ಮಂಜೇಶ್ವರ: ಸದಾ ಸೇವೆಗೆ ಸಿದ್ಧ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ನೂತನ ಘಟಕ ಕುಂಜತ್ತೂರು ವೊಕೇಷನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಬುಧವಾರ ಉದ್ಘಾಟನೆಗೊಂಡಿತು.
ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್.ವಿ. ಅವರು ಗೈಡ್ಸ್ ದಳದಲ್ಲಿರುವ ವಿದ್ಯಾರ್ಥಿನಿಯರಿಗೆ ಸ್ಕಾರ್ಫ್ ಕಟ್ಟುವುದರ ಮೂಲಕ ಅರ್ಥಪೂರ್ಣವಾಗಿ ಉದ್ಘಾಟಿಸಿದರು. ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಯೋಗೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಬಿ.ವಿ. ರಾಜನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಗೈಡ್ಸ್ ನ ಜಿಲ್ಲಾ ತರಬೇತಿ ಕಮಿಷನರ್ ಆಶಾಲತ. ಕೆ ಅವರು ಗೈಡ್ಸ್ ನ ಕುರಿತು ಸಮಗ್ರ ಮಾಹಿತಿ ನೀಡಿದರು. ಬ್ಲಾಕ್ ಯೋಜನಾಧಿಕಾರಿ ವಿಜಯಕುಮಾರ್, ಪ್ರಭಾರ ಪ್ರಾಂಶುಪಾಲ ಶಿಶುಪಾಲನ್, ನಿವೃತ್ತ ಅಧ್ಯಾಪಕ ಈಶ್ವರ ಮಾಸ್ತರ್, ಪೂರ್ವ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿ ದಾಯಾಕರ ಮಾಡ, ಹಿರಿಯ ಶಿಕ್ಷಕಿ ಪ್ರಮೀಳ ಕುಮಾರಿ, ಶಾಲಾ ನೌಕರ ಸಂಘದ ಕಾರ್ಯದರ್ಶಿ ಅಶ್ರಫ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಮುಖ್ಯೋಪಾಧ್ಯಾಯ ಬಾಲಕೃಷ್ಣ. ಜಿ ಸ್ವಾಗತಿಸಿ, ಗೈಡ್ ಕ್ಯಾಪ್ಟನ್ ಅಮಿತ ಟೀಚರ್ ವಂದಿಸಿದರು. ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳಾದ ಅಬ್ದುಲ್ ರಹೆಮಾನ್, ಮೋಹಿನಿ ಉಪಸ್ಥಿತರಿದ್ದರು.


