ನದಿ ಅಧ್ಯಯನ-ಶಿರಿಯ ನದಿ ಸುತ್ತಾಡಿದ ಪುಟಾಣಿಗಳು
0
ಮಾರ್ಚ್ 26, 2019
ಕುಂಬಳೆ: ಪಠ್ಯದೊಳಗಿನ ವಿಚಾರಗಳನ್ನು ಪರೀಕ್ಷಾ ದೃಷ್ಟಿಯಿಂದ ಮಾತ್ರ ಅಭ್ಯಸಿಸದೆ ಅದೊಂದು ಬದುಕಿನ ವಿಚಾರವಾಗಿ ಅಳವಡಿಸಿಕೊಂಡು ಗ್ರಹಿಸುವ, ಅನುಭವಿಸುವ ಮತ್ತು ಮಾಡಲೇಬೇಕಾದ ಕರ್ತವ್ಯದ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಶಾಲೆಯೊಂದರ ವಿದ್ಯಾರ್ಥಿಗಳು ಜೀವಜಾಲಗಳ ಉಗಮವಾದ ನದಿಗಳ ಅಧ್ಯಯನ ಸಂದರ್ಶನ ನಡೆಸಿರುವುದು ಜನಪ್ರೀಯತೆಯ ಜೊತೆಗೆ ಭರವಸೆಗೆ ಕಾರಣವಾಗಿದೆ.
ನದಿಯ ಉಗಮ, ಹಾವಿನಂತೆ ಬಳುಕಿಕೊಂಡು ನದಿ ಸಾಗುವುದರ ಗುಟ್ಟು, ಬೇಸಗೆಯಲ್ಲಿ ಹೊಳೆಯ ಕೆಲವು ಕಡೆಗಳಲ್ಲಿ ಮಾತ್ರ ನೀರು ಸಂಗ್ರಹ ಗೊಂಡಿರುವ ಬಗ್ಗೆ, ನದಿಯನ್ನು ಆಶ್ರಯಿಸಿಕೊಂಡಿರುವ ಜೀವ ಜಾಲಗಳ ವೈಶಿಷ್ಟ್ಯಗಳು, ನದಿಗಳು ಎದುರಿಸುತ್ತಿರುವ ಸಮಸ್ಯೆಗಳು ಇವೇ ಮೊದಲಾದ ವಿಚಾರಗಳ ಕುರಿತು ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿಗಳು ಶಿರಿಯ ನದಿಯನ್ನು ಸುತ್ತಾಡಿ ಇತ್ತೀಚೆಗೆ ಮಾಹಿತಿ ಸಂಗ್ರಹಿಸಿದರು.
ಜೊತೆಗೆ ಬೆಜಪ್ಪೆ ಬೊಬ್ಬರ್ಯ ಹಾಗೂ ಕಾಜೂರು ಗಯ ಪ್ರದೇಶಗಳನ್ನು ಸಂದರ್ಶಿಸಿ ನದಿಯಲ್ಲಿ ನೀರಿನ ಮಟ್ಟದ ಬಗ್ಗೆ ಅರಿತುಕೊಂಡರು. ಇನ್ನು ಕೆಲವೇ ದಿನಗಳಲ್ಲಿ ಬತ್ತಿ ಹೋಗುವ ಆತಂಕದಲ್ಲಿರುವ ನದಿಯ ಶೋಚನೀಯ ಪರಿಸ್ಥಿತಿಯನ್ನು ಕಂಡು ಮರುಗಿದ ವಿದ್ಯಾರ್ಥಿಗಳು ಮರಳ ದಿಬ್ಬದ ಮೇಲೆ ಕುಳಿತು ನದಿ ಅನುಭವಿಸುವ ವಿವಿಧ ಸಮಸ್ಯೆಗಳನ್ನೂ ಚರ್ಚಿಸಿದರು.
ಈ ಸಂದರ್ಭದಲ್ಲಿ ಕುಂಬಳೆ ಗ್ರಾಮ ಪಂಚಾಯತಿ ಪ್ರಮುಖ ಭತ್ತದ ಗದ್ದೆಗಳಿರುವ ಕಾಜೂರು ಬಯಲನ್ನು ವೀಕ್ಷಿಸಿದರು. ಕಿದೂರು ಪಕ್ಷಿ ಧಾಮದಲ್ಲಿ ಪಕ್ಷಿ ನಿರೀಕ್ಷಣೆ ಮಾಡಿದ ಪುಟಾಣಿಗಳು ಉರಿ ಬಿಸಿಲಲ್ಲೂ ಬಾನಾಡಿಗಳ ದಾಹ ನೀಗಿಸುವ, ನಾಗರಿಕರೇ ಸಂರಕ್ಷಿಸಿಕೊಂಡು ಬರುವ ಪುರಾತನ ಕಾಜೂರು ಪಳ್ಳದ ಕುರಿತಾಗಿ ಹಿರಿಯರಿಂದ ಅನುಭವಗಳನ್ನು ಪಡೆದುಕೊಂಡರು.
ಐದನೇ ತರಗತಿಯ ಸಮಾಜ ವಿಜ್ಞಾನದ ಪಾಠವಾದ ಕೇರಳ ತೀರದಲ್ಲಿ ಎಂಬ ಅಧ್ಯಾಯದ ಮುಂದುವರಿದ ಚಟುವಟಿಕೆಯ ಭಾಗವಾಗಿ ಕಿದೂರಿನಲ್ಲಿ ಪರಿಸರ ಅಧ್ಯಯನ ಶಿಬಿರವನ್ನು ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿತ್ತು.
ಮಂಗಳೂರು ವಿಶ್ವ ವಿದ್ಯಾನಿಲಯದ ಸಾಗರ ಅಧ್ಯಯನ ವಿದ್ಯಾರ್ಥಿಯೂ ಕಾಸರಗೋಡಿನ ಪ್ರಮುಖ ಪಕ್ಷಿ ನಿರೀಕ್ಷಕರೂ ಆಗಿರುವ ಮ್ಯಾಕ್ಸಿಂ ರೋಡ್ರಿಗಸ್ ಕೊಲ್ಲಂಗಾನ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ಅಧ್ಯಾಪಕ ರಾಜು ಕಿದೂರು, ಪ್ರದೀಪ್ ಕಿದೂರು, ಗ್ಲೆನ್ ಕಿದೂರು ಹಾಗೂ ಸ್ಥಳೀಯ ಯಸ್.ಕೆ.ಪಿ.ಫ್ರೆಂಡ್ಸ್ ಸದಸ್ಯರು ಸಹಕರಿಸಿದರು.

