ಮಂಜೇಶ್ವರ: ತಲಪಾಡಿಯಿಂದ ಮೊಗ್ರಾಲ್ ತನಕ ರಾಷ್ಟ್ರೀಯ ಹೆದ್ದಾರಿಯ ಗುಂಡಿಗಳನ್ನು ಮುಚ್ಚುವ ತಾತ್ಕಾಲಿಕ ಕಾಮಗಾರಿಗೆ ಬುಧವಾರ ಬೆಳಿಗ್ಗೆ ವಿದ್ಯುಕ್ತವಾಗಿ ಆರಂಭಗೊಂಡಿತು.
ರಾಷ್ಟ್ರೀಯ ಹೆದ್ದಾರಿ ದುರವಸ್ಥೆಯ ಬಗ್ಗೆ ಮಾಧ್ಯಮಗಳು ಮಂಗಳವಾರ ಸಮಗ್ರವಾದ ವರದಿಯ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಮಂಗಳವಾರ ಕಾಸರಗೋಡು ಜಿಲ್ಲಾ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿಯವರು ಜಿಲ್ಲಾ ಪಂ. ನಲ್ಲಿ ಹದೆಗೆಟ್ಟ ಹೈವೇ ದುರಸ್ತಿಗೊಳಿಸಲು ಟೈಂ ಟೇಬಲ್ ನಿರ್ಣಯಿಸುವ ಬದಲು ಸಮರೋಪಾದಿಯಲ್ಲಿ ತುರ್ತಾಗಿ ಹೈವೇ ದುರಸ್ಥಿ ಕಾರ್ಯ ಅರಂಭಿಸುವಂತೆ ಆಗ್ರಹಿಸಿ ಜಿಲ್ಲಾ ಪಂ. ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಠರಾವು ಮಂಡಿಸಿದ್ದರು.
ಸಭೆಯಲ್ಲಿ ಮಂಡಿಸಿದ ಠರಾವಿಗೆ ಆರೋಗ್ಯ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಶಾನವಾಸ್ ಪಾದೂರು ಅನುಮೋದಿಸಿದರು. ಠರಾವನ್ನು ಸರ್ವಾನುಮತದಿಂದ ಅಂಗೀಕರಿಸಿ ಸರ್ಕಾರಕ್ಕೆ ತುರ್ತಾಗಿ ರವಾನಿಸಲಾಗಿತ್ತು. ಈ ನಿಟ್ಟಿನಲ್ಲಿ ಬುಧವಾರ ಬೆಳಿಗ್ಗೆಯೇ ತಾತ್ಕಾಲಿಕ ಕಾಮಗಾರಿ ಆರಂಭಗೊಂಡಿದೆ.
ತುರ್ತು ಕಾಮಗಾರಿ ವೀಕ್ಷಿಸಲು ಜನಪ್ರತಿನಿಧಿಗಳಾದ ಹರ್ಷಾದ್ ವರ್ಕಾಡಿ, ಮುಕ್ತಾರ್ ಎ. ಮೊದಲಾದವರು ಸ್ಥಳಕ್ಕಾಗಮಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಕೇರಳ- ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿ ಯಿಂದ ಆರಂಭಿಸಿ ಕಾಸರಗೋಡಿನ ತನಕ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಹೊಂಡ ಗುಂಡಿ ನಿರ್ಮಾಣವಾಗಿದ್ದು, ಇನ್ನು ಕೆಲವೆಡೆ ಗದ್ದೆಯಂತಾಗಿ ಹೊಂಡಗುಂಡಿ ಸೃಷ್ಟಿಯಾಗಿರುವುದರಿಂದ ಸುಗಮ ವಾಹನ ಸಂಚಾರಕ್ಕೆ ಪದೇ ಪದೇ ಅಡ್ಡಿ ಆತಂಕ ಎದುರಾಗುತ್ತಿದೆ.
ರಸ್ತೆ ಪೂರ್ಣ ತೋಡಾಗಿ ಮಾರ್ಪಾಡುಗೊಂಡಿದೆ. ಹೊಂಡಗಳೇ ಇರುವುದರಿಂದ ವಾಹನ ಪ್ರಯಾಣಿಕರಿಗೆ ದೋಣಿಯಲ್ಲಿ ಸಂಚರಿಸುವಾಗ ಉಂಟಾಗುವ ಅನುಭವವಾಗುತ್ತಿದೆ. ಕ್ಷಣ ಕ್ಷಣವೂ ಅಪಾಯ ಎದುರಾಗುತ್ತಿದೆ. ಕೆಲವು ಕ್ಷಣ ಚಾಲಕನ ಶ್ರದ್ಧೆ ತಪ್ಪಿದರೂ ಅಪಾಯ ತಪ್ಪಿದಲ್ಲ ಹಾಗೂ ಕಾಸರಗೋಡು ಮಂಗಳೂರಿಗೆ ಸಂಚರಿಸುವ ಕೇರಳ ಸಾರಿಗೆ ಬಸ್ಸುಗಳ ಪೈಕಿ ಈಗಾಗಲೇ ಹತ್ತು ಬಸ್ಸುಗಳ ಸೇವೆಗಳನ್ನು ಮೊಟಕುಗೊಳಿಸಿರುವುದಲ್ಲದೆ ಕೆಲವೊಂದು ಖಾಸಗಿ ಬಸ್ಸು ಹಾಗೂ ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ಅಟೋ ರಿಕ್ಷಾಗಳು ಸೇವೆಯನ್ನು ನಿಲ್ಲಿಸಿರುವುದರಿಂದ ಜನಸಾಮಾನ್ಯರಿಗೆ ತೀವ್ರ ಸಂಕಷ್ಟ ತಲೆದೋರಿತ್ತು.


