ಕಾಸರಗೋಡು: ಕರ್ನಾಟಕ ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಶತಮಾನೋತ್ಸವ ಆ.17 ಮತ್ತು 18 ರಂದು ಕಾಸರಗೋಡಿನ ಬದಿಬಾಗಿಲಿನಲ್ಲಿರುವ ಹವ್ಯಕ ಸಭಾ ಭವನದಲ್ಲಿ ಜರಗಲಿದೆ.
ಆ. 17 ರಂದು ಬೆಳಿಗ್ಗೆ 9.30 ಕ್ಕೆ ಹರಿಕೃಷ್ಣ ಪುನರೂರು ಅವರು ದಶಮಾನೋತ್ಸವವನ್ನು ಉದ್ಘಾಟಿಸಲಿದ್ದಾರೆ. ಬೆಳ್ಳಿಗೆ ನಾರಾಯಣ ಮಣಿಯಾಣಿ ಅವರು ದೀಪಜ್ವಲನೆ ಮಾಡಲಿದ್ದಾರೆ. ತೆಕ್ಕೇಕೆರೆ ಶಂಕರ ನಾರಾಯಣ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
10 ರಿಂದ ಪೆÇ್ರ.ಎಂ.ವಿ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ಗಮಕ ಮತ್ತು ಯಕ್ಷಗಾನ ಎಂಬ ವಿಷಯದಲ್ಲಿ ಸಮಗ್ರ ವಿಚಾರಗೋಷ್ಠಿ ನಡೆಯಲಿರುವುದು. ನಾಡಿನ ಹನ್ನೆರಡು ಜನ ಖ್ಯಾತ ವಿದ್ವಾಂಸರು ವಿಚಾರಗೋಷ್ಠಿಯಲ್ಲಿ ಸಂವಾದ ನಡೆಸಲಿರುವರು. ಅಪರಾಹ್ನ ನುರಿತ ಕಲಾವಿದರಿಂದ ಬೀಷ್ಮ ಸೇನಾ„ಪತ್ಯ ಕರ್ಮಬಂಧ ಎಂಬ ಪ್ರಸಂಗದ ಯಕ್ಷಗಾನ ತಾಳಮದ್ದಳೆ ಜರಗಲಿರುವುದು.
ಆ.18 ರಂದು ಪೂರ್ವಾಹ್ನ ಗಮಕ ಶಿಬಿರ ಹಾಗೂ ವಿವಿಧ ಕಾವ್ಯ ಪ್ರಕಾರಗಳಲ್ಲಿ ವಿಚಾರಗೋಷ್ಠಿ ಜರಗಲಿರುವುದು. ಶಿಬಿರಾರ್ಥಿಗಳಿಂದ ವಾಚನ-ವ್ಯಾಖ್ಯಾನವೂ ನಡೆಯಲಿರುವುದು.
ಅಪರಾಹ್ನ ಖ್ಯಾತ ಸಂಸ್ಕøತ ವಿದ್ವಾಂಸರಾದ ನಾರಾಯಣ ಹೆಗಡೆ ಮತ್ತು ಡಾ.ಸದಾಶಿವ ಭಟ್ ಸರವು ಅವರು ಸಂಸ್ಕøತದಲ್ಲಿ ಗಮಕ ವಾಚನ-ವ್ಯಾಖ್ಯಾನ ಕಾರ್ಯಕ್ರಮವನ್ನು ನಡೆಸಿಕೊಡಲಿರುವರು.
ಬಳಿಕ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಯಕ್ಷಗಾನ ಆಕಾಡೆಮಿಯ ಸದಸ್ಯರಾದ ಖ್ಯಾತ ನ್ಯಾಯವಾದಿ ಎಂ.ದಾಮೋದರ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಡಾ.ಯು. ಮಹೇಶ್ವರಿ ಅವರು ಸಮಾರೋಪ ಭಾಷಣ ಮಾಡುವರು. ಈ ಸಂದರ್ಭದಲ್ಲಿ ತುಲಸೀ ದಾಸರ ರಾಮಾಯಣವನ್ನು ಹಳೆಗನ್ನಡಕ್ಕೆ ಅನುವಾದ ಮಾಡಿದ ಹಿರಿಯ ವಿದ್ವಾಂಸರಾದ ವಿದ್ವಾನ್ ಎನ್.ತಿಮ್ಮಣ್ಣ ಭಟ್ಟ ನೆತ್ತರಗುಳಿ ಮತ್ತು ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಕೇಂದ್ರ ಸರಕಾರದ ಇಂಧನ ಇಲಾಖೆಯಿಂದ ಪ್ರಥಮ ಬಹುಮಾನದ ಗೌರವದೊಂದಿಗೆ ಸಿಂಗಾಪುರದ ಪ್ರವಾಸವನ್ನು ಪೂರೈಸಿ ಬಂದ ಬಾಲಪ್ರತಿಭೆ ಮೇಧಾ ಭಟ್ ನಾಯರ್ಪಳ್ಳ ಅವರನ್ನು ಸಮ್ಮಾನಿಸಲಾಗುವುದು.
ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಕರ್ನಾಟಕ ಕಲಾಶ್ರೀ ಗಮಕಿ ತೆಕ್ಕೇಕೆರೆ ಸುಬ್ರಹ್ಮಣ್ಯ ಭಟ್, ಉಂಡೆಮನೆ ವಿಶ್ವೇಶ್ವರ ಭಟ್, ಜಯಲಕ್ಷ್ಮೀ ಕಾರಂತ, ಮೋಹನ ಕಲ್ಲೂರಾಯ ಮತ್ತು ವಿ.ಬಿ.ಕುಳಮರ್ವ ಭಾಗವಹಿಸಲಿರುವರು.


