ಉಪ್ಪಳ: ಮಂಜೇಶ್ವರ ಬ್ಲಾಕ್ ಪಂಚಾಯತಿ ಸ್ವಾಮ್ಯದಲ್ಲಿರುವ ಮಂಗಲ್ಪಾಡಿಯಲ್ಲಿ ಚಟುವಟಿಕೆ ನಡೆಸುತ್ತಿರುವ ತಾಲೂಕು ಹೆಡ್ ಕ್ವಾಟರ್ಸ್ ಆಸ್ಪತ್ರೆ ಇನ್ನು ಮುಂದೆ ವಿಸ್ತೃತ ಸೌಲಭ್ಯಗಳನ್ನು ಹೊಂದಲಿದೆ.
ಕುಂಬಳೆ, ಮಂಗಲ್ಪಾಡಿ, ಮಂಜೇಶ್ವರ, ಮೀಂಜ,ವರ್ಕಾಡಿ ಸಹಿತ 8 ಗ್ರಾಮಪಂಚಾಯತಿಗಳ ಜನ ಈ ಆಸ್ಪತ್ರೆಯನ್ನು ಆಶ್ರಯಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ನೂತನವಾಗಿ ದಾಖಲಾತಿ ಚಿಕಿತ್ಸೆ ಮತ್ತು ತುರ್ತು ನಿಗಾ ಘಟಕ ಸೌಲಭ್ಯ ಬುಧವಾರದಿಂದ ಆರಂಭಗೊಂಡಿದೆ. ಆರಂಭಕ್ಕೆ ಸಮುದಾಯ ಆರೋಗ್ಯ ಸಂಸ್ಥೆಯಾಗಿದ್ದ ಈ ಚಿಕಿತ್ಸಾ ಕೇಂದ್ರವನ್ನು ರಾಜ್ಯ ಸರ್ಕಾರ ಕಳೆದ ವರ್ಷ ಬಡ್ತಿಗೊಳಿಸಿತ್ತು. ಆಸ್ಪತ್ರೆಯ ಸೌಲಭ್ಯವನ್ನು ಇನ್ನಷ್ಟು ವಿಸ್ತೃತಗೊಳಿಸುವ ನಿಟ್ಟಿನಲ್ಲಿ 20 ಕೋಟಿರೂ. ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ.
ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಲಾದ ದಾಖಲಾತಿ ಚಿಕಿತ್ಸಾ ಸೌಲಭ್ಯವನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಬುಧವಾರ ಉದ್ಘಾಟಿಸಿದರು. ತುರ್ತು ನಿಗಾ ಘಟಕಕ್ಕೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಚಾಲನೆ ನೀಡಿದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಪಿ.ದಿನೇಶ್ ಕುಮಾರ್ ಪ್ರಧಾನ ಭಾಷಣ ಮಾಡಿದರು. ನ್ಯಾಷನಲ್ ಹೆಲ್ತ್ ಮಿಷನ್ ಜಿಲ್ಲಾ ಕಾರ್ಯಪ್ರಬಂಧಕ ಡಾ.ರಾಮನ್ ಸ್ವಾತಿವಾನ್, ವಿವಿಧ ಗ್ರಾಮಪಂಚಾಯತಿಗಳ ಅಧ್ಯಕ್ಷರಾದ ಶಾಹುಲ್ ಹಮೀದ್ ಬಂದ್ಯೋಡು(ಮಂಗಲ್ಪಾಡಿ),ಷಂಶಾದ್ ಶುಕೂರ್(ಮೀಂಜ), ಎ.ಅಬ್ದುಲ್ ಮಜೀದ್(ವರ್ಕಾಡಿ), ವೈದ್ಯಕೀಯ ವರಿಷ್ಠಾಧಿಕಾರಿ ಇ.ವಿ.ಚಂದ್ರಮೋಹನ್, ಬ್ಲಾಕ್ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಮಹಮ್ಮದ್ ಮುಸ್ತಫ, ಬ್ಲಾಕ್ ಪಂಚಾಯತಿ ಸದಸ್ಯ ಪ್ರಸಾದ್ ರೈ ಕಯ್ಯಾರು, ಸಾಯಿರಾ ಬಾನು, ಬ್ಲಾಕ್ ಪಂಚಾಯತಿ ಕಾರ್ಯದರ್ಶಿ ಎನ್.ಸುರೇಂದ್ರನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


