ಮಂಜೇಶ್ವರ: ವರ್ಕಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಕೃಷಿ ವಿಜ್ಞಾನ ಉಪಕೇಂದ್ರದಲ್ಲಿ ಆಟಿ ಮಾಸದ ವಿಶೇಷತೆಗಳನ್ನು ಸಾರುವ ಆಟಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.
ವರ್ಕಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಹಲವು ವಿಶೇಷತೆಗಳನ್ನು ಸಾರುವ ಆಟಿ ಮಾಸವು ಸಂಸ್ಕøತಿಯ ಜೊತೆ ಆಹಾರ ಪದ್ಧತಿ ಸಹಿತ ಪಾರಂಪರಿಕ ಜೌಷಧೀಯ ಆಹಾರೋತ್ಪನ್ನಗಳ ಪಾಠವನ್ನು ಕಲಿಸುತ್ತದೆ ಎಂದರು. ಆಟಿ ಮಾಸವು ಆರೋಗ್ಯದ ಬಗ್ಗೆ ಕಾಳಜಿಯನ್ನು ಮೂಡಿಸಿ ಉತ್ತಮ ಆಹಾರ ಕ್ರಮವನ್ನು ಮೈಗೂಡಿಸಿಕೊಳ್ಳುವ ಸಂದೇಶವನ್ನು ನೀಡುತ್ತದೆ ಎಂದರು. ಈ ಸಂದರ್ಭ ಸಂಸ್ಥೆಯಲ್ಲಿ ಆಟಿ ವಿಶೇಷ ಖಾದ್ಯ ಮತ್ತು ಜೌಷಧೀಯ ಸಸ್ಯಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಕಾರ್ಯಾಗಾರದಲ್ಲಿ ಪೌಷ್ಠಿಕಾಂಶಯುಕ್ತ ಹಸಿರು ಎಲೆ ತರಕಾರಿ ಬೆಳೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿ ಲಕ್ಷ್ಮೀ ಭಟ್ ಮಾಹಿತಿ ನೀಡಿದರು. ಮಳೆಗಾಲದಲ್ಲಿ ಬೆಳೆಸಬಹುದಾದ ಹಸಿರು ಎಲೆ ತರಕಾರಿಗಳು ದೇಹದ ಪಚನ ಶಕ್ತಿಯನ್ನು ಹೆಚ್ಚಿಸಿ, ಹೆಚ್ಚಿನ ಪೌಷ್ಠಿಕಾಂಶವನ್ನು ನೀಡಿ ಶರೀರ ಸ್ವಾಸ್ಥ್ಯ ಕಾಪಾಡುವಲ್ಲಿ ಪರಿಣಾಮಕಾರಿ ಪಾತ್ರ ವಹಿಸುತ್ತದೆ ಎಂದರು. ಕುಟುಂಬಶ್ರೀ ಘಟಕದ ಮೂಲಕ ನಲವತ್ತಕ್ಕೂ ಅಧಿಕ ಜೌಷಧ ಸಸ್ಯಗಳು ಮತ್ತು 20ಕ್ಕೂ ಅಧಿಕ ಆಟಿ ಖಾದ್ಯಗಳನ್ನು ಪರಿಚಯಿಸಲಾಯಿತು. ಗೋಪಾಲಕೃಷ್ಣ ಪಜ್ವ, ಸುನೀತಾ ಡಿ'ಸೋಜಾ, ಜೆಸಿಂತಾ ಡಿ'ಸೋಜಾ, ಸೀತಾ.ಡಿ ಮತ್ತು ಕೆ.ವಿ.ಕೆ ಮುಖ್ಯ ಅಧಿಕಾರಿ ಡಾ.ಗಿರಿಧರನ್ ಉಪಸ್ಥಿತರಿದ್ದರು. ಕೆ.ವಿ.ಕೆ ಉಪಕೇಂದ್ರದ ವರ್ಕಾಡಿ ನಿರ್ದೇಶಕ ಡಾ.ಶಶಿಕಾಂತ್ ಸ್ವಾಗತಿಸಿ, ಚೈತ್ರಾ ವಂದಿಸಿದರು.



