ಮಂಜೇಶ್ವರ: ಮಂಜೇಶ್ವರ ಕುಂಡುಕೊಳಕೆ ಬೀಚ್ ಪರಿಸರದಿಂದ ರಾತ್ರಿ 8 ರಿಂದ ಮುಂಜಾನೆ 5 ರ ತನಕ ಎಗ್ಗಿಲ್ಲದೆ ಸಾಗುತ್ತಿರುವ ಅನಧಿಕೃತ ಮರಳು ಸಾಗಾಟವನ್ನು ತಡೆಯಲು ಪರಿಸರ ವಾಸಿಗಳು ಕಾನೂನು ಪಾಲಕಲ್ಲಿ ಅದೆಷ್ಟೋ ಬಾರಿ ಮನವಿಯ ಮೂಲಕ ವಿನಂತಿಸಿಕೊಂಡಿದ್ದರೂ ಈ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಕಾನೂನು ಪಾಲಕರ ವಿರುದ್ದ ಆಕ್ರೋಶಗೊಂಡ ಸ್ಥಳೀಯರು ಶುಕ್ರವಾರ ಮುಂಜಾನೆ ಯುವಕರು, ವೃದ್ದರೂ, ಮಹಿಳೆಯರ ಸಹಿತ ಮರಳು ಸಾಗಾಟ ಮಾಡುತ್ತಿರುವ ಟಿಪ್ಪರ್ ಲಾರಿಗಳನ್ನು ತಡೆಹಿಡಿದ ಘಟನೆ ನಡೆದಿದೆ.
ಈ ಸಂದರ್ಭ ರೊಚ್ಚಿಗೆದ್ದ ಮರಳು ಮಾಫಿಯಾಗಳ ತಂಡ ಮಾರಕಾಯುಧಗಳಿಂದ ಊರವರನ್ನು ಆಕ್ರಮಿಸಲು ಮುಂದಾದರು. ಜೊತೆಗೆ ಸ್ಥಳೀಯ ನಿವಾಸಿ ಜಿನೇವಾ ಎಂಬವರ ಮನೆಯ ಗೇಟನ್ನು ಮುರಿದು ಹಾಕಿ ಅವರಿಗೆ ಹಲ್ಲೆಗೈದಿರುವುದಾಗಿ ದೂರಲಾಗಿದೆ. ತಡೆ ಹಿಡಿದ 5 ವಾಹನಗಳ ಪೈಕಿ ನಾಲ್ಕು ಟಿಪ್ಪರ್ ಲಾರಿಗಳನ್ನು ಬಲ ಪ್ರಯೋಗಿಸಿ ಕೊಂಡೊಯ್ದು ಸ್ಥಳೀಯರಿಗೆ ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.
ಮಂಜೇಶ್ವರ ಕುಂಡುಕೊಳಕೆ ಬೀಚ್ ಪರಿಸರದಿಂದ ನಂಬ್ರ ಪ್ಲೇಟ್ ಅಳವಡಿಸದ ಟಿಪ್ಪರ್ ಲಾರಿ ಹಾಗೂ ಪಿಕಪ್ ವಾಹನಗಳಲ್ಲಿ ಪ್ರತಿನಿತ್ಯ ರಾತ್ರಿ 50 ಲೋಡ್ ಮರಳು ಸಾಗಾಟವಾಗುತ್ತಿರುವುದಾಗಿ ಊರವರು ಹೇಳುತಿದ್ದಾರೆ.
ತಿಂಗಳ ಹಿಂದೆ ಮಂಜೇಶ್ವರ ಠಾಣೆಯ ಹಿರಿಯ ಅಧಿಕಾರಿಯೊಬ್ಬರ ಮುಂದಾಳತ್ವದಲ್ಲಿ ಅನಧಿಕೃತ ಮರಳು ಸಾಗಾಟವನ್ನು ತಡೆಯಲು ಸಮಿತಿಯೊಂದನ್ನು ರೂಪೀಕರಿಸಲಾಗಿತ್ತು. ಆದರೆ ಇದೀಗ ಅದೇ ಅಧಿಕಾರಿ ಮರಳು ಮಾಫಿಯಾಗಳಿಂದ ಲಂಚವನ್ನು ಪಡೆದು ಮರಳು ಅಕ್ರಮ ಸಾಗಾಟಕ್ಕೆ ಸಾಥ್ ನೀಡುತ್ತಿರುವುದಾಗಿ ಊರವರು ಆರೋಪಿಸುತಿದ್ದಾರೆ. ದಿನನಿತ್ಯ ಭಾರೀ ಮೊತ್ತದ ಹಣ ಮಂಜೇಶ್ವರ ಪೊಲೀಸರಿಗೆ ನೀಡಿ ಮರಳು ಸಾಗಾಟದ ಹಾದಿಯನ್ನು ಸುಗಮಗೊಳಿಸುತ್ತಿರುವುದಾಗಿ ಊರವರು ಆರೋಪಿಸಿದ್ದಾರೆ.
ಕಡಲ್ಕೊರೆತದಿಂದ ಹಲವಾರು ಮನೆಗಳು ಕಡಲು ಪಾಲಾಗುತ್ತಿರುವುದು ದಿನ ನಿತ್ಯದ ದೃಶ್ಯವಾಗಿದ್ದರೂ ಕುಂಡುಕೊಳಕೆ ಬೀಚ್ ಪರಿಸರದಿಂದ ತೆಗೆದ ಮರಳಿನಿಂದಾಗಿ ಅಲ್ಲಲ್ಲಿ ಆಳವಾದ ಹೊಂಡ ಸೃಷ್ಟಿಯಾಗಿದೆ. ಇದೆಲ್ಲವನ್ನೂ ಕಂಡೂ ಕಾಣದಂತೆ ನಟಿಸುತ್ತಿರುವ ಕಾನೂನು ಪಾಲಕರ ವಿರುದ್ದ ನಾಗರಿಕ ವಲಯದಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಶುಕ್ರವಾರ ಮುಂಜಾನೆ ಊರವರು ತಡೆದ 5 ವಾಹನಗಳ ಪೈಕಿ ಒಂದು ಮಾತ್ರ ಅಲ್ಲಿ ಉಳಿದಿದ್ದು ಅದನ್ನು ಊರವರು ಮಂಜೇಶ್ವರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಂಜೇಶ್ವರದ ವಿವಿಧ ಭಾಗಗಳಲ್ಲಿ ಅನಧಿಕೃತ ಮರಳು ಸಾಗಾಟ ವ್ಯಾಪಕವಾಗಿದೆ. ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸದೇ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟಕ್ಕೆ ಮುಂದಾಗುವುದಾಗಿ ಊರವರು ಎಚ್ಚರಿಕೆ ನೀಡಿದ್ದಾರೆ.



