ಕುಂಬಳೆ: ದೇಶದಲ್ಲಿ ಅನೇಕ ಮಂದಿ ನಾಡಿಗಾಗಿ ತಮ್ಮನ್ನು ಸಮರ್ಪಿಸಿಕೊಂಡವರು ಇದ್ದಾರೆ. ಈ ಮೂಲಕ ನಾಡಿನ ಅಭಿವೃದ್ಧಿ ಮಾಡಿ ಅಥವಾ ಕೊಡುಗೆಗಳನ್ನು ಸಲ್ಲಿಸಿ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ ತನಗೆ ಸ್ವಲ್ಪ , ಸಮಾಜಕ್ಕೆ ಸರ್ವಸ್ವ ಎಂದು ತಿಳಿದವರೂ ಇದ್ದಾರೆ. ಅಂತಹವರಲ್ಲಿ ಉಪ್ಪಳದ ಜನಪ್ರಿಯ ವೈದ್ಯರಾದ ಡಾ.ಎಂ.ಶ್ರೀಧರ ಭಟ್ ಉಪ್ಪಳ ಮೊದಲಿಗರು ಎಂದು ಕುಂಬಳೆ ಶೇಡಿಕಾವು ಶಂಕರಪುರಂ ಶ್ರೀಕೃಷ್ಣ ವಿದ್ಯಾಲಯದ ಶಿಕ್ಷಣ ಸಮಿತಿಯ ಅಧ್ಯಕ್ಷ , ಸಾಹಿತಿ ವಿ.ಬಿ.ಕುಳಮರ್ವ ಹೇಳಿದರು.
ಶ್ರೀಕೃಷ್ಣ ವಿದ್ಯಾಲಯದಲ್ಲಿ ಅಷ್ಟಮಿ ಕಾರ್ಯಕ್ರಮದ ಅಂಗವಾಗಿ ಡಾ.ಎಂ.ಶ್ರೀಧರ ಭಟ್ ಉಪ್ಪಳ ಅವರನ್ನು ಗೌರವಿಸುವ ಸಂದರ್ಭದಲ್ಲಿ ಅವರು ಮಾತನಾಡಿದರು.
ತನ್ನ ವೈದ್ಯಕೀಯ ವೃತ್ತಿಯಲ್ಲಿ ಎಷ್ಟೋ ಹಣ ಗಳಿಸಬಹುದಾಗಿದ್ದರೂ, ಅದನ್ನೆಲ್ಲ ಮನಸ್ಸಲ್ಲೂ ಯೋಚಿಸದೆ ಮಾನವೀಯತೆಯಿಂದ ವೈದ್ಯಕೀಯ ವೃತ್ತಿ ನಡೆಸಿದವರು ಶ್ರೀಧರ ಭಟ್ ಅವರು. ಈ ಮೂಲಕ ಸಮಾಜ ಸೇವೆ ಏನೆಂಬುದಕ್ಕೆ ಹೊಸ ವ್ಯಾಖ್ಯಾನ ಬರೆದಿದ್ದಾರೆ ಎಂದು ವಿ.ಬಿ.ಕುಳಮರ್ವ ನುಡಿದರು.
ಶ್ರೀಕೃಷ್ಣ ವಿದ್ಯಾಲಯದಲ್ಲಿ ಆರಂಭದಿಂದಲೇ ಅಧ್ಯಕ್ಷರಾಗಿದ್ದುಕೊಂಡು ವಿದ್ಯಾಲಯದ ಸರ್ವತೋಮುಖ ಬೆಳವಣಿಗೆಗೆ ಸಹಕರಿಸುತ್ತಿದ್ದಾರೆ. ವಿದ್ಯಾಭ್ಯಾಸ, ಆರೋಗ್ಯ, ಧಾರ್ಮಿಕ, ಸಾಮಾಜಿಕ, ಸಾಂಸ್ಕøತಿಕ ಮುಂತಾದ ಎಲ್ಲ ವಲಯಗಳಲ್ಲೂ ಶ್ರೀಧರ ಭಟ್ ಅವರು ಅದ್ವಿತೀಯ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ಶಾಲಾ ಸಂಚಾಲಕ ಶೇಂತಾರು ನಾರಾಯಣ ಭಟ್, ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಶುಭಹಾರೈಸಿದರು. ಶಾಲಾ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ ನಡೆಯಿತು. ಬಳಿಕ ಬಹುಮಾನಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ನಿವೃತ್ತ ಡಿಇಒ ಲಲಿತಾಲಕ್ಷ್ಮಿ ಕುಳಮರ್ವ, ಶಾಲಾ ಮುಖ್ಯೋಪಾಧ್ಯಾಯಿನಿ ಶಕುಂತಳಾ ಕಡಮಣ್ಣಾಯ, ಲಲಿತಾ ಕೆ.ಅಡಿಗ, ವೇಣುಗೋಪಾಲ ಶೆಟ್ಟಿ ಪುತ್ತಿಗೆ ಉಪಸ್ಥಿತರಿದ್ದರು. ಗಾಯತ್ರಿ ಮಾತಾಶ್ರೀ ಸ್ವಾಗತಿಸಿ, ಅಶ್ವಿನಿ ಮಾತಾಶ್ರೀ ವಂದಿಸಿದರು. ಶ್ವೇತಾ ಮಾತಾಶ್ರೀ ಕಾರ್ಯಕ್ರಮ ನಿರೂಪಿಸಿದರು.


