ಬದಿಯಡ್ಕ: ಕರಿಂಬಿಲದಲ್ಲಿ ಗುಡ್ಡೆಕುಸಿದು ಅಂತಾರಾಜ್ಯ ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲವೊದಗಿಸುವ ಪ್ರಕ್ರಿಯೆಯನ್ನು ಕೂಡಲೇ ಪ್ರಾರಂಭಿಸಬೇಕು ಎಂದು ಬಿಜೆಪಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ನಾಗರಿಕರು ಪ್ರತಿಭಟನೆಗಿಳಿಯಲಿದ್ದಾರೆ. ಆಗಸ್ಟ್ 16ರಂದು ಶುಕ್ರವಾರ ಬೆಳಿಗ್ಗೆ 10ಗಂಟೆಗೆ ಚೆರ್ಕಳ ಕಲ್ಲಡ್ಕ ರಸ್ತೆಯ ದುರವಸ್ಥೆಯನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಕೆಡೆಂಜಿ ತಿರುವಿನಿಂದ ಬದಿಯಡ್ಕ ಲೋಕೋಪಯೋಗಿ ಕಚೇರಿಗೆ ಪ್ರತಿಭಟನಾ ಮೆರವಣಿಗೆಯನ್ನು ನಡೆಸಲಾಗುವುದು ಎಂದು ಬದಿಯಡ್ಕ ಗ್ರಾ.ಪಂ. ಬಿಜೆಪಿ ಜನಪ್ರತಿನಿಧಿಗಳು ತಿಳಿಸಿದ್ದಾರೆ.
ಮಣ್ಣು ಕುಸಿಯಬಹುದೆಂಬ ಭೀತಿಯಿಂದ ಕರಿಂಬಿಲ ಮೂಲಕ ವಾಹನ ಸಂಚಾರಕ್ಕೆ ಶನಿವಾರ ಬಳಿಕ ಮತ್ತೆ ತಡೆಯೊಡ್ಡಲಾಗಿತ್ತು. ಇದರ ಬೆನ್ನಲ್ಲೇ ಕರಿಂಬಿಲದಲ್ಲಿ ಮಣ್ಣು ಕುಸಿದಿದ್ದು, ರಸ್ತೆಯ ಬಹುತೇಕ ಭಾಗ ಮಣ್ಣು ತುಂಬಿಕೊಂಡಿದೆ. ಇದೀಗ ಸಾರ್ವಜನಿಕರು ನಡೆದುಕೊಂಡು ಹೋಗಲು ಸಾಧ್ಯವಾಗದ ಸ್ಥಿತಿಯುಂಟಾಗಿದೆ. ಈ ರಸ್ತೆಯ ಮೂಲಕ ವಾಹನ ಸಂಚಾರ ಮೊಟಕುಗೊಂಡ ಹಿನ್ನೆಲೆಯಲ್ಲಿ ಕೇರಳ ಸಾರಿಗೆ ಬಸ್ಸುಗಳಲ್ಲಿ ಕೆಲವು ಮಾಯಿಪ್ಪಾಡಿ, ಸೀತಾಂಗೋಳಿ, ಪೆರ್ಲ ಮೂಲಕ ಪುತ್ತೂರಿಗೆ ಸಾಗಿದರೆ, ಕರ್ನಾಟಕ ಸಾರಿಗೆ ಬಸ್‍ಗಳು ಪೆರ್ಲ ತನಕ ಮಾತ್ರ ಬಂದು ಪುತ್ತೂರಿಗೆ ಹಿಂತಿರುಗುತ್ತಿವೆ. ಖಾಸಗಿ ಬಸ್ಸುಗಳು ಕಾಸರಗೋಡು ಬದಿಯಡ್ಕ ತನಕ ಮಾತ್ರ ಸಂಚಾರ ನಡೆಸುತ್ತಿವೆ.
ಚೆರ್ಕಳ ಅಡ್ಕಸ್ಥಳ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಮೊಟಕುಗೊಂಡಿರುವುದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಸಂಕಷ್ಟ ಸೃಷ್ಟಿಸಿದೆ. ಉಕ್ಕಿನಡ್ಕ, ಗೋಳಿಯಡಿ, ಚಾಲಕ್ಕೋಡು, ಪಳ್ಳತ್ತಡ್ಕ, ಕಾಡಮನೆ, ಮಾಡತ್ತಡ್ಕ, ಕುಂಟಾಲುಮೂಲೆ, ಬೈಕುಂಜ, ಕರಿಂಬಿಲ ಭಾಗದ ಜನರು ಬದಿಯಡ್ಕಕ್ಕೆ ಬರಲಾಗದಂತಹ ಸ್ಥಿತಿಯುಂಟಾಗಿದೆ. ಕೆಲವೊಂದು ಖಾಸಗಿ ವಾಹನಗಳು ಹಾಗೂ ಸರ್ವೀಸ್ ಜೀಪುಗಳೇ ಇಲ್ಲಿನ ಜನರ ಆಶ್ರಯವಾಗಿದೆ. ಮುಂದಿನ ವಾರದಿಂದ ಓಣಂ ಪರೀಕ್ಷೆ ಆರಂಭವಾಗಲಿದ್ದು, ವಿದ್ಯಾರ್ಥಿಗಳಿಗೆ ಇದು ಸಮಸ್ಯೆ ಸೃಷ್ಟಿಸಲಿದೆ. ಸುಮಾರು ಸಾವಿರದಷ್ಟು ಲೋಡು ಮಣ್ಣು ಇಲ್ಲಿಂದ ತೆಗೆದರೆ ಮಾತ್ರ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವಿದೆ. ಇದಕ್ಕಾಗಿ ಹಲವು ದಿನಗಳೇ ಬೇಕಾಗಬಹುದು ಎಂದು ಲೋಕೋಪಯೋಗಿ ಅಧಿಕಾರಿಗಳು ಹೇಳುತ್ತಾರೆ.
ಪರ್ಯಾಯ ವ್ಯವಸ್ಥೆಯ ಚಿಂತನೆ:
ಪ್ರಸ್ತುತ ಕುಸಿದು ಆತಂಕಕ್ಕೆ ಕಾರಣವಾಗಿರುವ ಕರಿಂಬಿಲದಲ್ಲಿ ಕಡಿದು ಹೋಗಿರುವ ಸಂಪರ್ಕವನ್ನು ಮರು ಸ್ಥಾಪಿಸುವಲ್ಲಿ ಪರ್ಯಾಯ ವ್ಯವಸ್ಥೆಯ ಬಗ್ಗೆ ಚಿಂತಿಸುವ ಅಗತ್ಯ ಇದೆ. ಕುಸಿದಿರುವ ರಸ್ತೆಯ ಮಣ್ಣುಗಳನ್ನು ತೆರವುಗೊಳಿಸಿ ಸಂಚಾರ ಯೋಗ್ಯ ರಸ್ತೆಯಾಗಿಸಲು ಒಂದೂವರೆ ಕೋಟಿಗಳ ಬೃಹತ್ ಮೊತ್ತದ ಅಂದಾಜು ವೆಚ್ಚ ತಗಲುವ ಸಾಧ್ಯತೆ ಇರುವುದರಿಂದ ಈಗಿರುವ ರಸ್ತೆಯ ಪರಿಸರದಲ್ಲಿ ಖಾಸಗೀ ವ್ಯಕ್ತಿಗಳಿಂದ ನಿವೇಶನಗಳನ್ನು ಖರೀದಿಸಿ ಪ್ರತ್ಯೇಕ ರಸ್ತೆ ನಿರ್ಮಿಸುವ ನಿಟ್ಟಿನಲ್ಲಿ ಅಧಿಕೃತರು ತಯಾರಾಗಬೇಕೆಂದು ಸಾರ್ವಜನಿಕರು ಒಂದೆಡೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಗುತ್ತಿಗೆದಾರನಿಂದ ನಿರ್ಲಕ್ಷ್ಯ:
ಚೆರ್ಕಳ-ಕಲ್ಲಡ್ಕ ಅಂತರಾಜ್ಯ ಹೆದ್ದಾರಿಯ ಸಂಪೂರ್ಣ ಡಾಮರೀಕರಣಕ್ಕೆ ಪ್ರಸ್ತುತ ವರ್ಷ ಗುತ್ತಿಗೆ ನೀಡಲಾಗಿದ್ದು, ಮಳೆಗಾಲದ ಆರಂಭಕ್ಕೂ ಮೊದಲು ಅಲ್ಲಲ್ಲಿ ಒಂದಷ್ಟು ಕಾಮಗಾರಿ ನಡೆದಿತ್ತು. ರಸ್ತೆ ಕುಸಿದಿರುವ ಕರಿಂಬಿಲ ಪರಿಸರದಲ್ಲಿ ರಸ್ತೆ ಅಗಲೀಕರಣದ ಹೆಸರಲ್ಲಿ ಬೃಹತ್ ಗುಡ್ಡೆಯನ್ನು ಅವೈಜ್ಞಾನಿಕವಾಗಿ ಜೆಸಿಬಿ ಬಳಸಿ ಕಿತ್ತೆಗೆದ ಕಾರಣ ರಸ್ತೆಯ ಮೇಲೆ ಬೃಹತ್ ಮಣ್ಣಿನ ರಾಶಿ ಇದೀಗ ಬೀಳಲು ಕಾರಣವೆಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಬಿದ್ದಿರುವ ಮಣ್ಣಿನ ಮಟ್ಟವನ್ನು ಪರೀಕ್ಷಿಸಲು ಲೋಕೋಪಯೋಗಿ ಇಲಾಖೆ ಕಾಮಗಾರಿ ಕೈಗೆತ್ತಿಕೊಂಡ ಕುದ್ರೋಳಿ ಕನ್ಸ್ಟ್ರಕ್ಷನ್ ಸಂಸ್ಥೆಯಲ್ಲಿ ಈಗಾಗಲೇ ಹಲವು ಬಾರಿ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಮುಮದಿನ ವ್ಯವಸ್ಥೆಗೆ ಮುಂದಡಿ ಇರಿಸಲಾಗದೆ ಲೋಕೋಪಯೋಗಿ ಇಲಾಖೆ ಕಾಯುತ್ತಿದೆ ಎಂದು ತಿಳಿದುಬಂದಿದೆ.
ಅಭಿಮತ:
ಪ್ರಸ್ತುತ ಮಣ್ಣು ಬಿದ್ದು ಮುಉಚ್ಚಲ್ಪಟ್ಟಿರುವ ರಸ್ತೆ ಕಾರಣ ಸಾರ್ವಜನಿಕರಿಗೆ ತೊಂದರೆಯಾಗಿರುವ ಬಗ್ಗೆ ಲೋಕೋಪಯೋಗಿ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಆದರೆ ಗುತ್ತಿಗೆ ವಹಿಸಿಕೊಂಡಿರುವ ಕುದ್ರೋಳಿ ಕನ್ಸ್ಟ್ರಕ್ಷನ್ ಸಂಸ್ಥೆಗೆ ಈಗಾಗಲೇ ಬಿದ್ದಿರುವ ಮಣ್ಣಿನ ಮಟ್ಟದ ಬಗ್ಗೆ ಸಂಪೂರ್ಣ ಮಾಪನ ನಡೆಸಲು ಸೂಚಿಸಿದ್ದರೂ ಸಂಸ್ಥೆ ಸಹಕರಿಸುತ್ತಿಲ್ಲ.ಅಂತಹ ಮಾಪನ ನಡೆಸುವ ವ್ಯವಸ್ಥೆ ಪ್ರಸ್ತುತ ಇಲಾಖೆಯಲ್ಲಿ ಇಲ್ಲದಿರುವುದರಿಂದ ಸಮಸ್ಯೆ ಮುಂದುವರಿಯುತ್ತಿದೆ. ಆದರೆ ಇಲಾಖೆಯು ಇನ್ನೆರಡು ದಿನಗಳಲ್ಲಿ ಬಾಡಿಗೆ ಯಂತ್ರವನ್ನು ಪಡೆದು ಮಾಪನ ನಡೆಸಲಿದೆ. ಆ ಬಳಿಕ ಮುಂದಿನ ಒಂದು ತಿಂಗಳಲ್ಲಿ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಿದೆ. ಜೊತೆಗೆ ಬಿರುಸಿನ ಮಳೆ ಬೀಳುವಿಕೆ ಕಡಿಮೆಯಾಗಲು ಕಾಯಲಾಗುವ ಅನಿವಾರ್ಯತೆಯೂ ಇದೆ.
ಮಹೇಶ್.
ಸಹಾಯಕ ಅಭಿಯಂತರ.ಲೋಕೋಪಯೋಗಿ ಇಲಾಖೆ. ಬದಿಯಡ್ಕ ವಿಭಾಗೀಯ ಕೇಂದ್ರ.


