ಮುಳ್ಳೇರಿಯ: ಮುಳಿಯಾರು ಕೋಟೂರಿನ ಯಕ್ಷತೂಣೀರ ಸಂಪ್ರತಿಷ್ಠಾನ ಮತ್ತು ಯಕ್ಷಬಳಗ ಮುಳಿಯಾರು ಇವರ ಸಹಯೋಗದಲ್ಲಿ ಯಕ್ಷಗಾನ ಸಭಾಲಕ್ಷಣ ತರಬೇತಿ ಶಿಬಿರವು ಕೋಟೂರಿನಲ್ಲಿರುವ ಸ್ಕಂದ ಸಂಸ್ಥೆಯ ವಠಾರದಲ್ಲಿ ಭಾನುವಾರ ಸಂಪನ್ನಗೊಂಡಿತು.
ದೀಪ ಪ್ರಜ್ವಲನ, ಪ್ರಾರ್ಥನೆಯೊಂದಿಗೆ ಶಿಬಿರವು ಆರಂಭವಾಯಿತು. ಕೃಷ್ಣ ಭಟ್ ಅಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದ ಉದ್ದೇಶ, ಮುಂದಿನ ಕಾರ್ಯಯೋಜನೆಗಳ ಬಗ್ಗೆ ಮಾಹಿತಿಗಳನ್ನಿತ್ತು ಸ್ವಾಗತಿಸಿದರು.
ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಸುಪ್ರಸಿದ್ಧ ಯಕ್ಷಗಾನ ಕಲಾವಿದರೂ ಯಕ್ಷಗಾನ ತರಬೇತಿದಾರರೂ ಆಗಿರುವ ದಿವಾಣ ಶಿವಶಂಕರ ಭಟ್ ಇವರು ತರಬೇತಿಯನ್ನು ಸಮಗ್ರವಾಗಿ ಪರಿಣಾಮಕಾರಿಯಾಗಿ ನಡೆಸಿದರು. ಯಕ್ಷಗಾನದ ಬಯಲಾಟದ ಪರಂಪರಾಗತ ಶಾಸ್ತ್ರೀಯ ಕ್ರಮಗಳಾದ ಸ್ತುತಿ ಹಾಡಿನ ಕುಣಿತಾಭಿನಯ, ಕೋಡೆಂಗಿ ವೇಷ, ನಿತ್ಯವೇಷ, ಮುಖ್ಯಸ್ತ್ರೀವೇಷ, ಸಾಂಪ್ರದಾಯಿಕ ಒಡ್ಡೋಲಗ ಮೊದಲಾದ ಪೂರ್ವರಂಗ ಸಭಾಲಕ್ಷಣ ಇವುಗಳನ್ನು ತರಬೇತಿಯಲ್ಲಿ ಮಾರ್ಗದರ್ಶನ ನೀಡಲಾಯಿತು. ಭಾಗವತರಾಗಿ ಕಟೀಲು ಮೇಳದ ಸುಪ್ರಸಿದ್ಧ ಭಾಗವತರಾಗಿರುವ ಪುಂಡಿಕಾೈ ಗೋಪಾಲಕೃಷ್ಣ ಭಟ್, ತಲ್ಪಣಾಜೆ ಶಿವಶಂಕರ ಭಟ್, ಹಿಮ್ಮೇಳದಲ್ಲಿ ಈಶ್ವರ ಮಲ್ಲ, ಈಶ್ವರ ಭಟ್ ಬಳ್ಳಮೂಲೆ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದರು.
ಡಾ ಶಿವಕುಮಾರ ಅಡ್ಕ, ಗೋವಿಂದ ಬಳ್ಳಮೂಲೆ, ಹರಿಕೃಷ್ಣ, ವಿಜಯಮುರಳಿ. ವೇಣುಗೋಪಾಲ ತತ್ವಮಸಿ ಸಹಕರಿಸಿದರು. ಮುರಳಿ ಸ್ಕಂದ ವಂದಿಸಿದರು.


