ಬದಿಯಡ್ಕ: ದಿನನಿತ್ಯ ನೂರಾರು ಮಂದಿ ಭಕ್ತರು ಆಗಮಿಸುವ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಮುಂಭಾಗದ ಗುಡ್ಡವು ಬಿರುಕುಬಿಟ್ಟ ಹಿನ್ನೆಲೆಯಲ್ಲಿ ಮಾರ್ಪನಡ್ಕ ಬದ್ರಿಯಾ ಜುಮಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬದಂದು ಸಾಮೂಹಿಕ ಪ್ರಾರ್ಥನೆಯಲ್ಲಿ ಕ್ಷೇತ್ರಕ್ಕೆ ಹಾಗೂ ಜನಸಾಮಾನ್ಯರಿಗೆ ಯಾವುದೇ ಅಪಾಯವುಂಟಾಗದಂತೆ ಬೇಡಿಕೊಂಡರು. ತನ್ಮೂಲಕ ಊರಿನಲ್ಲಿ ಮತಸೌಹಾರ್ಧತೆಯನ್ನು ಎತ್ತಿಹಿಡಿದರು.
ಮರುದಿನ ಜಮಾಅತ್ ಸಮಿತಿಯ ಅಧ್ಯಕ್ಷ, ಮಾಜಿ ಗ್ರಾಮಪಂಚಾಯಿತಿ ಅಧ್ಯಕ್ಷ ಎಂ. ಅಬೂಬಕ್ಕರ್ ಸಾಹಿಬ್ ಅವರ ನೇತೃತ್ವದಲ್ಲಿ ಮುಸ್ಲಿಂ ಸಮಾಜ ಬಾಂಧವರು ದೇವಸ್ಥಾನದ ಪರಿಸರಕ್ಕೆ ಆಗಮಿಸಿ ತಮ್ಮ ಬೆಂಬಲವನ್ನು ಸೂಚಿಸಿದರು. ಕಾರ್ಯದರ್ಶಿ ಯೂಸುಫ್ ಕರುವಲ್ತಡ್ಕ, ಕೋಶಾಧಿಕಾರಿ ಅಬ್ದುಲ್ಲ ಮಾರ್ಪನಡ್ಕ ಹಾಗೂ ಪದಾಧಿಕಾರಿಗಳು, ಆಡಳಿತ ಸಮಿತಿ ಅಧ್ಯಕ್ಷ ಲತೀಫ್ ಮಾರ್ಪನಡ್ಕ, ಮದ್ರಸ ಆಡಳಿತ ಸಮಿತಿಯ ಸದಸ್ಯರು, ಲತೀಫ್ ಮುಸ್ಲಿಯಾರ್, ಎಸ್.ಎಂ. ಹಂಸ ಮುಸ್ಲಿಯಾರ್ ಬೆಳ್ಳಾರೆ, ಅಶ್ರಫ್ ಮುಸ್ಲಿಯಾರ್ ಪೂತಪಳ್ಳಂ, ಎಂ.ಎಸ್.ಅಬ್ದುಲ್ ಖಾದರ್ ಮುಸ್ಲಿಯಾರ್ ಜೊತೆಗಿದ್ದು ದೇವಸ್ಥಾನದ ಆಡಳಿತ ಸಮಿತಿಯವರೊಂದಿಗೆ ಮಾತುಕತೆ ನಡೆಸಿದರು. ದೇವಸ್ಥಾನ ಆಡಳಿತ ಮೊಕ್ತೇಸರ ಉಪ್ಪಂಗಳ ವಾಸುದೇವ ಭಟ್ ದೇವಸ್ಥಾನದ ಸೇವಾಸಮಿತಿ ಅಧ್ಯಕ್ಷ ರಾಜೇಶ್ ಮಜಕ್ಕಾರು, ಶ್ರೀಕಾಂತ್ ಗುಲಗುಂಜಿ, ರಾಮಭಟ್ ಆತ್ಮೀಯವಾಗಿ ಬರಮಾಡಿಕೊಂಡರು.
ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಶ್ರೀ ಕ್ಷೇತ್ರಕ್ಕೆ ಭೇಟಿಯಿತ್ತು ಸರಕಾರದಿಂದ ಲಭಿಸುವ ಸವಲತ್ತುಗಳ ಅಂಗೀಕಾರಕ್ಕೆ ತನ್ನ ಸಂಪೂರ್ಣ ಸಹಕಾರವನ್ನು ನೀಡುವ ಭರವಸೆಯನ್ನು ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಾತಿಮತ್ ಸುಹರಾ, ಉಪಾಧ್ಯಕ್ಷ ಆನಂದ ಕೆ.ಮವ್ವಾರು, ಕಾರ್ಯದರ್ಶಿ ಅಚ್ಚುತ ಮೊದಲಾದವರು ಜೊತೆಗಿದ್ದರು.


