HEALTH TIPS

ಕೃಷಿ ನಾಶಕ್ಕೆ ಕಾರಣವಾಗಲಿರುವ ಆಫ್ರಿಕನ್ ಬಸವನ ಹುಳು ಮತ್ತೆ ಪ್ರತ್ಯಕ್ಷ- ಮೀಂಜ, ಪೈವಳಿಕೆ ಗ್ರಾ.ಪಂ ವ್ಯಾಪ್ತಿಯಲ್ಲಿ ಬೃಹತ್ ಗಾತ್ರದ ಬಸವನಹುಳುಗಳು ಪತ್ತೆ

 
          ಮಂಜೇಶ್ವರ/ಉಪ್ಪಳ: ಮಂಜೇಶ್ವರ ತಾಲೂಕಿನ ಮೀಂಜ, ಪೈವಳಿಕೆ ಗ್ರಾ.ಪಂ ವ್ಯಾಪ್ತಿಯಲ್ಲಿ ಬೃಹತ್ ಗಾತ್ರದ ಆಫ್ರಿಕನ್ ಬಸವನಹುಳುಗಳು ಪತ್ತೆಯಾಗಿವೆ. ಆ.9 ರಂದು ಮೀಂಜ ಗ್ರಾಮ ಪಂಚಾಯತಿನಲ್ಲಿ ನಡೆದ ತಿಳುವಳಿಕಾ ಶಿಬಿರದಲ್ಲಿ ಬಸವನಹುಳುಗಳ ಉಪಟಳವನ್ನು ತಪ್ಪಿಸುವ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಮೇರಾ ಗಾಂವ್, ಮೇರಾ ಗೌರವ್(ನನ್ನ ಊರು, ನನ್ನ ಹೆಮ್ಮೆ) ಯೋಜನೆಯಡಿ ಐಸಿಎಆರ್-ಸಿಪಿಸಿಆರ್‍ಐ ವಿಜ್ಞಾನಿಗಳ ತಂಡವು ಸ್ಥಳೀಯ ಕೃಷಿಕರು ಸಹಿತ ಜನಸಾಮಾನ್ಯರಿಗೆ ಕೃಷಿ ರೋಗಬಾಧೆಯನ್ನು ತಡೆಯುವ ನಿಟ್ಟಿನ ಮಾಹಿತಿಯನ್ನು ನೀಡಿತು. ಕೃಷಿ ಇಲಾಖೆ ಅಧೀನದಲ್ಲಿ ನಡೆದ ಸಭೆಯಲ್ಲಿ ಸಿಪಿಸಿಆರ್‍ಐ ಮುಖ್ಯ ವಿಜ್ಞಾನಿ ಡಾ.ಸಿ ತಂಬಾನ್ ಬೃಹತ್ ಆಫ್ರಿಕನ್ ಬಸವನಹುಳು ಉಪಟಳವನ್ನು ತಡೆಯುವ ಬಗ್ಗೆ ಮಾಹಿತಿ ನೀಡಿದರು. ಡಾ.ಕೆ.ಬಿ ಹೆಬ್ಬಾರ್, ಡಾ.ವಿನಾಯಕ ಹೆಗ್ಡೆ, ಡಾ.ಎಂ.ಕೆ ರಾಜೇಶ್, ಡಾ.ಪಿ.ಎಸ್ ಪ್ರತಿಭಾ, ಡಾ.ಎಸ್.ನೀನು, ಆತ್ಮಾ ಯೋಜನಾ ನಿರ್ದೇಶಕಿ ಸುಷ್ಮಾ, ಆತ್ಮಾ ಉಪ ನಿರ್ದೇಶಕ ಕೆ.ಸಜೀವ ಕುಮಾರ್, ಮೀಂಜ ಗ್ರಾ.ಪಂ ಸದಸ್ಯೆ ಶಾಲಿನಿ ಶೆಟ್ಟಿ, ಮೀಂಜಾ ಕೃಷಿ ಭವನದ ಕೃಷಿ ಅಧಿಕಾರಿ ಸಜು, ಪೈವಳಿಕೆ ಕೃಷಿ ಭವನದ ಕೃಷಿ ಅಧಿಕಾರಿ ಅಂಜನಾ ಇದ್ದರು. ಕಾರ್ಯಕ್ರಮದಲ್ಲಿ ಕೊನೆಯಲ್ಲಿ ವಿವಿಧ ತಂಡಗಳನ್ನು ರಚಿಸಿ ಕ್ಷೇತ್ರ ವೀಕ್ಷಣೆ ಮಾಡಲಾಯಿತು. ಕೃಷಿ ಅಧಿಕಾರಿ ಸಜು ಸ್ವಾಗತಿಸಿದರು, ಸಿಪಿಸಿಆರ್‍ಐ ನ ಮುಖ್ಯಸ್ಥ ಡಾ.ಕೆ.ಬಿ ಹೆಬ್ಬಾರ್ ವಂದಿಸಿದರು. 
       ಅಪಾಯಕಾರಿ ಆಫ್ರಿಕನ್ ಬಸವನಹುಳು ಕೃಷಿ ಸಹಿತ ಮಾನವನ ಆರೋಗ್ಯಕ್ಕೂ ಅಪಾಯಕಾರಿ:
      ಆಫ್ರಿಕನ್ ಬಸವನಹುಳುಗಳು ಕೃಷಿ ಸಹಿತ ಮಾನವನ ಆರೋಗ್ಯದ ಮೇಲೂ ಕೆಟ್ಟ ಪರಿಣಾಮವನ್ನು ಉಂಟು ಮಾಡುತ್ತವೆ. ಇದರ ದೇಹರಚನೆಯು ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸಂತಾನೋತ್ಪತ್ತಿ ಮಾಡುವ ಸಾಮಥ್ರ್ಯವನ್ನು ನೀಡುತ್ತದೆ. ಬೆಳೆದ ಬಸವನಹುಳು 5 ರಿಂದ 20 ಸಿ.ಎಂ ತನಕ ಉದ್ದವಿರುತ್ತವೆ. ಮಳೆಗಾಲ ಸಂದರ್ಭ ಒಂದು ಹುಳು ಸುಮಾರು 500 ರಷ್ಟು ಮೊಟ್ಟೆಯಿಡುತ್ತವೆ. 6 ರಿಂದ 12 ತಿಂಗಳ ಕಾಲ ಕಾಣಿಸಿಕೊಳ್ಳುವ ಆಫ್ರಿಕನ್ ಬಸವನಹುಳುಗಳು ಐದರಿಂದ ಹತ್ತು ವರ್ಷಗಳ ಕಾಲ ಬದುಕುತ್ತವೆ. ಬೇಸಿಗೆ ಮತ್ತು ಚಳಿಗಾಲದಲ್ಲಿ ವಸಂತ ಸುಪ್ತಿ ಮತ್ತು ಶಿಶಿರ ಸುಪ್ತಿ-ನಿದ್ರೆಗೆ ಜಾರುವ ಬಸವನಹುಳುಗಳು ಹಲವು ಸಮಯದವರೆಗೆ ಕಾಣಿಸಿಕೊಳ್ಳುವುದಿಲ್ಲ. ಮಳೆಗಾಲದಲ್ಲಿ ತೇವದ ಪ್ರದೇಶ, ಕೊಳೆತಿನಿಗಳು, ಕಾಂಪೌಂಡ್ ಗೋಡೆ, ರಬ್ಬರ್, ತೆಂಗು ತೋಟ, ತೆಂಗಿನ ಬುಡ, ರಾಶಿ ಹಾಕಲ್ಪಟ್ಟ ಮರದ ಹೊಟ್ಟಿನಲ್ಲಿರುತ್ತವೆ. 500 ಕ್ಕೂ ಹೆಚ್ಚಿನ ಕೃಷಿಯನ್ನು ನಾಶಪಡಿಸುವ ಬೃಹತ್ ಬಸವನಹುಳುಗಳು ತೆಂಗು, ಕಂಗು, ಭತ್ತದ ಸಹಿತ ಹಲವು ಕೃಷಿ ಸಸ್ಯಗಳ ಎಸಳುಗಳನ್ನು ಅಪರಿಮಿತವಾಗಿ ತಿನ್ನುತ್ತವೆ. ನೆಮಟೋಡ್ ಎಂಬ ಪ್ಯಾರಸೈಟ್ ಹೊತ್ತೊಯ್ಯುವ ಆಫ್ರಿನ್ ಬಸವನಹುಳುಗಳು ಮನುಷ್ಯರಲ್ಲಿ ತುರಿಕೆ, ಚರ್ಮ ರೋಗವನ್ನು ಹರಡುತ್ತವೆ.
       ಬಸವನ ಹುಳು ಬಾಧೆಯನ್ನು ತಡೆಯುವ ವಿಧಾನ:
-ಬಸವನ ಹುಳು ಹೆಚ್ಚಾಗಿ ಕಂಡು ಬರುವ ಆವಾಸ ಸ್ಥಳಗಳನ್ನು ನಾಶಪಡಿಸುವುದು. ಚಳಿ, ಬೇಸಿಗೆ ಕಾಲದಲ್ಲಿ ಸುಪ್ತ ನಿದ್ರೆಗೆ ಜಾರುವ ಬಸವನ ಹುಳುಗಳಿರುವ ಕೊಳೆತಿನಿಗಳು, ಮರದ ದಿಮ್ಮಿ, ಮರದ ಹೊಟ್ಟಿರುವ ಪ್ರದೇಶಗಳನ್ನು ಗೊತ್ತುಪಡಿಸುವುದು.
-ಸಾಯಂಕಾಲ ಸಮಯದಲ್ಲಿ ಆಫ್ರಿಕನ್ ಬಸವನ ಹುಳುಗಳಿರುವ ಸ್ಥಳಗಳಲ್ಲಿ ಉಪ್ಪನ್ನು ಸಿಂಪಡಿಸುವುದು ಮತ್ತು ಬಸವನ ಹುಳುಗಳ ಮೇಲ್ಭಾಗದಲ್ಲಿ ಉಪ್ಪನ್ನು ಹಾಕಿ ನಿರ್ಮೂಲನೆ ಮಾಡುವುದು
-ಒಂದು ಲೀಟರ್ ನೀರಿಗೆ ಮೈಲುತುತ್ತು(60 ಗ್ರಾಂ) ಮತ್ತು ತಂಬಾಕು ಮಿಶ್ರಣ(25 ಗ್ರಾಂ) ಕದಡಿಸಿ ಸಿಂಪಡಿಸುವುದು
- ವಸತಿ ಪ್ರದೇಶಗಳ ಸಮೀಪ ಬಸವನಹುಳುಗಳು ಬಾರದಂತೆ ಬೋರಾಕ್ಸ್ ಪೌಡರ್, ಸಾಮಾನ್ಯ ಉಪ್ಪು, ತಂಬಾಕು ಮಿಶ್ರಣ ಸಿಂಪಡನೆ
-ಕೃಷಿ ಸಸ್ಯ ಎಸಳುಗಳ ಮೇಲೆ ಬೇವಿನ ಎಣ್ಣೆ ಮತ್ತು ಬೆಳ್ಳುಳ್ಳಿ ಮಿಶ್ರಿತ ಎಣ್ಣೆ ಸಿಂಪಡನೆ ಮಾಡುವುದರಿಂದ ಆಫ್ರಿಕನ್ ಬಸವನಹುಳು ಸಮೀಪ ಸುಳಿಯುದಿಲ್ಲ
-ತರಕಾರಿ ಮತ್ತು ಭತ್ತ ಗದ್ದೆಗಳಿಗೆ ಬೋರ್ಡೆಕ್ಸ್ ಮಿಶ್ರಣದ ಸಿಂಪಡಣೆಯಿಂದ ಬಸವನ ಹುಳುಗಳ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
- ಆಫ್ರಿಕನ್ ಬಸವನ ಹುಳುಗಳ ಸಂಖ್ಯೆ ಹೆಚ್ಚಿದ್ದಲ್ಲಿ ಗೋಣಿಚೀಲದಲ್ಲಿ ಪಾಪಾಯಿ ಎಲೆಗಳು ಅಥವಾ ಹೂಕೋಸು ಎಲೆಗಳನ್ನು ಇರಿಸಿ ಸಂಜೆ ವೇಳೆ ಹುಳುಗಳನ್ನು ಆಕರ್ಷಿಸಿ     ನಂತರ ಉಪ್ಪಿನ ದ್ರಾವಣವನ್ನು ಸಿಂಪಡಿಸುವುದರ ಮೂಲಕ ನಾಶಪಡಿಸಬಹುದು. ಬೃಹತ್ ಆಫ್ರಿಕನ್ ಬಸವನಹುಳು ಕೃಷಿಗೆ ನೀಡುವ ಉಪಟಳವನ್ನು ಮಟ್ಟ ಹಾಕಲು ಸಾಮೂಹಿಕ ಕ್ರಿಯಾತ್ಮಕತೆಯ ಅವಶ್ಯಕತೆ ಇದೆ. ಕೃಷಿಕರು ಸಾಮಾಜಿಕ ಸಂಘಟನೆಗಳು, ಕೃಷಿ ಇಲಾಖೆ ಸಹಿತ ಸ್ಥಳೀಯಾಡಳಿತ, ಮಹಿಳಾ ಸ್ವಯಂ ಸೇವಾ ಸಂಘಟನೆಗಳು, ಕೃಷಿ ಸಂಘಟನೆಗಳ ಪರಸ್ಪರ ನೆರವಿನೊಂದಿಗೆ ಹೆಚ್ಚಿದ ಆಫ್ರಿಕನ್ ಬಸವನಹುಳುಗಳ ಉಪಟಳವನ್ನು ತಪ್ಪಿಸಿಕೊಳ್ಳಬಹುದು.
   ಒಂದಷ್ಟು:   ಕಳೆದ ಮಳೆಗಾಲದಲ್ಲಿ ಪೈವಳಿಕೆ, ಮೀಂಜ, ಬದಿಯಡ್ಕ ಗ್ರಾ.ಪಂ. ವ್ಯಾಪ್ತಿಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಆಪ್ರಿಕನ್ ಬಸವನ ಹುಳ ಪತ್ತೆಯಾಗಿತ್ತು. ದೊಡ್ಡ ಪ್ರಮಾಣದಲ್ಲಿ ಕೃಷಿ ನಾಶಕ್ಕೆ ಕಾರಣವಾಗಿದ್ದ ಈ ಹುಳ ಕೃಷಿಕರ ಯಾವ ಪ್ರತಿರೋಧ ತಂತ್ರಕ್ಕೂ ಮಣಿದಿರಲಿಲ್ಲ. ಆ ಬಳಿಕ ಹಠಾತ್ ಆಗಿ ನಿರ್ನಾಮವಾಗಿದ್ದು, ಬಳಿಕ ಇದೀಗ ಮತ್ತೆ ಕಾಣಿಸಿಕೊಂಡು ಕೃಷಿಕರಲ್ಲಿ ಆತಂಕ ಮೂಡಿಸಿದೆ. 
(ಚಿತ್ರ ಮಾಹಿತಿ: ಕಾರ್ಯಾಗಾರದಲ್ಲಿ ಮಾಹಿತಿ ಹಂಚಿಕೆ ಹಾಗೂ ಆಪ್ರಿಕನ್ ಬಸವನ ಹುಳ.)

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries