ಮಂಜೇಶ್ವರ: ಬದುಕಿನ ವೃತ್ತಾಂತಗಳಲ್ಲಿ ಕಷ್ಟ-ಸುಖಗಳು ಎರಡು ವಿಭಿನ್ನ ಮುಖಗಳು. ವರ್ತಮಾನದಲ್ಲಿ ನಾವು ಈ ಎರಡು ಸಂದರ್ಭದಲ್ಲಿ ಸ್ಪಂದಿಸುವ ಸಹೃದಯಿಗಳಾಗಬೇಕು. ಅಂತಹ ಹೃದಯವಂತಿಕೆಯಿಂದ ಮಾತ್ರ ಕರುಣೆಯ ಜ್ಯೋತಿ ಬೆಳಗಲು ಸಾಧ್ಯ. ಈ ರೀತಿಯ ಮನೋಭಾವದ ಸಮಾನ ಮನಸ್ಕರು ಸಂಘಟನೆಯನ್ನು ಕಟ್ಟಿಕೊಂಡು ಉಳ್ಳವರಿಂದ ಸಂಗ್ರಹಿಸಿ ಇಲ್ಲದವರ ಕಡೆ ಸಹಾಯಹಸ್ತ ಚಾಚುವ ಯೋಜನೆ ನಿಜವಾಗಿಯೂ ದೇವಿಯ ಪ್ರೀತಾಥ್ರ್ಯ ಸೇವೆಯೆಂದು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಅವರು ನುಡಿದರು.
ಅವರು ಸೋಮವಾರ ಸಂಜೆ ಕ್ಷೇತ್ರದ ಸಾನಿಧ್ಯದಲ್ಲಿ ಶ್ರೀ ಕಟೀಲೇಶ್ವರೀ ಚ್ಯಾರಿಟೇಬಲ್ ಟ್ರಸ್ಟ್ ಮಂಜೇಶ್ವರ ಇದರ ವತಿಯಿಂದ ಉದ್ಯಾವರ ಮಾಡ ನಿವಾಸಿ ದಿ. ಚನಿಯಪ್ಪ, ದಿ. ಮೋಹಿನಿ ದಂಪತಿಯ ಪುತ್ರಿ ಅಶ್ವಿತ ಅವರ ವಿವಾಹ ಕಾರ್ಯಕ್ಕೆ ಟ್ರಸ್ಟ್‍ನ ಸದಸ್ಯರಿಂದಲೇ ಸಂಗ್ರಹಿಸಿದ ಮೊತ್ತವನ್ನು ದೇವರ ಸಾನಿಧ್ಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಶ್ರೀ ದೇವಿಯ ಪಟ್ಟೆ ಸೀರೆ ಸಹಿತ ನೀಡಿ ಶುಭ ಹಾರೈಸಿದರು.
ಕಟೀಲು ತಾಯಿಯ ಅಭಯದ ಪ್ರಸಾದಗಳೊಂದಿಗೆ ತಮ್ಮ ಮೊದಲ ಯೋಜನೆಯನ್ನು ಅಬಲೆಯೊಬ್ಬಳ ವೈವಾಹಿಕ ಜೀವನದೆಡೆ ಚಾಚುವ ಮೂಲಕ ಈ ಸೇವಾ ಯೋಜನೆ ಆರಂಭಿಸಿರುವುದು ಮಂಗಳದಾಯಕವೆಂದು ಶುಭಾಶೀರ್ವಚನ ನೀಡಿದರು.
ಈ ಸಂದರ್ಭ ಶ್ರೀ ಕಟೀಲೇಶ್ವರೀ ಚ್ಯಾರಿಟೇಬಲ್ ಟ್ರಸ್ಟ್‍ನ ಪಧಾಧಿಕಾರಿಗಳಾದ ಗೌರವಾಧ್ಯಕ್ಷ ಕೃಷ್ಣ ಶಿವಾಕೃಪಾ ಕುಂಜತ್ತೂರು, ಅಧ್ಯಕ್ಷ ರತನ್ ಕುಮಾರ್ ಹೊಸಂಗಡಿ, ಕೋಶಾಧಿಕಾರಿ ರವಿ ಮುಡಿಮಾರ್, ಸದಸ್ಯರಾದ ಜಯರಾಜ್ ಶೆಟ್ಟಿ ಕುಳೂರು, ಅನಿಲ್ ಕುಮಾರ್ ಕೊಡ್ಲಮೊಗರು, ಬಾಬು ಶೆಟ್ಟಿಗಾರ್ ಕಂಗುಮೆ, ಸಾಮಾಜಿಕ ಕಾರ್ಯಕರ್ತರಾದ ಕೆ. ನಾರಾಯಣ ನಾಯ್ಕ್ ನಡುಹಿತ್ಲು ಕುಳೂರು, ಕೃಷ್ಣಪ್ಪ ಪೂಜಾರಿ ಬಡಾಜೆ, ಹರೀಶ್ ಸುವರ್ಣ ಹೊಸಬೆಟ್ಟು, ರವೀಂದ್ರ ಪೂಜಾರಿ ಕಡಂಬಾರ್ ಭಂಡಾರ ಮನೆ, ರಾಜೇಶ್ ಅಂಗಡಿಪದವು ಮೊದಲಾದವರು ಉಪಸ್ಥಿತರಿದ್ದರು.


