ಲೋಕಸಭಾ ಚುನಾವಣೆ-ಮಾದರಿ ನೀತಿ ಸಂಹಿತೆ ಕಡ್ಡಾಯ ಪಾಲನೆ-ಇಲ್ಲಿದೆ ಮಾಹಿತಿ
0
ಮಾರ್ಚ್ 25, 2019
ಕಾಸರಗೋಡು: ಲೋಕಸಭೆ ಚುನಾವಣೆ ಸಂಬಂಧ ನೋಟೀಸ್,ಕಿರುಹೊತ್ತಗೆ ಇತ್ಯಾದಿ ಪ್ರಕಟಿಸುವ ವೇಳೆ ಮಾದರಿ ನೀತಿ ಸಂಹಿತೆ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಜನಪ್ರಾತಿನಿಧ್ಯ ಕಾಯಿದೆ 1951 ಸೆಕ್ಷನ್ 127(ಎ) ಪ್ರಕಾರದ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅವರು ಹೇಳಿದರು. ಈ ಕೆಳಗೆ ನಿರ್ದೇಶನಗಳನ್ನು ನೀಡಲಾಗಿದೆ.
1. ಮುದ್ರಕ ಮತ್ತು ಪ್ರಕಾಶಕರ ಹೆಸರು, ವಿಳಾಸವನ್ನು ದಾಖಲಿಸದೇ ಇರುವ ನೋಟೀಸು, ಕಿರು ಹೊತ್ತಗೆಗಳು, ಭಿತ್ತಿಪತ್ರಗಳು ಯಾವ ಕಾರಣಕ್ಕೂ ವಿತರಣೆಗೊಳ್ಳಬಾರದು, ಚುನಾವಣೆ ಪ್ರಚಾರಕ್ಕೆ ಬಳಸಬಾರದು.
2. ಚುನಾವಣೆ ಪ್ರಚಾರ ನೋಟೀಸುಗಳು,ಕಿರುಹೊತ್ತಗೆಗಳು ಈ ಕೆಳಗೆ ತಿಳಿಸಲಾದ ನಿಬಂಧನೆಗಳಿಗೆ ವಿಧೇಯವಾಗಿ ಮಾತ್ರ ಪ್ರಕಟಿಸಬೇಕು.
(ಎ) ಪ್ರಚಾರ ನೋಟೀಸುಗಳನ್ನು ಪ್ರಕಟಿಸುವ ವ್ಯಕ್ತಿ, ಅವರ ಗುರುತು ಪತ್ರ ಸಿದ್ಧಪಡಿಸಿ ಸಹಿಮಾಡಿ ತಲಾ ಎರಡು ನಕಲನ್ನು ಮುದ್ರಕನಿಗೆ ಹಸ್ತಾಂತರಿಸಬೇಕು.
(ಬಿ) ಆ ಪ್ರಕಾರ ಸಲ್ಲಿಸಿದ ಒಪ್ಪಿಗೆ ಪತ್ರದ ಒಂದು ನಕಲು, ಮುದ್ರಿಸಿದ ನೋಟೀಸು, ಕಿರು ಹೊತ್ತಗೆ, ಭಿತ್ತಿಪತ್ರ ಇತ್ಯಾದಿಯ ನಕಲು ಜಿಲ್ಲಾ ನ್ಯಾಯಮೂರ್ತಿಗಳಿಗೆ ಯಥಾ ಸಮಯ ಸಲ್ಲಿಸಬೇಕು.
3. ಚುನಾವಣೆ ಸಂಬಂಧ ಅಭ್ಯರ್ಥಿಗಳ ಪ್ರಚಾರಕ್ಕೆ, ಇನ್ನೊಂದು ಪಕ್ಷದ ಅಭ್ಯರ್ಥಿಗಳ ದೂಷಣೆಗೆ ಮುದ್ರಿಸುವ ನೋಟೀಸು, ಕಿರುಹೊತ್ತಗೆ, ಜಾಹೋರಾತು, ಕೈಬರಹ ಪ್ರತಿಗಳು ಇತ್ಯಾದಿಗಳನ್ನು ಚುನಾವಣೆಯ ಪ್ರಚಾರ ನೋಟೀಸು ಎಂದೇ ಪರಿಶೀಲಿಸಲಾಗುವುದು. ಆದರೆ ಚುನಾವಣೆ ದಿನಾಂಕ ಸಂಬಂಧ, ಸಭೆಗಳ ಸೂಚನೆ ಸಂಬಂಧ, ಸದಸ್ಯರಿಗಿರುವ ಸೂಚನೆಗಳು, ಚುನಾವಣೆ ಏಜೆಂಟರಿಗೆ, ಕಾರ್ಯಕರ್ತರಿಗೆ ಸೂಚನೆ ಇತ್ಯಾದಿಗಳಿಗೆ ಈ ಆದೇಶ ಅನ್ವಯವಲ್ಲ.
4. ಈ ಮೇಲೆ ತಿಳಿಸಲಾದ 1,2 ನಿಬಂಧನೆಗಳನ್ನುಉಲ್ಲಂಘಿಸುವಿಕೆ ಜನಪ್ರಾತಿನಿಧ್ಯ ಕಾಯಿದೆ 1951 ಪ್ರಕಾರ 6 ತಿಂಗಳ ಸಜೆ ಅಥವಾ 2 ಸಾವಿರ ರೂ. ವರೆಗಿನ ದಂಡ ಯಾ ಎರಡೂ ಜೊತೆಗೆ ಹೇರಬಹುದಾದ ಅಪರಾಧವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿರುವರು.

