ಬದಿಯಡ್ಕ: ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳ 59ನೇ ಚಾತುರ್ಮಾಸ್ಯ ವ್ರತಾಚರಣೆಯು ಜು.25 ರಿಂದ ಸ.14ರ ವರೆಗೆ ಎಡನೀರು ಶ್ರೀಸಂಸ್ಥಾನದಲ್ಲಿ ನಡೆಯುತ್ತಿದ್ದು, ಆ.25 ರಿಂದ ಪ್ರತಿನಿತ್ಯ ಸಂಜೆ 7 ರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ಮಂಗಳವಾರ ಸಂಜೆ ಭಜನಾ ಸಂಕೀರ್ತನೆ, ಶ್ರೀಗಳಿಂದ ಸಂದೇಶ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಬಳಿಕ ಖ್ಯಾತ ಯಕ್ಷಗಾನ ಕಲಾವಿದ ಲಕ್ಷ್ಮಣಕುಮಾರ್ ಮರಕಡ ನಿರ್ದೇಶನದಲ್ಲಿ ಶ್ರೀಕೃಷ್ಣ ಲೀಲಾಮೃತ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು. ಬುಧವಾರ ಶ್ರೀಎಡನೀರು ಮಠಾಧೀಶರ ನಿರ್ದೇಶನದಲ್ಲಿ ಎಡನೀರು ಶ್ರೀಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿಯವರಿಂದ ಸುದರ್ಶನ-ಭಾರ್ಗವ ವಿಜಯ ಯಕ್ಷಗಾನ ಪ್ರದರ್ಶನ ನಡೆಯಿತು. ಇಂದು(ಗುರುವಾರ) ಸಂಜೆ 7 ರಿಂದ ಲಯ ಲಹರಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ವಿದ್ವಾನ್ ಎಂ.ಕೆ.ಪ್ರಾಣೇಶ್ ಬೆಂಗಳೂರು(ಕೊಳಲು), ವಿದ್ವಾನ್ ವಿ.ಎಸ್.ಯಶಸ್ವಿ ಬೆಂಗಳೂರು(ಪಿಟೀಲು), ವಿದ್ವಾನ್ ಅನೂರು ಅನಂತಕೃಷ್ಣ ಶರ್ಮ ಬೆಂಗಳೂರು ಮತ್ತು ಶಿಷ್ಯವೃಂದದವರಿಂದ ತಾಳವಾದ್ಯ ಪ್ರದರ್ಶನ ನಡೆಯಲಿದೆ.



