ಮುಳ್ಳೇರಿಯ : ಉಡುಪಿಯ ರಾಜಾಂಗಣದಲ್ಲಿ ಮುಂದಿನ ಡಿಸೆಂಬರ್ 14ರಿಂದ 2 ದಿನಗಳ ಕಾಲ ನಡೆಯುವ ತೌಳವ ತುಳು ಶಿವಳ್ಳಿ ಬ್ರಾಹ್ಮಣ ವಿಶ್ವ ಸಮ್ಮೇಳನವನ್ನು ಯಶಸ್ವಿಗೊಳಿಸಲು ಈಚೆಗೆ ನಡೆದ ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಈ ಸಮ್ಮೇಳನದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸಲು ನಿರ್ಧರಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ವಲಯ ಅಧ್ಯಕ್ಷ ನೂಜಿಬೆಟ್ಟು ವೆಂಕಟಕೃಷ್ಣ ಕಾರಂತ ವಹಿಸಿದ್ದರು. ಸಭೆಯಲ್ಲಿ ಶಿವಳ್ಳಿ ಬ್ರಾಹ್ಮಣ ಸಭಾದ ಜಿಲ್ಲಾ ಅಧ್ಯಕ್ಷೆ ಸತ್ಯಪ್ರೇಮ ಭಾರಿತ್ತಾಯ, ಶ್ರೀಪ್ರಸಾದ ಭಾರಿತ್ತಾಯ, ರಾಜಾರಾಮ ಸರಳಾಯ, ಸಜಿತಾ, ಚಂಚಲಾ, ಕಮಲಾಕ್ಷಿ, ಜಯಲಕ್ಷ್ಮಿ, ಪದ್ಮಾ ಎಚ್, ಪದ್ಮಾ ಆರ್, ಕೃತಿಕಾ ಎ ಮೊದಲಾದವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಾಲ ಪ್ರತಿಭೆಗಳಾದ ನಂದಿತಾ ಸರಳಾಯ, ರಾಜಿತಾ ಸರಳಾಯ, ಪ್ರತಿಮಾ ಭಾರಿತ್ತಾಯ ಹಾಗೂ ಅನನ್ಯಾ ಭಾರಿತ್ತಾಯ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ನಡೆಯಿತು. ಆದ್ಯಂತ ಅಡೂರು ಅವರಿಂದ ರಾಮಾಯಣ ಮಾಸಾಚರಣೆಯ ಅಂಗವಾಗಿ ರಾಮಕೀರ್ತಿ ಕಾವ್ಯವಾಚನ ನಡೆಯಿತು. ರಮೇಶ್ ಭಾರಿತ್ತಾಯ ಸ್ವಾಗತಿಸಿದರು. ಪ್ರಶಾಂತ ರಾಜ ವಿ ತಂತ್ರಿ ವಂದಿಸಿದರು. ಸಂಘಟನೆಯ ಸದಸ್ಯರಿಂದ ಆಗಸ್ಟ್ 27ರಿಂದ ಪ್ರತೀ ವೈಷ್ಣವ ಏಕಾದಶಿಯಂದು ಸಂಜೆ 6.30ರಿಂದ ಅಡೂರು ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಯೋಜನೆಯು ಬೆಳ್ಳೂರು, ಕಲ್ಲೇರಿಮೂಲೆ ಹಾಗೂ ನೂಜಿಬೆಟ್ಟು ಮಹಾವಿಷ್ಣು ಕ್ಷೇತ್ರದಲ್ಲಿ ಈಗಾಗಲೇ ಆರಂಭವಾಗಿದೆ. ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಭಾದ ಮಹಿಳಾ ಘಟಕದ ಆಶ್ರಯದಲ್ಲಿ ಉಚಿತವಾಗಿ ಆರಂಭವಾಗುವ ಶಿವಳ್ಳಿ ನೂತನ ವಧೂವರರ ವಿವಾಹ ವೇದಿಕೆಗೆ ಅಗತ್ಯ ಮಾಹಿತಿಗಳನ್ನು ನೀಡಿ, ಯೋಜನೆಯ ಸದುಪಯೋಗವನ್ನು ಪಡೆಯಲು ನಿರ್ಧರಿಸಲಾಗಿದೆ. ಮುಳ್ಳೇರಿಯ ವಲಯ ಶಿವಳ್ಳಿ ಬ್ರಾಹ್ಮಣ ಸಭಾದ ಮುಂದಿನ ತಿಂಗಳ ಸಭೆಯು ಸೆಪ್ಟೆಂಬರ್ 10ರಂದು ಬೆಳಗ್ಗೆ 10ರಿಂದ ಅಡೂರು ಕೃಷ್ಣನಿವಾಸದ ಬಾಲಕೃಷ್ಣ ತಂತ್ರಿಗಳ ಮನೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.


