ಬದಿಯಡ್ಕ : ಆಟಿ ತಿಂಗಳು ಕಷ್ಟದ ಕಾಲವಾಗಿದ್ದರೂ ಅನೇಕ ಔಷಧೀಯ ಸಸ್ಯಗಳು ಚಿಗುರೊಡೆಯುವ ಕಾಲವಾಗಿದೆ. ನಮ್ಮ ದೈನಂದಿನ ಆಹಾರದಲ್ಲಿ ಲಭಿಸದ ಅದೆಷ್ಟೋ ಪೋಷಕಾಂಶಯುಕ್ತ ಆಹಾರ ಪದಾರ್ಥಗಳು ಈ ತಿಂಗಳಲ್ಲಿ ನಮಗೆ ಲಭಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಔಷಧೀಯ ಗುಣಯುಕ್ತ ಆಹಾರದ ಸೇವನೆಯಿಂದ ಆರೋಗ್ಯಪೂರ್ಣ ಬದುಕು ನಮ್ಮದಾಗಬೇಕು ಎಂದು ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಹೇಳಿದರು.
ಬುಧವಾರ ಬದಿಯಡ್ಕ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ಕುಟುಂಬಶ್ರೀ ಸಿಡಿಎಸ್ ಆಶ್ರಯದಲ್ಲಿ ನಡೆದ `ಆಟಿಗಂಜಿ' ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಕೃತಿಕವಾಗಿ ಲಭಿಸುವ ಅದೆಷ್ಟೋ ಉತ್ಪನ್ನಗಳು ಇಂದು ಕಣ್ಮರೆಯಾಗದಂತೆ ಅದನ್ನು ಮುಂದಿನ ಜನಾಂಗ ಅರಿಯುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು. ಹಿರಿಯರ ಕಾಲದ ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಹೋಗಬೇಕಾದ ಹೊಣೆಯನ್ನು ನಾವು ನಿಭಾಯಿಸಬೇಕು ಎಂದರು.
ಗ್ರಾಮಪಂಚಾಯಿತಿ ಕಾರ್ಯದರ್ಶಿ ಎಂ.ಪ್ರದೀಪ್ ಪ್ರಾಸ್ತಾವಿಕ ಮಾತುಗಳನ್ನಾಡಿ ಪ್ರಕೃತಿಯ ಅಪೂರ್ವವಾದ ಸಂಪತ್ತುಗಳನ್ನು ನಾವು ಬಳಸಿಕೊಂಡು ಆರೋಗ್ಯಪೂರ್ಣವಾದ ಬದುಕನ್ನು ಸಾಗಿಸಬೇಕು. ಮಹಿಳೆಯರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ನಮ್ಮ ಮನೆಯ, ಮಕ್ಕಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಸುತ್ತಾ ಆಟಿ ತಿಂಗಳಿನ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಕುಟುಂಬಶ್ರೀ ಸಿಡಿಎಸ್ ಸಂಚಾಲಕಿ ಮಾಜಿ ಗ್ರಾ.ಪಂ.ಅಧ್ಯಕ್ಷೆ ಸುಧಾ ಜಯರಾಂ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಥಾಯಿಸಮಿತಿ ಅಧ್ಯಕ್ಷರುಗಳಾದ ಅನ್ವರ್ ಓಸೋನ್, ಶ್ಯಾಮಪ್ರಸಾದ ಮಾನ್ಯ, ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕಡಾರು, ವಿಶ್ವನಾಥ ಪ್ರಭು ಕರಿಂಬಿಲ, ಮುಹಮ್ಮದ್ ಸಿರಾಜ್, ಜಯಶ್ರೀ, ಪ್ರಸನ್ನ, ಅನಿತಾಕ್ರಾಸ್ತಾ ಶುಭಾಶಂಸನೆಗೈದರು. ಕುಟುಂಬಶ್ರೀ ಸಿಡಿಎಸ್ ಕಾರ್ಯಕರ್ತೆಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಆಟಿಗಂಜಿಯನ್ನ ಸೇವಿಸಿದರು. ವಿವಿಧ ಜಾತಿಯ ಔಷಧೀಯ ಗಿಡಗಳನ್ನು ಪ್ರದರ್ಶಿಸಲಾಯಿತು.

