ಬದಿಯಡ್ಕ: ಸತ್ಯ, ಸಹನೆ, ಧರ್ಮಮಾರ್ಗ, ಪರಾಕ್ರಮಗಳ ಬೆಳಕು ತೋರಿದ ಶ್ರೀರಾಮಚಂದ್ರನ ಆದರ್ಶಗಳು ಹೊಸ ತಲೆಮಾರಿಗೆ ಸ್ಪೂರ್ತಿಯಾಗಬೇಕು. ಪರಂಪರೆ, ಸಂಸ್ಕøತಿಯನ್ನು ಪರಿಚಯಿಸುವ ತಳಮಟ್ಟದ ಕಾರ್ಯಯೋಜನೆಗಳು ಎಲ್ಲೆಡೆ ವ್ಯಾಪಿಸಬೇಕು ಎಂದು ಕೃಷ್ಣಮೂರ್ತಿ ನಡುವಂಗಡಿ ಅವರು ತಿಳಿಸಿದರು.
ಶ್ರೀರಾಮಾಯಣ ವಾರಾಚರಣೆ ಸಮಿತಿ ಬದಿಯಡ್ಕ ಇದರ ನೇತೃತ್ವದಲ್ಲಿ ಬದಿಯಡ್ಕದ ಶ್ರೀರಾಮಲೀಲಾ ಯೋಗ ಶಿಕ್ಷಣ ಕೇಂದ್ರದಲ್ಲಿ ಆ.10 ರಿಂದ ಆಯೋಜಿಸಲಾಗಿರುವ ರಾಮಾಯಣ ವಾರಾಚರಣೆಯ ಅಂಗವಾಗಿ ಮಂಗಳವಾರ ನಡೆದ ನಾಲ್ಕನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸತ್ ಚಿಂತನೆಯ, ಫಲಾಪೇಕ್ಷೆ ಇಲ್ಲದ ಮನೋಸ್ಥಿತಿಗಳು ಇಂದು ಅಗತ್ಯ ಇದೆ. ಸ್ವಾರ್ಥ ಲಾಲಸೆಯಿಂದ ಪ್ರಕೃತಿ ವಿರುದ್ದ ಚಟುವಟಿಕೆಗಳು ಇದೀಗ ನಮ್ಮ ಶಾಂತಿಗೆ ಧಕ್ಕೆ ತಂದೊಡ್ಡುತ್ತಿದೆ. ಈ ನಿಟ್ಟಿನಲ್ಲಿ ಪುರಾಣ, ಶಾಸ್ತ್ರಗಳು ತೊರಿಸಿಕೊಟ್ಟಿರುವ ಋಜು ಮಾರ್ಗದಲ್ಲಿ ಗಮಿಸುವ ಮನೋಸ್ಥಿತಿ ಪ್ರತಿಯೊಬ್ಬನಲ್ಲೂ ನಿಕ್ಷಿಪ್ತವಾಗಬೇಕು ಎಂದು ತಿಳಿಸಿದ ಅವರು ಯುವ ತಲೆಮಾರನ್ನು ಸದಾಶಯದೆಡೆಗೆ ಮುನ್ನಡೆಸುವ ಇಂತಹ ಕಾರ್ಯಕ್ರಮಗಳು ಸ್ತುತ್ಯರ್ಹವಾದುದು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಪುರುಷೋತ್ತಮ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು. ನಿವೃತ್ತ ಪ್ರಾಂಶುಪಾಲ ನಾರಾಯಣ ಭಟ್ ಮೈರ್ಕಳ, ನಿವೃತ್ತ ಮುಖ್ಯೋಪಾಧ್ಯಾಯ ಈಶ್ವರ ನಾಯ್ಕ್ ಉಪಸ್ಥಿತರಿದ್ದು ಶುಭಹಾರೈಸಿದರು. ಪಿಲಿಂಗಲ್ಲು ಕೃಷ್ಣ ಭಟ್, ವಿದ್ವಾನ್ ನಾರಾಯಣ ಮಣಿಯಾಣಿ ಮೊದಲಾದವರು ಉಪಸ್ಥಿತರಿದ್ದರು.
ರಾಮಾಯಣ ವಾರಾಚರಣೆ ಸಮಿತಿ ಸಂಚಾಲಕ ಕರಿಂಬಿಲ ಲಕ್ಷ್ಮಣ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಪ್ರಭಾವತಿ ಕೆದಿಲಾಯ ಪುಂಡೂರು ಸ್ವಾಗತಿಸಿ, ಶಾರದಾ ಎಸ್.ಭಟ್ ಕಾಡಮನೆ ವಂದಿಸಿದರು. ಯೋಗ ಶಿಕ್ಷಕ ಸೂರ್ಯನಾರಾಯಣ ವಳಮಲೆ ಅವರಿಂದ ಶ್ರೀರಾಮ ತಾರಕ ಮಂತ್ರ ಜಪಯಜ್ಞ ಈ ಸಂದರ್ಭ ನಡೆಯಿತು.
ಬಳಿಕ ಮಂಗಳೂರಿನ ಭರತನಾಟ್ಯ ಕಲಾವಿದೆ ರಾಧಾ ಶೆಟ್ಟಿ ಅವರಿಂದ ನಾಟ್ಯ ಸಿಂಚನ ಪ್ರಸ್ತುತಿಗೊಂಡಿತು.



