ಉಪ್ಪಳ: ತೌಳವ ಸಾಂಸ್ಕøತಿಕ, ಜನಪದೀಯ ನೆಲೆಗಟ್ಟಿನ ಬೇರುಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ರಿಯಾತ್ಮಕ ಚಟುವಟಿಕೆಗಳು ಆಯೋಜನೆಗೊಳ್ಳಬೇಕು. ಕೃಷಿ ಸಂಸ್ಕøತಿಯೊಂದಿಗೆ ಮಿಳಿತಗೊಂಡಿರುವ ತುಳುನಾಡು ಮತ್ತೆ ತನ್ನ ಬಹುವಿಧ ಶ್ರೀಮಂತಿಕೆಯನ್ನು ಪಡೆಯುವಲ್ಲಿ ಮಣ್ಣಿನ ವಾಸನೆ ಬಲಪಡಿಸುವ ನೆಲದ ಸಂಸ್ಕøತಿ ವ್ಯಾಪಕಗೊಳ್ಳಬೇಕು ಎಂದು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ಅವರು ತಿಳಿಸಿದರು.
ಪೈವಳಿಕೆ ಸಮೀಪದ ಜೋಡುಕಲ್ಲಿನ ಫ್ರೆಂಡ್ಸ್ ಕ್ಲಬ್ ಹಾಗೂ ಜೋಡುಕಲ್ಲು ಸೊಂದಿ ಶ್ರೀದುರ್ಗಾಲಯ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಜೋಡುಕಲ್ಲಿನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದು ಪರಂಪರೆಯ ಮೆಲುಕುಗಳಿಗೆ ವಾರ್ಷಿಕವಾಗಿ ದಿನವೊಂದನ್ನು ಆಯ್ಕೆಗೊಳಿಸಿ ವಿವಿಧ ದಿನಾಚರಣೆಗಳನ್ನು ಸಾಂಕೇತಿಕವಾಗಿ ಆಚರಿಸಲಾಗುತ್ತಿದೆ. ಆದರೆ ಇಂತಹ ಆಚರಣೆಗಳಿಂದ ಪ್ರೇರಣೆ ಪಡೆದು ಪ್ರತಿದಿನವೂ ಅಂತಹ ಪರಂಪರೆಯ ಮೆಲುಕುಗಳೊಂದಿಗೆ ಸಾಧ್ಯವಾದಷ್ಟು ಅನುಸರಣೆಗೆ ಮುಂದಾಗುವ ಅಗತ್ಯ ಇದೆ ಎಂದು ಅವರು ಕರೆನೀಡಿದರು. ಸಾಮಾಜಿಕ ಸ್ವಾಥ್ಯ, ಪ್ರಬುದ್ದ ನಾಗರಿಕ ಸಮಾಜ ಮತ್ತು ಸಾಗಿಬಂದ ಪರಂಪರೆಯ ಅರಿವುಗಳು ಸ್ಥಿರ ನೆಮ್ಮದಿಗೆ ಕಾರಣವಾಗುತ್ತದೆ. ಸ್ಥಳೀಯ ಸಂಘಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹೊಸ ತಲೆಮಾರಿಗೆ ಭವ್ಯ ಬದುಕು ರೂಪಣೆಗೆ ನೆರವಾಗಬೇಕು. ಈ ನಿಟ್ಟಿನಲ್ಲಿ ಜೋಡುಕಲ್ಲಿನ ನಾಗರಿಕರು ಆಯೋಜಿಸಿರುವ ಅಪೂರ್ವ ಕಾರ್ಯಕ್ರಮ ಮಾದರಿ ಮತ್ತು ಸ್ತುತ್ಯರ್ಹವಾದುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷ ಭಾರತೀ ಜೆ.ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೃಷಿ ಸಂಸ್ಕøತಿಯನ್ನು ಪ್ರೇರೇಪಿಸುವ ಆಚರಣೆಗಳು ಹಳ್ಳಿಗಳಿಂದಾಚೆ ನಗರಗಳಿಗೂ ವಿಸ್ತರಿಸಲ್ಪಡಲಿ ಎಂದು ತಿಳಿಸಿದರು. ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಪೈವಳಿಕೆ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಫಾತಿಮತ್ ಝೌರಾ, ಖ್ಯಾತ ರಂಗನಟ ಹಾಗೂ ಚಲನಚಿತ್ರ ನಟ ಸುಂದರ ರೈ ಮಂದಾರ, ಸೇವಾ ಭಾರತಿ ಜೋಡುಕಲ್ಲಿನ ಅಧ್ಯಕ್ಷ ಶ್ರೀರಾಮ ಮೂಡಿತ್ತಾಯ ಪಾಂಡ್ಯಡ್ಕ, ಸೊಂದಿ ಶ್ರೀದುರ್ಗಾಲಯ ಟ್ರಸ್ಟ್ನ ಶಿವ ಶರ್ಮ ಸೊಂದಿ, ಪ್ರಗತಿಪರ ಕೃಷಿಕ ಮಹಾಬಲ ಶೆಟ್ಟಿ ಗುಂಡಿಬೈಲು, ನಿವೃತ್ತ ಅಧ್ಯಾಪಕ ಮೀನಾರು ವಿಶ್ವನಾಥ ಆಳ್ವ, ಕಜೆ ಶ್ರೀಜನಾರ್ಧನ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಭಾಕರ ಆಳ್ವ ಪಿಲಿಯಂದೂರು, ಅಂಬಾರು ಶ್ರೀಸದಾಶಿವ ದೇವಸ್ಥಾನದ ಆಡಳಿತ ಮೊಕ್ತೇಸರ ಕೃಷ್ಣಪ್ಪ ಪೂಜಾರಿ ದೇರಂಬಳ, ಮಂಗಲ್ಪಾಡಿ ಗ್ರಾ.ಪಂ. ಸದಸ್ಯ ಉಮೇಶ್ ಶೆಟ್ಟಿ, ಮೀಂಜ ಗ್ರಾಮ ಪಂಚಾಯತಿ ಸದಸ್ಯೆ ಶಾಲಿನಿ ಬಿ.ಶೆಟ್ಟಿ, ಪೈವಳಿಕೆ ಗ್ರಾಮ ಪಂಚಾಯತಿ ಕುಟುಂಬಶ್ರೀ ಸಿಡಿಎಸ್ ಉಪಾಧ್ಯಕ್ಷೆ ಶಶಿಕಲಾ ಚೇವಾರು ಉಪಸ್ಥಿತರಿದ್ದು ಶುಭಹಾರೈಸಿದರು. ಸುರೇಶ್ ಶೆಟ್ಟಿ ಜೋಡುಕಲ್ಲು ಸ್ವಾಗತಿಸಿ, ವಂದಿಸಿದರು.ದೇವೀಪ್ರಸಾದ್ ಶೆಟ್ಟಿ ಬೆಜ್ಜ ಕಾರ್ಯಕ್ರಮ ನಿರೂಪಿಸಿದರು. ಹಾಳೆ ಎಳೆಯುವುದು, ಮಡಿಕೆ ಒಡೆಯುವುದು, ಹಿಂದಕ್ಕೆ ಸಚರಿಸುವ ಓಟ, ಕಣ್ಣಿಗೆ ಬಟ್ಟೆ ಕಟ್ಟಿ ಓಟ, ಉಪ್ಪುಗೋಣಿ ಚೀಲ ಓಟ, ರಿಲೆ, ಮೂರು ಕಾಲಿನ ಓಟ, ಸೊಂಟದಲ್ಲಿ ನೀರು ತುಂಬಿದ ಕೊಡಪಾನದೊಂದಿಗೆ ಓಟ, ಬಾಲ್ ಎಸೆಯುವಿಕೆ,ಕಬ್ಬಡ್ಡಿ, ಗೋಪುರ ನಿರ್ಮಾಣ, ಹಗ್ಗಜಗ್ಗಾಟ ಮೊದಲಾದ ಗ್ರಾಮೀಣ ಆಟೋಟ ಸ್ಪರ್ಧೆಗಳು ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಆಯೋಜಿಸಲಾಗಿತ್ತು.ನೂರಾರು ಜನರು ಆಸಕ್ತಿಯಿಂದ ಪಾಲ್ಗೊಂಡರು.ಸಂಜೆ ಸಮಾರೋಪ ಸಮಾರಂಭ ನಡೆಯಿತು.



