ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮವಿಠಲ ದೇಗುಲದಲ್ಲಿ ಹಾಗೂ ನಾಗಬನ ಸನ್ನಿಧಿಯಲ್ಲಿ ವಿಶೇಷ ತನು ಸೇವಾ ಆರಾಧನೆ ಮೂಲಕ ಶ್ರದ್ಧಾ ಭಕ್ತಿಯಿಂದ ನಾಗರ ಪಂಚಮಿ ಪರ್ವವನ್ನು ಆಚರಿಸಲಾಯಿತು.
ನಾಗರ ಪಂಚಮಿ ಪರ್ವದ ಕಾರ್ಯಕ್ರಮಗಳ ಅಂಗವಾಗಿ ಉಷ:ಕಾಲ ಪೂಜಾ ನಂತರ ಶ್ರೀ ಕ್ಷೇತ್ರದ ಮೊಕ್ತೇಸರರಾದ ವಾಸುದೇವ ಭಟ್ ಮತ್ತು ಶಿವರಾಜ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಸೇವೆಗಳು ನೆರವೇರಿತು. ಸೊಂಟದಲ್ಲಿ ನಾಗನನ್ನು ಸುತ್ತಿಕೊಂಡಿರುವ ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ವಿಶೇಷ ಸೇವೆಯನ್ನು ಸಲ್ಲಿಸಿ, ಶೇಷ ಶಯನನಾದ ವಿಷ್ಣು, ಶ್ರೀ ರಾಮನ ಸನ್ನಿಧಿಯಲ್ಲಿ ವಿಶೇಷ ಸೇವೆಯನ್ನು ಒಪ್ಪಿಸಿ, ಶ್ರೀ ಸದಾಶಿವ ದೇವರ ಸನ್ನಿಧಿಯಲ್ಲಿ ನಾಗಭೂಷಣನಿಗೆ ಪ್ರಿತ್ಯರ್ಥವಾಗಿ, ಪಂಚಾಮೃತಾಭಿಷೇಕ, ರುದ್ರಾಭಿಷೇಕಗಳನ್ನು ಮಾಡಿ ರಜತ ನಾಗ ಸ್ವರ್ಣನಾಗಗಳೊಂದಿಗೆ ಅಲಂಕರಿಸಿ ಆರಾಧಿಸಿ ವಿಶೇಷ ರೀತಿಯ ಸೇವೆಯನ್ನು ಮಾಡಲಾಯಿತು.
ಶ್ರೀ ನಾಗರಾಜನಿಗೆ 'ತನು'ವಿನಿಂದ ಧಾರೆ ಎರೆಯಲಾಯಿತು. ಬಳಿಕ ಪಂಚಾಮೃತಾಭಿಷೇಕದ ಸಲುವಾಗಿ ಘೃತ, ಮಧು, ಶರ್ಕರ ಫಲಾಭಿಷೇಕಗಳೊಂದಿಗೆ ಅಭಿಷೇಕವನ್ನು ಮಾಡಲಾಯಿತು. ಶ್ರೀಗಂಧ, ಪುಷ್ಪ ಹಾಗೂ ನಾಳಿಕೇರ ಜಲಧಾರೆಯೊಂದಿಗೆ ನಾಗನನ್ನು ಪೂಜಿಸಲಾಯಿತು. ಸ್ವಸ್ತಿಕ ಮಧ್ಯೆ ಶಿಲಾ ಪ್ರಥ್ವಿ ಮಧ್ಯೆ ನಾಗನನ್ನು ಆರಾಧಿಸಿ ಶ್ರೀಗಂಧ, ಅಕ್ಷತೆ, ಪುಷ್ಪ ದೀಪ, ಧೂಪ, ಪನಿವಾರ ನೈವೇದ್ಯವನ್ನು ಸಮರ್ಪಿಸಿ ಮಹಾ ಮಂಗಳಾರಾತಿಯನ್ನು ನೆರವೇರಿಸಿ ಪ್ರಸನ್ನ ಕಾಲದಲ್ಲಿ ಸಾಮೂಹಿಕವಾಗಿ ನಾಗರಾಜನನ್ನು ಪ್ರಾರ್ಥಿಸಿ ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ ಭಕ್ತಾಗಳು ಧನ್ಯತೆಯನ್ನು ಪಡೆದರು.


