ಉಣ ಬಡಿಸಲು ಸಾಧ್ಯವಾಗಿರುವುದು ಮಕ್ಕಳ ಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ ಹಾಗೂ ಎಲ್ಲಾ ಅಧ್ಯಾಪಕ ಸಿಬ್ಬಂದಿಗಳಲ್ಲೂ ತೃಪ್ತಿ ಮೂಡಿಸಿರುವುದಾಗಿ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಹೇಳುತ್ತಾರೆ.
ಕೃಷಿ ಚಟುವಟಿಕೆಗೆ ಅಗತ್ಯದ ಮಣ್ಣು ಸಮೀಪದ ವಿವೇಕಾನಂದ ಭಟ್ ಅವರ ಅಂಗಡಿ ಪರಿಸರದಲ್ಲಿ ಆಟವಾಡುವ ಹಳೆ ವಿದ್ಯಾರ್ಥಿಗಳ ಕೊಡುಗೆಯಾದರೆ, ಹಟ್ಟಿಗೊಬ್ಬರ ಹೊರಗಿನಿಂದ ಖರೀದಿಸಲಾಗಿದೆ.ಶಾಲಾ ಹೋದೋಟ ನವೀಕರಣ ಗೊಳಿಸಿ ಅಲಂಕಾರ ಗಿಡಗಳನ್ನು ನೆಡಲಾಗಿದೆ.ಶಾಲಾ ಪರಿಸರದಲ್ಲಿನ ಮರಗಳ ಜಾತಿ ಪ್ರಬೇಧ ಪತ್ತೆ ಹಚ್ಚಿ ಪ್ರತಿಯೊಂದು ಮರಕ್ಕೂ ಕನ್ನಡ, ಇಂಗ್ಲೀಷ್ ಹೆಸರಿನ ಟ್ಯಾಗ್ ಅಳವಡಿಸಲಾಗಿದೆ.
ವಿದ್ಯಾರ್ಥಿಗಳ ಕೃಷಿ ಚಟುವಟಿಕೆಗಳಿಗೆ ಮುಖ್ಯ ಶಿಕ್ಷಕಿ ಗೀತಾ ಕುಮಾರಿ, ಇಕೋ ಕ್ಲಬ್ ಮುಖ್ಯಸ್ಥ, ಶಿಕ್ಷಕ ವೆಂಕಟ ವಿದ್ಯಾಸಾಗರ್, ಸಿಬ್ಬಂದಿ ರಾಧಾಕೃಷ್ಣ, ಅಧ್ಯಾಪಕರು, ಶಾಲಾ ವ್ಯವಸ್ಥಾಪಕರು, ರಕ್ಷಕ ಶಿಕ್ಷಕ, ಮಾತೃ ಮಂಡಳಿ, ಹಳೆ ವಿದ್ಯಾರ್ಥಿಗಳು ನೇತೃತ್ವ ನೀಡುತ್ತಿದ್ದಾರೆ.
ಏನಂತಾರೆ:
'ಶಾಲೆಯಲ್ಲಿನ ಕೃಷಿ ಚಟುವಟಿಕೆ, ಜೈವ ವೈವಿಧ್ಯಮಯ ಪರಿಸರ ನಿರ್ಮಾಣಕ್ಕೆ ಕೃಷಿ ಇಲಾಖೆ, ಶಾಲಾ ವ್ಯವಸ್ಥಾಪಕರು, ಅಧ್ಯಾಪಕರು ಸಿಬ್ಬಂದಿಗಳು, ರಕ್ಷಕ ಶಿಕ್ಷಕ ಸಂಘ, ಮಾತೃ ಮಂಡಳಿ ಸದಸ್ಯರು, ಹಳೆ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಸಾಂದರ್ಭಿಕ ಸಹಾಯ, ಬೆಂಬಲ ನೀಡುತ್ತಿದ್ದಾರೆ'
ಗೀತಾ ಕುಮಾರಿ ಬಿ.
ಮುಖ್ಯ ಶಿಕ್ಷಕಿ,
ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಶಾಲೆ.




