ಬದಿಯಡ್ಕ: ಗೋಸಾಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀ ಮಹಿಷಮರ್ದಿನಿ ಭಜನ ಸಂಘ ಇದರ ವತಿಯಿಂದ ಜರುಗುತ್ತಿರುವ ರಾಮಾಯಣ ಪಾರಾಯಣ ಸಪ್ತಾಹದ ಸಮಾರೋಪ ಸಮಾರಂಭವು ಜರಗಿತು. ಭಜನ ಸಂಘದ ಉಪಾಧ್ಯಕ್ಷ ಪುರುಷೋತ್ತಮ ಆಚಾರ್ಯ ಗೋಸಾಡ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾಸರಗೋಡಿನ ಉದ್ಯಮಿ ಅಭಿಲಾಷ್ ಎಂ. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯ ಜನರು ರಾಮಾಯಣ ಪ್ರವಚನವನ್ನು ಆಲಿಸುತ್ತಿರುವುದು ಶ್ಲಾಘನೀಯ. ಧಾರ್ಮಿಕ ಆಚರಣೆಗಳಿಂದ ಊರು ಅಭಿವೃದ್ಧಿಯತ್ತ ಸಾಗುವುದು ಎಂದು ತಿಳಿಸಿದರು.
ಶ್ರೀ ಮಹಿಷಮರ್ದಿನಿ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕುದ್ಕಾಡಿ ನಾರಾಯಣ ರೈ, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಎಂ. ಸಂಜೀವ ಶೆಟ್ಟಿ ಮೊಟ್ಟೆಕುಂಜ, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಶಂಕರನಾರಾಯಣ ಮಯ್ಯ ಬದಿಯಡ್ಕ, ಕ್ಷೇತ್ರದ ಆನುವಂಶಿಕ ಮೊಕ್ತೇಸರ ಕೃಷ್ಣ ಅಮ್ಮಣ್ಣಾಯ ಪಾವೂರು, ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ. ಸುಧಾಮ ಗೋಸಾಡ, ಸಮಾರೋಪ ಸಮಾರಂಭ ಪ್ರವಚನವನ್ನು ನಡೆಸಿಕೊಟ್ಟ ಪ್ರಸಿದ್ಧ ಯಕ್ಷಗಾನ ಕಲಾವಿದ ಮವ್ವಾರು ಬಾಲಕೃಷ್ಣ ಮಣಿಯಣಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮರಿಕ್ಕಾನ ಕಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಗಂಗಾಧರ ರೈ ಮಠದಮೂಲೆ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ರಾಮಾಯಣ ಪ್ರವಚನಗೈದ ಊರ ಬಾಲ ಪ್ರತಿಭೆಗಳಾದ ಗೌರೀಶ ಗೋಸಾಡ ಮತ್ತು ಪ್ರಶಾಂತಿ ಗೋಸಾಡ, ಬಿ ಫಾರ್ಮ್ ರ್ಯಾಂಕ್ ವಿಜೇತೆ ವಾಕ್ಯ ಶೆಟ್ಟಿ, ಕರ್ನಾಟಕ ರಾಜ್ಯಮಟ್ಟದ ರಾಮಾಯಣ ಪರೀಕ್ಷೆಯಲ್ಲಿ ಚಿನ್ನದ ಪದಕ ವಿಜೇತೆ ಶಕೀಲಾ ರೈ, ಕಳೆದ ಸಾಲಿನ ಪ್ಲಸ್ ಟು ಪರೀಕ್ಷೆಯಲ್ಲಿ ಎಲ್ಲ ವಿಭಾಗದಲ್ಲಿ ಎ ಪ್ಲಸ್ ಪಡೆದ ವಿದ್ಯಾರ್ಥಿನಿ ಅಪೂರ್ವ ಗೋಸಾಡ ಇವರನ್ನು ಗರುತಿಸಿ ಗೌರವಿಸಲಾಯಿತು. ಭಜನಾ ಸಂಘದ ಮಾಜಿ ಅಧ್ಯಕ್ಷ ನಾರಾಯಣ ಗೋಸಾಡ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸತೀಶ್ ರೈ ಗೋಸಾಡ ವಂದಿಸಿದರು. ಕ್ಷೇತ್ರದ ಸೇವಾ ಸಮಿತಿಯ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ ಕಾರ್ಯಕ್ರಮವನ್ನು ನಿರೂಪಿಸಿದರು.


