ಕಾಸರಗೋಡು: ಮಂಗಳವಾರ ರಾತ್ರಿ ಅಗಲಿದ ಕೇಂದ್ರದ ಮಾಜಿ ಸಚಿವೆ, ಬಿಜೆಪಿಯ ಹಿರಿಯ ನಾಯಕಿ, ಶ್ರೇಷ್ಠ ರಾಜಕಾರಣಿ ಸುಷ್ಮಾ ಸ್ವರಾಜ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಸರ್ವಪಕ್ಷ ಸಂತಾಪ ಸೂಚಕ ಸಭೆಯು ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪವಿರುವ ಕ್ಯಾಪಿಟಲ್ ಇನ್ ಸಭಾಂಗಣದಲ್ಲಿ ಜರಗಿತು.
ಬಿಜೆಪಿ ಜಿಲ್ಲಾಧ್ಯಕ್ಷ, ನ್ಯಾಯವಾದಿ ಕೆ.ಶ್ರೀಕಾಂತ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತಿ, ಮತ, ಧರ್ಮ, ರಾಜಕೀಯ ಮುಂತಾದ ಯಾವುದೇ ಭೇದಭಾವ ತೋರಿಸದೆ ಎಲ್ಲ ವರ್ಗದ ಹಾಗೂ ಸಮುದಾಯದ ಜನರನ್ನು ಸುಷ್ಮಾ ಸ್ವರಾಜ್ ಅವರು ಸಮಾನತೆಯಿಂದ ಹಾಗೂ ಗೌರವದಿಂದ ಕಾಣುತ್ತಿದ್ದರು ಎಂದರು.
ನಮ್ಮ ದೇಶದ ವಿದೇಶಾಂಗ ಸಚಿವರಾಗಿದ್ದ ಅವರು ಸಕಲ ಕ್ಷೇತ್ರಗಳಲ್ಲಿಯೂ ಯಶಸ್ವಿಯನ್ನು ಕಂಡಿದ್ದರು. ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅವರು ಕೈಗೊಂಡ ಮಾನವೀಯ ನಿರ್ಧಾರಗಳು ಪ್ರಾತ:ಸ್ಮರಣೀಯವಾದುದು ಎಂದು ಕೆ.ಶ್ರೀಕಾಂತ್ ಹೇಳಿದರು. ಸುಷ್ಮಾಜೀಯವರ ಅಗಲುವಿಗೆ ಬಿಜೆಪಿಗೆ ಮಾತ್ರವಲ್ಲದೆ ಇಡೀ ರಾಷ್ಟ್ರಕ್ಕೇ ತುಂಬಲಾರದ ನಷ್ಟ ತಂದೊಡ್ಡಿದೆ ಎಂದು ಪಕ್ಷದ ಜಿಲಾಧ್ಯಕ್ಷರು ಕಂಬನಿ ಮಿಡಿದರು.
ಸುಷ್ಮಾಜೀ ಅವರು ಕಾಸರಗೋಡು ಜಿಲ್ಲೆಯೊಂದಿಗೂ ಅಪಾರ ನಂಟು ಹೊಂದಿದ್ದರು. ಇಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾಗವಹಿಸಿದ್ದರು. ಪೆರ್ಲದಲ್ಲಿ ಜರಗಿದ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಂಡು ಅವರು ಉತ್ತಮ ಭಾಷಣ ಮಾಡಿ ಜನರ ಮನಸ್ಸು ಗೆದ್ದಿದ್ದರು. ಅಟಲ್ ಬಿಹಾರಿ ವಾಜಪೇಯಿ ಸರಕಾರ ಹಾಗೂ ನರೇಂದ್ರ ಮೋದಿ ಸರಕಾರಗಳಲ್ಲಿ ಸಚಿವೆಯಾಗಿದ್ದುಕೊಂಡು ಇಡೀ ಜಗತ್ತು ಮೆಚ್ಚುಗೆ ಕೆಲಸಗಳನ್ನು ಮಾಡಿದ್ದಾರೆ. ಅವರ ನಿಧನವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಸೇವೆ ಭಾರತಕ್ಕೆ ಇನ್ನೂ ಬೇಕಾಗಿತ್ತು. ಅಂತಹ ಪುಣ್ಯ ನಾಯಕಿಯ ಕಾರ್ಯಗಳನ್ನು ಹಾಗೂ ಆದರ್ಶ ಗುಣಗಳನ್ನು ನಾವು ರೂಢಿಸಿಕೊಳ್ಳೋಣ ಎಂದು ಕೆ.ಶ್ರೀಕಾಂತ್ ಆಶಿಸಿದರು.
ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಮಾತನಾಡಿ, ಬಡವರ್ಗದ ಜನರ ಬಗ್ಗೆ ಅವರಿಗೆ ಹೆಚ್ಚಿನ ಕಾಳಜಿ ಇತ್ತು. ಜನರು ತಮ್ಮ ಸಮಸ್ಯೆಗಳನ್ನು ಹೇಳಲು ತನ್ನಲ್ಲಿಗೆ ಬಂದರೆ ಅವರು ನಗುಮುಖದಿಂದಲೇ ಸ್ವಾಗತಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತಿದ್ದರು. ಇದು ಸುಷ್ಮಾ ಸ್ವರಾಜ್ ಅವರ ವೈಶಿಷ್ಟ್ಯವಾಗಿದೆ ಎಂದು ನುಡಿದರು. ವಿದೇಶಾಂಗ ಸಚಿವೆಯಾಗಿದ್ದ ಅವರು, ವಿದೇಶಗಳಲ್ಲಿ ದುಡಿಯುತ್ತಿರುವ ಕೇರಳೀಯರ ಅನೇಕ ಸಮಸ್ಯೆಗಳಿಗೆ ತುರ್ತು ಪರಿಹಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿ ಪ್ರಪಂಚವೇ ಕೊಂಡಾಡುವ ಕೆಲಸ ಮಾಡಿದ್ದಾರೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾಸರಗೋಡು ನಗರ ಸಂಘಚಾಲಕ್ ಕೆ.ಟಿ.ಕಾಮತ್ ಮಾತನಾಡಿ, ಅನಿವಾಸಿ ಭಾರತೀಯರು ಸಹಿತ ಯಾವುದೇ ವರ್ಗದ ಜನರ ಸಂಕಷ್ಟಗಳನ್ನು ತಾಳ್ಮೆಯಿಂದ ಆಲಿಸಿ ಅಷ್ಟೇ ಶೀಘ್ರವಾಗಿ ಪರಿಹಾರ ಒದಗಿಸುತ್ತಿದ್ದರು. ಸುಷ್ಮಾ ಸ್ವರಾಜ್ ಅವರ ನಿಧನವು ಭಾರತ ಸಹಿತ ಇಡೀ ವಿಶ್ವಕ್ಕೇ ಆಘಾತ ತಂದಿದೆ ಎಂದು ತಿಳಿಸಿದರು.
ವಿವಿಧ ರಾಜಕೀಯ ಪಕ್ಷಗಳ ನೇತಾರರಾದ ಎ.ಅಬ್ದುಲ್ ರಹಿಮಾನ್ (ಮುಸ್ಲಿಂಲೀಗ್), ಅಸೀಸ್ ಕಡಪ್ಪುರಂ (ಐಎನ್‍ಎಲ್), ಎಂ.ಕುಂಞಂಬು ನಂಬ್ಯಾರ್ (ಕಾಂಗ್ರೆಸ್), ಮ್ಯಾನ್ಯುವಲ್ ಸಿ.ಕಾಪ್ಪನ್ (ಕೇರಳ ಕಾಂಗ್ರೆಸ್ ಪಿ.ಸಿ.ಥೋಮಸ್ ಗ್ರೂಪ್), ನ್ಯಾಯವಾದಿ ಬಿ.ಸುರೇಶ್‍ಬಾಬು (ಸಿಪಿಐ) ಮುಂತಾದವರು ಮಾತನಾಡಿದರು.
ಬಿಜೆಪಿ ಕೇರಳ ರಾಜ್ಯ ಸಮಿತಿಯ ಸದಸ್ಯರಾದ ಸುರೇಶ್‍ಕುಮಾರ್ ಶೆಟ್ಟಿ ಪೂಕಟ್ಟೆ, ರವೀಶ ತಂತ್ರಿ ಕುಂಟಾರು, ಮುಖಂಡರಾದ ನ್ಯಾಯವಾದಿ ಎ.ಸದಾನಂದ ರೈ, ಜಿ.ಚಂದ್ರನ್, ಎ.ವೇಲಾಯುಧನ್, ಎನ್.ಸತೀಶ್ ಮುಂತಾದವರು ಉಪಸ್ಥಿತರಿದ್ದರು.

