ಬದಿಯಡ್ಕ: ರಾಜ್ಯವೇ ಮಹಾಮಳೆಯಲ್ಲಿ ಮುಳುಗಿದ್ದರೂ ಸರ್ಕಾರ, ಶಾಸಕರು, ಸಂಸದರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿದ್ರಾವಸ್ಥೆಯಲ್ಲಿದ್ದಾರೆಯೇ ಹೊರತು ಕಾಸರಗೋಡು ಜಿಲ್ಲೆಯ ಅಂತಾರಾಜ್ಯ ಸಂಪರ್ಕ ರಸ್ತೆಯಲ್ಲಿ ಗುಡ್ಡ ಕುಸಿತವನ್ನು ತೆರವುಗೊಳಿಸಿ ರಸ್ತೆಯನ್ನು ಸಂಚಾರಯೋಗ್ಯವಾಗಿಸುವತ್ತ ಮನಮಾಡಿಲ್ಲ. ಕಾಸರಗೋಡು ಜಿಲ್ಲೆಯ ನಿರಂತರ ಅವಗಣನೆಯಲ್ಲಿ ಇದೂ ಒಂದಾಗಿ ದಾಖಲಾಯಿತು. ಕರಿಂಬಿಲ ರಸ್ತೆಯನ್ನು ಸರಿಪಡಿಸಿ, ಜನರ ಸಂಕಷ್ಟಕ್ಕೆ ನೆರವಾಗದಿದ್ದಲ್ಲಿ ಅತ್ಯುಗ್ರವಾದ ಪ್ರತಿಭಟನೆಯನ್ನು ಎದುರಿಸಬೇಕಾದೀತು ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಸರ್ಕಾರಕ್ಕೆ ಎಚ್ಚರಿಕೆಯ ಮಾತುಗಳನ್ನು ಹೇಳಿದರು.
ಚೆರ್ಕಳ ಕಲ್ಲಡ್ಕ ರಸ್ತೆಯ ಕರಿಂಬಿಲದಲ್ಲಿ ಗುಡ್ಡ ಕುಸಿತದಿಂದ ಉಂಟಾದ ರಸ್ತೆ ತಡೆಯನ್ನು ನಿವಾರಿಸಿ ರಸ್ತೆಯನ್ನು ಸಂಚಾರಯೋಗ್ಯಗೊಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಬಿಜೆಪಿ ಜನಪ್ರತಿನಿಧಿಗಳು ಹಾಗೂ ನಾಗರಿಕರು ಬದಿಯಡ್ಕ ಲೋಕೋಪಯೋಗಿ ಕಚೇರಿಯ ಮುಂಭಾಗದಲ್ಲಿ ಶುಕ್ರವಾರ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಳೆಗಾಲದಲ್ಲಿ ವಿವಿಧೆಡೆ ಹಾನಿ ಉಂಟಾಗುವುದು ಸರ್ವೇಸಾಮಾನ್ಯವಾಗಿದೆ. ಪ್ರಮುಖ ರಸ್ತೆಗಳು ಹಾನಿಗೊಂಡರೆ ತಕ್ಷಣ ದುರಸ್ತಿ ಕಾರ್ಯ ನಡೆಯಬೇಕಿದೆ. ಕಾಸರಗೋಡಿನ ಶಾಸಕರು ಮಧ್ಯವರ್ತಿಯಾಗಿ ಈ ಸಮಸ್ಯೆಗೆ ಪರಿಹಾರವನ್ನು ಕಾಣಬೇಕಾಗಿತ್ತು. ಸರ್ಕಾರದ ಕಣ್ಣುತೆರೆಸಬೇಕಾಗಿರುವುದು ಶಾಸಕರ ಕರ್ತವ್ಯವಾಗಿದೆ. ಆದರೆ ಜನರ ಕಣ್ಣಿಗೆ ಮಣ್ಣೆರಚುವ ಕಾರ್ಯವನ್ನು ಮಾತ್ರ ಈ ಶಾಸಕರು ಮಾಡುತ್ತಿದ್ದಾರೆ. ಇಲ್ಲಿನ ಜನರು ಅಷ್ಟೊಂದು ಕಷ್ಟಪಡುತ್ತಿರುವ ಸಂದರ್ಭದಲ್ಲಿ ಕಾಸರಗೋಡಿನ ಮಂತ್ರಿ ಇ.ಚಂದ್ರಶೇಖರನ್ ಅವರು ಇಲ್ಲಿಗೆ ಆಗಮಿಸುವ ಮನಸ್ಸೇ ಮಾಡದಿರುವುದು ಖಂಡನೀಯ. ಜನರ ತಾಳ್ಮೆಯನ್ನು ಪರೀಕ್ಷಿಸುವುದು ಸರಿಯಲ್ಲ, ಇದಕ್ಕೆಲ್ಲ ತಕ್ಕ ಪ್ರತೀಕಾರವನ್ನು ನೀಡಲು ಜನರು ಕಾಯುತ್ತಿದ್ದಾರೆ ಎಂದರು.
ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಎಂ.ಸುಧಾಮ ಗೋಸಾಡ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ಮುಸ್ಲಿಂಲೀಗಿನ ಕೈಗೊಂಬೆಯಾಗಿರುವ ಕಾಂಗ್ರೆಸ್ ಪಕ್ಷವು ಇಲ್ಲಿ ನಿಶ್ಚಲವಾಗಿದೆ. ಸಚಿವರು, ಶಾಸಕರು, ಅಧಿಕಾರಿಗಳು ನಿಶ್ಚಲರಾಗಿದ್ದು ಜನತೆಗೆ ದ್ರೋಹವನ್ನೆಸಗುತ್ತಿದ್ದಾರೆ. ಜನರ ಕಷ್ಟದ ಅರಿವಿಲ್ಲದಂತೆ ನಟಿಸಿದರೆ ತಕ್ಕ ಬೆಲೆಯನ್ನು ತೆರಬೇಕಾದೀತು ಎಂದರು. ಬ್ಲಾಕ್ ಪಂಚಾಯಿತಿ ಸದಸ್ಯ ಅವಿನಾಶ್ ರೈ ಮಾತನಾಡಿದರು. ಜನಪ್ರತಿನಿಧಿಗಳಾದ ಬಾಲಕೃಷ್ಣ ಶೆಟ್ಟಿ ಕಡಾರು, ಪುಷ್ಪ, ರಾಜೇಶ್ವರಿ, ಜಯಂತಿ, ಪ್ರೇಮ, ಲಕ್ಷ್ಮೀನಾರಾಯಣ ಪೈ, ಯುವಮೋರ್ಚಾ ಕಾಸರಗೋಡು ಮಂಡಲ ಅಧ್ಯಕ್ಷ ಹರೀಶ್ ಗೋಸಾಡ, ನೇತಾರರಾದ ಮೈರ್ಕಳ ನಾರಾಯಣ ಭಟ್, ಕೃಷ್ಣ ಮಣಿಯಾಣಿ ಮೊಳೆಯಾರು, ಬಾಲಗೋಪಾಲ ಏಣಿಯರ್ಪು, ಕರಿಂಬಿಲದ ನಾಗರಿಕರು ಹಾಗೂ ಊರವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕೆಡೆಂಜಿ ತಿರುವಿನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬದಿಯಡ್ಕ ಪೇಟೆಯಲ್ಲಿ ಸಾಗಿ ಲೋಕೋಪಯೋಗಿ ಕಚೇರಿಯ ಮುಂಭಾಗದಲ್ಲಿ ಮುಷ್ಕರ ನಡೆಸಲಾಯಿತು. ಬದಿಯಡ್ಕ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳಾದ ಡಿ.ಶಂಕರ ಸ್ವಾಗತಿಸಿ, ವಿಶ್ವನಾಥ ಪ್ರಭು ಕರಿಂಬಿಲ ವಂದಿಸಿದರು.


