ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರಿಗೆ ಭರವಸೆಯ ಕೇಂದ್ರವಾಗಿ ಸಂಚಾರಿ ವೈದ್ಯಕೀಯ ತಂಡ ಜಿಲ್ಲೆಯಲ್ಲಿ ಚಟುವಟಿಕೆ ನಡೆಸುತ್ತಿದೆ.
2010ರಲ್ಲಿ ಪ್ರಾರಂಭ : ಜಿಲ್ಲೆಯಲ್ಲಿ ಎಂಡೋಸಲ್ಪಾನ್ ಸಂತ್ರಸ್ತರಿಗೆ ಉಚಿತವಾಗಿ ಇರುವಲ್ಲೇ ಚಿಕಿತ್ಸಾ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ 2010ರಲ್ಲಿ ರಾಷ್ಟ್ರೀಯ ಆರೋಗ್ಯ ಯೋಜನೆಯ ಮೊಬೈಲ್ ವೈದ್ಯಕೀಯ ತಂಡ ಸ್ಥಾಪನೆಗೊಂಡಿದೆ. ಅಸೌಖ್ಯದಿಂದ ಬಳಲುತ್ತಿರುವ ಎಂಡೋಸಲ್ಫಾನ್ ಸಂತ್ರಸ್ತರು ಚಿಕಿತ್ಸೆಗಾಗಿ ದೂರದ ಆಸ್ಪತ್ರೆಗಳಿಗೆ ತೆರಳಿ ಕಷ್ಟಪಡುವ ಬದಲು ಯಥಾ ಪ್ರದೇಶದಲ್ಲೇ ಸೂಕ್ತ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಈ ತಂಡ ರಚಿಸಲಾಗಿದೆ.
ಸಕ್ರಿಯ ತಂಡ : ಮೊದಲ ಹಂತದಲ್ಲಿ ಮೂರು ಸಂಚಾರಿ ವೈದ್ಯಕೀಯ ತಂಡಗಳು ಜಿಲ್ಲೆಯಲ್ಲಿ ಚಟುವಟಿಕೆ ನಡೆಸಿದುವು. ಈಗ ಒಂದು ತಂಡ ಸಕ್ರಿಯವಾಗಿದೆ. ಎಂಡೋಸಲ್ಫಾನ್ ಬಾಧೆಯಿರುವ ಜಿಲ್ಲೆಯ ಹನ್ನೊಂದು ಗ್ರಾಮಪಂಚಾಯತ್‍ಗಳ ಆರೋಗ್ಯ ಕೇಂದ್ರಗಳ ಸ್ಟಾಫ್ ನರ್ಸ್, ಫಿಸಿಯೋ ಥೆರಪಿಸ್ಟ್ ಈ ತಂಡದ ಸದಸ್ಯರಾಗಿದ್ದಾರೆ. ಆಯಾ ಪ್ರಾಥಮಿಕ ಕೇಂದ್ರಗಳಿಗೆ ತೆರಳಿ ಅಗತ್ಯವಿರುವ ಔಷಧ ನೀಡಿಕೆಯಲ್ಲದೆ, `ಟೀಂ ಫೀಲ್ಡ್' ಎಂಬ ಹೆಸರಿನಲ್ಲಿ ರೋಗಿಗಳಿರುವೆಡೆ ಸಂದರ್ಶನ ನಡೆಸುತ್ತಾರೆ.
ರೋಗಿಗಳ ತಪಾಸಣೆ : ರೋಗಿಗಳನ್ನು ನೇರವಾಗಿ ಕಂಡು ಅವರ ಸಿಹಿಮೂತ್ರ ರೋಗ, ರಕ್ತದೊತ್ತಡ, ದೇಹತಾಪ ಇತ್ಯಾದಿ ತಪಾಸಣೆ ನಡೆಸಿ ಔಷಧ ನೀಡುತ್ತಾರೆ. ಒಂದೊಮ್ಮೆ ತಂಡದ ಬಳಿ ಔಷಧದ ಕೊರೆತೆಯಿದ್ದರೆ, ಔಷಧದ ಚೀಟಿ ಬರೆದು ರೋಗಿಯ ಸಂಬಂಧಪಟ್ಟವರು ನೀತಿ ಔಷಧ ಅಂಗಡಿ(ರಿಯಾಯಿತಿ ದರದಲ್ಲಿ ಔಷಧ ಲಭಿಸುವ ಸರಕಾರಿ ಕೇಂದ್ರಗಳು)ಯಿಂದ ಖರೀದಿಸುವ ವ್ಯವಸ್ಥೆ ಮಾಡುತ್ತಾರೆ. ಹೆಚ್ಚುವರಿ ಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ಹೈಯರ್ ಸೆಂಟರ್‍ಗೆ ತೆರಳುವಂತೆ ಶಿಫಾರಸು ಮಾಡುತ್ತಾರೆ.
ತಿಂಗಳಿಗೆ 180 ಮಂದಿಗೆ ಚಿಕಿತ್ಸೆ : ತಿಂಗಳಿಗೆ ಕನಿಷ್ಠ 180 ರೋಗಿಗಳು ಈ ಮೊಬೈಲ್ ಮೆಡಿಕಲ್ ಟೀಂನ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೆರ್ಲ, ಮುಳ್ಳೇರಿಯ, ಅಜಾನೂರು, ಪಾಣತ್ತೂರು ಪ್ರದೇಶಗಳಲ್ಲಿ ತಿಂಗಳಿಗೆ ಮೂರು ದಿನ, ಬೆಳ್ಳೂರು ಗ್ರಾಮ ಪಂಚಾಯತ್‍ನಲ್ಲಿ ತಿಂಗಳಿಗೆ ಒಂದು ದಿನ, ಇತರ ಗ್ರಾಮ ಪಂಚಾಯತ್ ಗಳಲ್ಲಿ ತಿಂಗಳಿಗೆ ಎರಡು ದಿನ ಮೊಬೈಲ್ ಟೀಂ ಸಂದರ್ಶನ ನಡೆಸುತ್ತದೆ. ತಿಂಗಳಲ್ಲಿ 25 ದಿನ ಹನ್ನೊಂದು ಗ್ರಾಮ ಪಂಚಾಯತ್‍ಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ಮಲಗಿದಲ್ಲೇ ಇರುವ ರೋಗಿಗಳ ಮನೆಗೆ ತೆರಳಿ ಉಚಿತವಾಗಿ ತಪಾಸಣೆ ನಡೆಸಿ ಔಷಧಿ ವಿತರಣೆ ನಡೆಸುತ್ತಿದೆ.


