ಕಾಸರಗೋಡು: ಲೋಕಸಭಾ ಚುನಾವಣೆ ಸಂಬಂಧ ಸಾರ್ವಜನಿಕರ ಸಂಶಯ ನಿವಾರಣೆ ಉದ್ದೇಶದಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾಲ್ ಸೆಂಟರ್ ಆರಂಭಿಸಲಾಗಿದೆ.
ಚುನಾವಣೆ ಆಯೋಗದ ಆದೇಶ ಪ್ರಕಾರ ಆರಂಭಿಸಲಾದ ಕಾಲ್ ಸೆಂಟರನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಶುಕ್ರವಾರ ಉದ್ಘಾಟಿಸಿದರು.
`1950' ಎಂಬ ಟಾಲ್ ಫ್ರೀ ನಂಬ್ರಕ್ಕೆ ಸಾರ್ವಜನಿಕರು ಕರೆಮಾಡಬಹುದು. ಚುನಾವಣೆ, ಮತದಾತರ ಪಟ್ಟಿ, ಗುರುತು ಚೀಟಿ, ಮತಗಟ್ಟೆ ಸಹಿತ ವಿಷಯಗಳ ಸಮಗ್ರ ಮಾಹಿತಿ ಈ ಮೂಲಕ ಪಡೆಯಬಹುದು. ಚಟುವಟಿಕೆ ದಿನಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ಸಂಸ್ಥೆಯ ಸೇವೆ ಇರುತ್ತದೆ. ಚುನಾವಣೆ ಘೋಷಣೆಯಾದ ನಂತರ ಬೆಳಗ್ಗೆ 9 ರಿಂದ ರಾತ್ರಿ 9 ರ ವರೆಗೆ ಕಾಲ್ ಸೆಂಟರ್ ಚಟುವಟಿಕೆ ನಡೆಸಲಿದೆ.
ಚುನಾವಣೆ ಸಂಬಂಧ ದೂರುಗಳಿದ್ದರೂ ಕಾಲ್ ಸೆಂಟರ್‍ನಲ್ಲಿ ಸ್ವೀಕರಿಸಲಾಗುವುದು. ದೂರುಗಳನ್ನು ದಾಖಲಿಸಿ ಮುಂದಿನ ಕ್ರಮಕ್ಕಾಗಿ ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಗುವುದು. ಕಾಲ್ ಸೆಂಟರ್‍ನಲ್ಲಿ ಶಾಶ್ವತವಾಗಿ ಇಬ್ಬರು ಸಿಬ್ಬಂದಿ ಇರುವರು. `ವೋಟರ್ ಹೆಲ್ಪ್ ಲೈನ್' ಎಂಬ ಎಂಬ ಆ್ಯಪ್‍ನ್ನು ಚುನಾವಣೆ ಅಗತ್ಯಗಳಿಗಾಗಿ ಸಜ್ಜುಗೊಳಿಸಲಾಗಿದೆ. ಜಿಲ್ಲಾ ಸಂಪರ್ಕ ಅ„ಕಾರಿಯ ಹೊಣೆಯಿರುವ ತಹಸೀಲ್ದಾರ್ ಕೆ.ನಾರಾಯಣನ್ ಚಟುವಟಿಕೆಗಳ ನೇತೃತ್ವ ವಹಿಸುವರು.
ಸಭೆಯಲ್ಲಿ ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ಎ.ಕೆ.ರಮೇಂದ್ರನ್, ಕಿರಿಯ ವರಿಷ್ಠಾಧಿಕಾರಿ ಎನ್.ಗೋವಿಂದನ್, ಭಾರತೀಯ ಫುಟ್ಬಾಲ್ ತಾರೆ ಇಗ್ನೇಷಿಯಸ್ ಸಿಲ್ವಸ್ಟರ್ ಮೊದಲಾದವರು ಉಪಸ್ಥಿತರಿದ್ದರು.


