ಬದಿಯಡ್ಕ: ಸದಸ್ಯರ ಉನ್ನತಿಯನ್ನು ಬಯಸುವ ಸಂಘಟನೆಯನ್ನು ರಕ್ಷಿಸುವ ಹೊಣೆ ಪ್ರತಿಯೊಬ್ಬರ ಮೇಲಿದೆ. ಎಲ್ಲರ ಒಗ್ಗಟ್ಟಿನ ಪರಿಶ್ರಮವಿದ್ದರೆ ಮಾತ್ರ ಸಂಘಟನೆ ಬೆಳೆಯಲು ಸಾಧ್ಯವಿದೆ ಎಂದು ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್‍ನ ಕೇರಳ ರಾಜ್ಯ ಸಮಿತಿ ರಾಮನ್ ಚೆನ್ನಿಕ್ಕೆರೆ ಅಭಿಪ್ರಾಯಪಟ್ಟರು.
ಶುಕ್ರವಾರ ಬದಿಯಡ್ಕ ಶ್ರೀರಾಮಲೀಲಾ ಸಭಾಂಗಣದಲ್ಲಿ ನಡೆದ ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್(ಕೆಎಸ್‍ಟಿಎ)ನ ಮಂಜೇಶ್ವರ ತಾಲೂಕು ಕನ್ವೆನ್ಶನ್‍ನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರದ ಕ್ಷೇಮನಿಧಿಯಲ್ಲಿ ಸದಸ್ಯರಾಗಿರುವವರಿಗೆ ಲಭಿಸುವ 1000 ರೂಪಾಯಿಯನ್ನು 3000 ರೂಪಾಯಿಗೆ ಹೆಚ್ಚಳಗೊಳಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಸಂಘಟನೆಯ ಮೂಲಕ ಮಹಿಳೆಯರು ಅತಿಹೆಚ್ಚು ಪ್ರಯೋಜನವನ್ನು ಇಂದು ಪಡೆದುಕೊಳ್ಳುತ್ತಿರುವುದು ಸಂತಸದ ವಿಚಾರವಾಗಿದೆ. ಸದಸ್ಯರೊಳಗಿನ ವೈಯಕ್ತಿಕ ಭಿನ್ನಾಭಿಪ್ರಾಯಗಳು ಸಂಘಟನೆಗೆ ಬಾಧಕವಾಗದಂತೆ ಮುನ್ನಡೆಸಬೇಕು. ಉತ್ತಮ ನಾಯಕತ್ವ ಗುಣವನ್ನು ಹೊಂದಿರುವ ಅನೇಕ ಸದಸ್ಯರು ಮಂಜೇಶ್ವರ ತಾಲೂಕಿನಲ್ಲಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಎಸ್‍ಟಿಎ ಮಂಜೇಶ್ವರ ತಾಲೂಕು ಅಧ್ಯಕ್ಷ ಸಂಕಪ್ಪ ಗಟ್ಟಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯರುಗಳಾದ ಪದ್ಮನಾಭನ್ ವಿ., ಬಾಲಕೃಷ್ಣ ಶೆಟ್ಟಿ ಕರಿಪ್ಪಾರ್, ವೆಲ್ಫೇರ್ ಫಂಡ್ ಬೋರ್ಡ್ ಸಮಿತಿ ಜಿಲ್ಲಾ ಅಧ್ಯಕ್ಷ ಮೋಹನ್ ದಾಸ್ ಕುಂಬಳೆ, ಜಿಲ್ಲಾ ಕಾರ್ಯದರ್ಶಿ ಮುಕುಂದನ್ ಪಿ., ಜಿಲ್ಲಾ ಜೊತೆಕಾರ್ಯದರ್ಶಿ ಸಿ. ಸುರೇಶ್ ಭಟ್, ಜಿಲ್ಲಾ ಸಮಿತಿ ಸದಸ್ಯ ರಾಮಚಂದ್ರ ಭಟ್ ಪೆರ್ಮುದೆ, ಜಿಲ್ಲಾ ಸಮಿತಿ ಸದಸ್ಯರುಗಳಾದ ರಾಮಣ್ಣ ಪೂಜಾರಿ, ರಾಮ ಪೊಯ್ಯಕಂಡ, ನಾರಾಯಣ ಕುಂಬಳೆ, ತಾಲೂಕು ಉಪಾಧ್ಯಕ್ಷ ಯು. ಕೇಶವ ಮಯ್ಯ, ತಾಲೂಕು ಸಮಿತಿ ಸದಸ್ಯೆ ವಿಜಯ ಕುಮಾರಿ ಶುಭಾಶಂಸನೆಗೈದರು. ತಾಲೂಕು ಕಾರ್ಯದರ್ಶಿ ದಯಾನಂದ ಯಂ. ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಬದಿಯಡ್ಕ ವಂದಿಸಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಸತೀಶ ಆಚಾರ್ಯ ವರದಿ, ಕೋಶಾಧಿಕಾರಿ ಮನೋಹರ ಶೆಟ್ಟಿ ಲೆಕ್ಕಪತ್ರ ಮಂಡಿಸಿದರು.

