ಬದಿಯಡ್ಕ: ಸಾಹಿತಿ, ಸಂಶೋಧಕ, ಅಧ್ಯಾಪಕ ದಿ.ಪಿ.ಕೆ.ಶ್ರೀಕೃಷ್ಣ ಭಟ್ ಪಂಜಿತ್ತಡ್ಕ ಅವರ ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಕವಿತಾ ಸ್ಪರ್ಧೆಯಲ್ಲಿ ಬೆಂಗಳೂರಿನ ವಿಜಯಕುಮಾರ್ ಎಸ್ ಅವರ ಕೃಷ್ಣ ಅಲ್ಲಾ ಕವನವು ಪ್ರಥಮ ಸ್ಥಾನವನ್ನು ಪಡೆದಿದೆ. ಅಲ್ಲದೆ ಮೂರು ಪ್ರೋತ್ಸಾಹಕ ಬಹುಮಾನಗಳಿಗೆ ಕ್ರಮವಾಗಿ ವಿ.ಬಿ. ಕುಳಮರ್ವ ಅವರ ತಂಗಾಳಿ, ವೆಂಕಟ ಭಟ್ ಎಡನೀರು ಅವರ ಜೀವನದ ಕವಿತೆ ಹಾಗೂ ಅಮೃತ್ ಬಿ.ವಿ. ಮೂಡಬಿದ್ರೆ ಅವರ ಕ್ಷಮೆ ಕವನಗಳು ಆಯ್ಕೆಯಾಗಿವೆ.
ಸ್ಪರ್ಧೆಯಲ್ಲಿ ಒಟ್ಟು 85 ಕವನಗಳು ಭಾಗವಹಿಸಿದ್ದವು. ನಿರ್ಣಾಯಕರಾಗಿ ಡಾ. ಹರಿಕೃಷ್ಣ ಭರಣ್ಯ, ಕವಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಹಾಗೂ ಚಿಂತಕ ಡಾ.ನರೇಶ್ ಮುಳ್ಳೇರಿಯ ಅವರು ಸಹಕರಿಸಿದ್ದಾರೆ. ಆ. 22ರಂದು ಬದಿಯಡ್ಕದ ರಾಮಲೀಲಾ ಯೋಗ ಶಿಕ್ಷಣ ಕೇಂದ್ರದಲ್ಲಿ ನಡೆಯುವ ದಿ.ಪಿ.ಕೆ.ಶ್ರೀಕೃಷ್ಣ ಭಟ್ ಪಂಜಿತ್ತಡ್ಕ ಅವರ ಜನ್ಮದಿನಾಚರಣೆ ಹಾಗೂ ಚಿಂತನ ಮಂಥನ ಕಾರ್ಯಕ್ರಮ ಜರುಗಲಿದೆ. ಆ ಸಮಾರಂಭದಲ್ಲಿ ಕವಿತಾ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.



